ಬೆಂಗಳೂರು,ಸೆ.1:
ಗ್ಯಾರಂಟಿ ಯೋಜನೆಗಳ ಭರವಸೆ ಮೂಲಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಇದೀಗ ಈ ಯೋಜನೆಗಳ ಅನುಷ್ಠಾನಕ್ಕಾಗಿ ಲಭ್ಯವಿರುವ ಸಂಪನ್ಮೂಲ ಕ್ರೂಢೀಕರಿಸಲು ಪರದಾಡುತ್ತಿದೆ.
ಸಂಪನ್ಮೂಲ ಕೊರತೆಯಿಂದಾಗಿ ಎಲ್ಲಾ ಫಲಾನುಭವಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಪರದಾಡುತ್ತಿರುವ ರಾಜ್ಯ ಸರ್ಕಾರ ಇದೀಗ ಹೊಸ, ಹೊಸ ಮಾರ್ಗಗಳ ಮೂಲಕ ಫಲಾನುಭವಿಗಳ ಸಂಖ್ಯೆಯನ್ನು ಕಡಿತಗೊಳಿಸಲು ಮುಂದಾಗಿದೆ.
ಗೃಹಜ್ಯೋತಿ ಯೋಜನೆಯಡಿ ಮಾಸಿಕ 200 ಯೂನಿಟ್ ವರೆಗೆ ವಿದ್ಯುತ್ ಬಳಸುವ ಫಲಾನುಭವಿ ಗ್ರಾಹಕರಿಗೆ ವಿದ್ಯುತ್ ಶುಲ್ಕ ಇರುವುದಿಲ್ಲ. ಹೀಗಾಗಿ ಗ್ರಾಹಕರು ಸರಾಸರಿ ಮೂರು ತಿಂಗಳವರೆಗೆ ಬಳಸಿದ ವಿದ್ಯುತ್ತನ್ನು ಮಾನದಂಡವಾಗಿಟ್ಟುಕೊಂಡು ಪ್ರತಿ ತಿಂಗಳಿಗೆ ಗರಿಷ್ಠ ಬಳಕೆ ಮಿತಿಯನ್ನು ವಿಧಿಸಲಾಗಿದೆ.
ಹೀಗಾಗಿ ಫಲಾನುಭವಿ ಗ್ರಾಹಕರು ತಾನು ಬಳಸುವ ವಿದ್ಯುತ್ ಮಿತಿಯನ್ನು ದಾಟಿದ ನಂತರ 200 ಯೂನಿಟ್ ವಿದ್ಯುತ್ ನವರೆಗೆ ಹೆಚ್ಚುವರಿ ಬಳಕೆಗೆ ಮಾತ್ರ ಶುಲ್ಕ ನೀಡಬೇಕು ಅದನ್ನು ಬಿಟ್ಟು ಇನ್ನೂರು ಯೂನಿಟ್ ದಾಟಿದ ನಂತರ ಪೂರ್ಣ ಪ್ರಮಾಣದ ಶುಲ್ಕ ಭರಿಸಬೇಕಾಗಿದೆ.
ಉಚಿತ ವಿದ್ಯುತ್ ಪಡೆಯಲು ಗ್ರಾಹಕರು ಅನುಸರಿಸಿದ ಮಾರ್ಗವನ್ನು ಬಳಸಿಕೊಂಡು ಇದೀಗ ಬಿಪಿಎಲ್ ಕಾರ್ಡ್ ಪರಿಷ್ಕರಣೆಗೆ ಮುಂದಾಗಿದೆ ರಾಜ್ಯದಲ್ಲಿ ದೇಶದಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿವೆ ಎಂದು ಹೇಳಿರುವ ಆಹಾರ ಸಚಿವ ಕೆಎಚ್ ಮುನಿಯಪ್ಪ ಇವುಗಳನ್ನು ಪರಿಷ್ಕರಣೆ ಮಾಡುವುದಾಗಿ ತಿಳಿಸಿದ್ದರು.
ಇದೀಗ ಕಾರ್ಡು ಪರಿಷ್ಕರಣೆಗೆ ಹೊಸ ನಿಯಮವೊಂದನ್ನು ಅಳವಡಿಸಿಕೊಳ್ಳಲಾಗಿದೆ ಇದರ ಅನ್ವಯ ಇನ್ನು ಮುಂದೆ ಮಾಸಿಕ 150 ಯೂನಿಟ್ ವಿದ್ಯುತ್ ಬಳಸುವ ಗ್ರಾಹಕರನ್ನು ಬಿಪಿಎಲ್ ವ್ಯಾಪ್ತಿಯಿಂದ ಹೊರಗಿಡಲಾಗುತ್ತದೆ.
ರಾಜ್ಯ ಸರ್ಕಾರ ಹೊರಡಿಸಿರುವ ಹೊಸ ಆದೇಶದಲ್ಲಿ ಬಿಪಿಎಲ್ ಪಡಿತರ ಚೀಟಿ ಪರಿಷ್ಕರಣೆಯ ಸಮಯದಲ್ಲಿ ಕಾರ್ಡುದಾರ ಕುಟುಂಬವು ಮಾಸಿಕ 150 ಯೂನಿಟ್ ವಿದ್ಯುತ್ ಬಳಕೆ ಮಾಡಿದರೆ ಅವರಿಗೆ ಬಿಪಿಎಲ್ ಕಾರ್ಡ್ ಅನ್ವಯ ದೊರೆಯುತ್ತಿರುವ ಉಚಿತ ಪಡಿತರ ಸೇರಿದಂತೆ ಎಲ್ಲ ಸೌಲಭ್ಯಗಳು ಸ್ಥಗಿತಗೊಳ್ಳಲಿದೆ.
ಈ ಮೂಲಕ ನೂರ ಮಾಸಿಕ 150 ಯೂನಿಟ್ ವಿದ್ಯುತ್ ಬಳಸುವ ಗ್ರಾಹಕರನ್ನು ಬಿಪಿಎಲ್ ಎಂದು ಪರಿಗಣಿಸದಿರಲು ನಿರ್ಧಾರ ಕೈಗೊಂಡಿದೆ.
ಬಿಪಿಎಲ್ ವ್ಯಾಪ್ತಿಯಿಂದ ಕುಟುಂಬಗಳನ್ನು ಹೊರಗಿಡಲು ಸರ್ಕಾರಿ ನೌಕರ, 3 ಹೆಕ್ಟರಿಗಿಂತ ಹೆಚ್ಚಿನ ಪ್ರಮಾಣದ ಜಮೀನಿರುವ ಕುಟುಂಬ, ಒಂದಕ್ಕಿಂತ ಹೆಚ್ಚು ವಾಣಿಜ್ಯ ಬಳಕೆ ವಾಹನಗಳನ್ನು ಹೊಂದಿರುವ ಕುಟುಂಬಗಳನ್ನು ಪರಿಗಣಿಸಲಾಗುತ್ತಿತ್ತು ಅದರ ಸಾಲಿಗೆ ಇದೀಗ ಮಾಸಿಕ 150 ಯೂನಿಟ್ ವಿದ್ಯುತ್ ಬಳಸುವ ಕುಟುಂಬಗಳು ಸೇರ್ಪಡೆಯಾಗಲಿವೆ.