ಕಾಮಗಾರಿಗಳ ಬಿಲ್ ಮೊತ್ತ ಬಿಡುಗಡೆಗೆ ಶೇಕಡ 40ರಷ್ಟು ಲಂಚಕ್ಕೆ ಬೇಡಿಕೆ ಇಟ್ಟಿರುವುದಾಗಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ವಿರುದ್ಧ ಆರೋಪ ಮಾಡಿ ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಈಶ್ವರಪ್ಪ ವಿರುದ್ದ ಎಫ್ ಐ ಆರ್ ದಾಖಲಾಗಿದೆ.
ಮೃತ ಸಂತೋಷ್ ಪಾಟೀಲ್ ಸೋದರ ಪ್ರಶಾಂತ್ ಪಾಟೀಲ್ ಉಡುಪಿ ನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದು ಇದರ ಆಧಾರದಲ್ಲಿ ಸಚಿವ ಈಶ್ವರಪ್ಪ ವಿರುದ್ದ ಐಪಿಸಿ ಕಲಂ 306 ರ ಅಡಿಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಈಶ್ವರಪ್ಪ ಅವರೊಂದಿಗೆ ಅವರ ಆಪ್ತ ಸಹಾಯಕರಾದ ಬಸವರಾಜ್, ರಮೇಶ್ ಸೇರಿದಂತೆ ಹಲವರನ್ನು ಎಫ್ ಐ ಆರ್ ನಲ್ಲಿ ಸಹ ಆರೋಪಿಗಳೆಂದು ಹೆಸರಿಸಲಾಗಿದೆ.
ಪ್ರಶಾಂತ್ ಪಾಟೀಲ್ ಸಲ್ಲಿಸಿರುವ ದೂರಿನಲ್ಲಿ ತಮ್ಮ ಸೋದರ ಹಿಂದೂ ವಾಹಿನಿ ಸಂಘಟನೆಯ ಕಾರ್ಯಕರ್ತನಾಗಿದ್ದು, ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ .ಅಷ್ಟೇ ಅಲ್ಲ ಸಚಿವ ಈಶ್ವರಪ್ಪ ಅವರಿಗೂ ಆಪ್ತನಾಗಿದ್ದು, ಬೆಳಗಾವಿಯ ಹಿಂಡಲಗಾ ಗ್ರಾಮದಲ್ಲಿ ಲಕ್ಷ್ಮಿದೇವಿ ಜಾತ್ರೆ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯ ರಸ್ತೆಗಳ ನಿರ್ಮಾಣ ಸೇರಿದಂತೆ 108 ಕಾಮಗಾರಿಗಳನ್ನು ನಡೆಸಿದ್ದರು.
ಇವುಗಳಿಗೆ ಸಂಬಂಧಿಸಿದಂತೆ ಒಟ್ಟು ₹ 4 ಕೋಟಿ ವೆಚ್ಚದ ಬಿಲ್ ಸಿದ್ದ ಪಡಿಸಿ ಅವುಗಳನ್ನು ಸಚಿವರಿಗೆ ನೀಡಿ ಕಾಮಗಾರಿಗೆ ಅನುಮೋದನೆ ನೀಡುವಂತೆ ಮನವಿ ಮಾಡಿದ್ದ.ಇದಕ್ಕೆ ಪ್ರತಿಯಾಗಿ ಸಚಿವರು ತಮ್ಮ ಆಪ್ತ ಸಹಾಯಕರ ಜೊತೆ ಮಾತನಾಡುವಂತೆ ತಿಳಿಸಿದ್ದರು.ಅದರಂತೆ ತಮ್ಮ ಸೋದರ ಸಚಿವರ ಆಪ್ತ ಸಹಾಯಕರ ಜೊತೆ ಮಾತನಾಡಿದಾಗ ಅವರು ಶೇ.40 ರಷ್ಟು ಕಮೀಷನ್ ಗೆ ಬೇಡಿಕೆಯಿಟ್ಟಿದ್ದರು.ಇದರಿಂದ ಬೇಸರಗೊಂಡ ಆತ ಬಿಜೆಪಿ ಹಿರಿಯ ನಾಯಕರಿಗೆ ದೂರು ಸಲ್ಲಿಸಿದ್ದ, ಜೊತೆಗೆ ಪತ್ರಿಕಾಗೋಷ್ಟಿ ನಡೆಸಿ ತಮಗೇನಾದರೂ ಆದರೆ ಸಚಿವರೆ ಹೊಣೆ ಎಂದು ಹೇಳಿದ್ದ .ಈ ಎಲ್ಲಾ ವಿವರವನ್ನು ತಮಗೆ ಮತ್ತವನ ಪತ್ನಿ ಜಯಾಗೆ ತಿಳಿಸಿದ್ದ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಇದರ ಆಧಾರದಲ್ಲಿ ಉಡುಪಿ ಠಾಣೆ ಪೊಲೀಸರು ಸಚಿವ ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.