ಬೆಂಗಳೂರು.
ರಾಜ್ಯ ಯುವ ಕಾಂಗ್ರೆಸ್ ಗೆ ನೂತನ ಸಾರಥಿ ನೇಮಕವಾಗಿದ್ದಾರೆ. ಆಗಸ್ಟ್ 20ರಿಂದ ಸೆಪ್ಟೆಂಬರ್ 22ರ ವರೆಗೆ ನಡೆದಿದ್ದ ಯುಶ ಕಾಂಗ್ರೆಸ್ ಚುನಾವಣೆಯಲ್ಲಿ ರಾಜ್ಯಾದ್ಯತ ಮತದಾನ ನಡೆದಿತ್ತು.
ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಂಬಲಿತ ಅಭ್ಯರ್ಥಿ ಎಚ್.ಎಸ್.ಮಂಜುನಾಥ್ ಮತ್ತು ಲೋಕೋಪಯೋಗಿ ಮಂತ್ರಿ ಸತೀಶ್ ಜಾರಕಿಹೊಳಿ ಹಾಗೂ ಸಹಕಾರ ಮಂತ್ರಿ ಕೆಎನ್ ರಾಜಣ್ಣ ಅವರ ಬೆಂಬಲಿತ ದೀಪಿಕಾ ರೆಡ್ಡಿ ನಡುವೆ ಭಾರಿ ಪೈಪೋಟಿ ಏರ್ಪಟ್ಟಿತ್ತು.
ಈ ಜಿದ್ದಾಜಿದ್ದಿನ ಹಣಹಣಿಯಲ್ಲಿ 5,67,343 ಮತಗಳನ್ನು ಪಡೆಯುವ ಮೂಲಕ ಎಚ್.ಎಸ್.ಮಂಜುನಾಥ್ ಮೊದಲ ಸ್ಥಾನ ಪಡೆದುಕೊಂಡರು.ದೀಪಿಕಾ ರೆಡ್ಡಿ 2,95,705 ಮತಗಳನ್ನು ಪಡೆದು ಎರಡನೇ ಸ್ಥಾನ ಗಳಿಸಿದರು.
ಮತ್ತೊಬ್ಬ ಅಭ್ಯರ್ಥಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಅಬ್ದುಲ್ ರಹಮಾನ್ 45,968 ಮತ ಗಳಿಸಿ ಮೂರನೇ ಸ್ಥಾನ ಪಡೆದರು.
ಎಐಸಿಸಿ ಚುನಾವಣೆ ಸಮಿತಿ ನಿಯಮದ ಪ್ರಕಾರ ಅತಿ ಹೆಚ್ಚು ಮತ ಪಡೆದ ಮೂವರು ಅಭ್ಯರ್ಥಿಗಳನ್ನು ದೆಹಲಿಗೆ ಕರೆಸಿಕೊಂಡು ಸಂದರ್ಶನ ನಡೆಸಲಾಯಿತು ಅದರಂತೆ ಅತಿ ಹೆಚ್ಚು ಮತ ಗಳಿಸಿ ಸಂದರ್ಶನದಲ್ಲೂ ಗೆಲುವು ಸಾಧಿಸಿದ ಎಚ್ಎಸ್ ಮಂಜುನಾಥ್ ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ದೀಪಿಕಾ ರೆಡ್ಡಿ ಮತ್ತು ಅಬ್ದುಲ್ ರೆಹಮಾನ್ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಭಾರಿ ಬಹುಮತದಿಂದ ಆಯ್ಕೆಯಾಗಿರುವ ಮಂಜುನಾಥ್ ಈ ಮೊದಲು ಎರಡು ಬಾರಿ ವಿದ್ಯಾರ್ಥಿ ಕಾಂಗ್ರೆಸ್ ಅಧ್ಯಕ್ಷರಾಗಿ ಸಂಘಟನೆಯಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ ಆನಂತರ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಬಳಿಕ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡುವ ಮೂಲಕ ಸಂಘಟನೆಯಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ.
ಯುವ ಕಾಂಗ್ರೆಸ್ ವಲಯದಲ್ಲಿ ಅತಿ ಹೆಚ್ಚು ಚಟುವಟಿಕೆಯಿಂದ ಬೆರೆಯುವ ಮೂಲಕ ಜನಪ್ರಿಯ ನಾಯಕರಾಗಿ ಹೊರಹೊಮ್ಮಿರುವ ಎಚ್ಎಸ್ ಮಂಜುನಾಥ್ ಮುಂದೆ ಇದೀಗ ದೊಡ್ಡ ಸವಾಲುಗಳಿದ್ದು ಅವುಗಳನ್ನೆಲ್ಲ ತಮ್ಮ ಚಾಣಾಕ್ಷತನದಿಂದ ಮೆಟ್ಟಿ ನಿಲ್ಲುವ ಮೂಲಕ ಸಂಘಟನೆಗೆ ಹೊಸ ರೂಪ ನೀಡಬಲ್ಲರು ಎಂಬ ವಿಶ್ವಾಸ ಕಾಂಗ್ರೆಸ್ ನಾಯಕರಲ್ಲಿ ಇದೆ.