ಸಿಎಂ ಬಸವರಾಜ ಬೊಮ್ಮಾಯಿ ಅವರ ಸಂಪುಟ ವಿಸ್ತರಣೆ ಅಥವ ಪುನಾರಚನೆ ಗಜಪ್ರಸವವಾದಂತಾಗಿದೆ. ಸಂಪುಟದಲ್ಲಿ ಉಳಿದಿರುವ ಐದು ಸ್ಥಾನಗಳನ್ನು ಭರ್ತಿ ಮಾಡಲು ಸಿಎಂ ಮನಸ್ಸು ಮಾಡಿದರೂ ಅದಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ. ಸದ್ಯ ಸಂಪುಟ ವಿಸ್ತರಣೆಯೋ ಪುನಾರಚನೆಯೋ ಎಂಬ ಸ್ಪಷ್ಟನೆ ಕೂಡಾ ಮುಖ್ಯಮಂತ್ರಿಗೆ ಸಿಕ್ಕಿಲ್ಲ.
ಈ ಪ್ರಕ್ರಿಯೆಗೆ ಎದುರಾಗಿರುವ ಅಡೆತಡೆಗಳೇನು ಎಂದು ಪ್ರಶ್ನೆ ಇದೀಗ ಸಹಜವಾಗಿ ಉದ್ಭವಾಗಿದೆ. ಸಿಎಂ ಬೊಮ್ಮಾಯಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಆದರೆ ಸಂಪುಟ ವಿಸ್ತರಣೆ ಬಗ್ಗೆ ನಡ್ಡಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಲಾಗುತ್ತಿದೆ.
ಭಾನುವಾರ ಸಂಪುಟ ಸರ್ಜರಿ ಬಗ್ಗೆ ವಿಶ್ವಾಸ ಹೊಂದಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಇದಕ್ಕೆ ವರಿಷ್ಟರ ಅನುಮೋದನೆ ಪಡೆದುಕೊಳ್ಳಲು ಒಂದೆರಡು ದಿನಗಳಲ್ಲಿ ದೆಹಲಿಗೆ ಹೋಗುವುದಾಗಿ ಹೇಳಿದ್ದರು.ಆದರೆ ಇದೀಗ ಸಂಪೂರ್ಣ ವರಸೆ ಬದಲಾಯಿಸಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಸಂಪುಟ ಸರ್ಜರಿ ವಿಷಯವಾಗಿ ಹೈಕಮಾಂಡ್ ನ ನಿರಾಸಕ್ತಿ. ಹೀಗಾಗಿ ಮುಖ್ಯಮಂತ್ರಿ ಬೊಮ್ಮಾಯಿ ಸಂಪುಟ ಕುರಿತಾದ ಚಟುವಟಿಕೆ ಬಿಟ್ಟು ಪಕ್ಷ ಸಂಘಟನೆಯತ್ತ ಗಮನ ಹರಿಸಿದ್ದಾರೆ.
ಹೈಕಮಾಂಡ್ ನ ಈ ನಿರ್ಧಾರಕ್ಕೆ ಪ್ರಮುಖ ಕಾರಣ ಸರ್ಕಾರದ ವಿರುದ್ದ ಕೇಳಿ ಬರುತ್ತಿರುವ ಜನಾಭಿಪ್ರಾಯ. ಭಾವನಾತ್ಮಕ ವಿಷಯಗಳನ್ನಿಟ್ಟುಕೊಂಡು ನಡೆಯುತ್ತಿರುವ ಕೆಲವು ಬೆಳವಣಿಗೆಗಳನ್ನು ಹೊರತುಪಡಿಸಿದರೆ, ಸರ್ಕಾರ ಮತ್ತು ಪಕ್ಷದ ವರ್ಚಸ್ಸು ವೃದ್ದಿಸುವಂತಹ ಯಾವುದೇ ವಿದ್ಯಮಾನ ರಾಜ್ಯದಲ್ಲಿ ನಡೆಯುತ್ತಿಲ್ಲ ಎಂಬ ವರದಿಗಳು ಹೈಕಮಾಂಡ್ ಅನ್ನು ತಲುಪಿವೆ.
ಪ್ರಧಾನಿ ಮೋದಿ ಅವರ ವರ್ಚಸ್ಸು ಹಾಗೂ ಭಾವನಾತ್ಮಕ ವಿಷಯಗಳಿಂದ ಮತ್ತೆ ಅಧಿಕಾರಕ್ಕೆ ಬರಬಹುದು ಎಂಬ ಭಾವನೆಯಲ್ಲಿರುವ ಸರ್ಕಾರ ಜನ ಮಾನಸದಲ್ಲಿ ಉಳಿಯುವಂತಹ ಯಾವುದೇ ಕೆಲಸ ಮಾಡಿಲ್ಲ ಹೀಗಾಗಿ ಸರ್ಕಾರಕ್ಕೆ ಯಾವ ವರ್ಚಸ್ಸೂ ಇಲ್ಲ ಎಂಬ ಆಂತರಿಕ ಸಮೀಕ್ಷಾ ವರದಿಗಳು ವರಿಷ್ಟರನ್ನು ಮುಟ್ಟಿವೆ.
ಈ ಎಲ್ಲವನ್ನೂ ಹೊಸಪೇಟೆಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಪ್ರಸ್ತಾಪಿಸಿ ಜೆ.ಪಿ.ನಡ್ಡಾ ಸರ್ಕಾರ ಹಾಗೂ ಪಕ್ಷದ ವರ್ಚಸ್ಸು ವೃದ್ದಿಸುವ ಕಡೆ ಗಮನ ಹರಿಸಿ ಎಂದು ಕಿವಿಮಾತು ಹೇಳಿದ್ದರು.
ಮುಖ್ಯಮಂತ್ರಿಯೊಂದಿಗಿನ ಮಾತುಕತೆಯ ಸಮಯದಲ್ಲೂ ಇದನ್ನೇ ಪ್ರಸ್ತಾಪಿಸಿದ್ದ ನಡ್ಡಾ ಸರ್ಕಾರದ ವರ್ಚಸ್ಸು ಋಣಾತ್ಮಕವಾಗಿದೆ ಭ್ರಷ್ಟಾಚಾರದ ಆರೋಪಗಳು ಜನರನ್ನು ಮುಟ್ಟಿವೆ.ಮೊದಲು ಈ ಅಂಶವನ್ನು ತೊಡೆದುಹಾಕಿ ಜನರಲ್ಲಿ ಸರ್ಕಾರ ಮತ್ತು ಪಕ್ಷದ ಪರ ಅಭಿಪ್ರಾಯ ವ್ಯಕ್ತವಾಗುವಂತೆ ನೋಡಿ ನಂತರ ಸಂಪುಟ ಸರ್ಜರಿ ಸೇರಿ ಹಲವು ವಿಷಯಗಳ ಬಗ್ಗೆ ಹೈಕಮಾಂಡ್ ನಿರ್ಧಾರ ಪ್ರಕಟಿಸಲಿದೆ ಎಂದರೆನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಇದೀಗ ರಾಜ್ಯ ಪ್ರವಾಸದತ್ತ ಗಮನ ಹರಿಸಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ ಜಿಲ್ಲಾ ಪ್ರವಾಸ ಹೋಗುತ್ತಿದ್ದೇನೆ. ಇಂದು ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲಾ ಪ್ರವಾಸವಿದೆ. ಇಂದು ಶೃಂಗೇರಿ ಮತ್ತು ಹರಿಹರಪುರಕ್ಕೆ ಹೋಗುತ್ತಿದ್ದೇನೆ. ಶಿವಮೊಗ್ಗದಲ್ಲಿ ಪಾರ್ಟಿಯ ವಿವಿಧ ಸಂಘಟನೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ. ನಾಳೆ ಕಲಬುರಗಿ ಜಿಲ್ಲೆಯ ಭೇಟಿಯಿದೆ. ಹಲವಾರು ಅಭಿವೃದ್ಧಿ ಜೊತೆಗೆ ಪಕ್ಷದ ಸಂಬಂಧಿಸಿದಂತೆ ಕಾರ್ಯಕ್ರಮವಿದೆ ಎಂದು ತಿಳಿಸಿದರು.
ಸಚಿವ ಸಂಪುಟ ವಿಸ್ತರಣೆ, ವರಿಷ್ಠರು ಒಪ್ಪಿಗೆ ಕೊಟ್ಟಾಗ ಆಗುತ್ತದೆ. ಅದಕ್ಕಿಂತ ಹೆಚ್ಚಾಗಿ ನಾನು ರಾಜ್ಯದ ಅಭಿವೃದ್ಧಿ ಕಡೆ ಹೆಚ್ಚು ಗಮನ ಕೊಡುತ್ತೇನೆ, ವರಿಷ್ಠರು ಕರೆದಾಗ ದೆಹಲಿಗೆ ಹೋಗಿ ಮಾತುಕತೆ ನಡೆಸುತ್ತೇನೆ. ಅವರು ಯಾವ ದಿನಾಂಕದಂದು ಬರಬೇಕು ಎಂಬುದರ ಬಗ್ಗೆ ನನಗೆ ಸೂಚನೆ ಕೊಟ್ಟಿಲ್ಲ. ಹೋಗುವಾಗ ಮಾಧ್ಯಮಗಳಿಗೆ ಖಂಡಿತವಾಗಿಯೂ ಮಾಹಿತಿ ನೀಡಿಯೇ ಹೋಗುತ್ತದೆ ಎಂದರು.
ಸಂಪುಟ ವಿಸ್ತರಣೆಗಿಂತ ಹೆಚ್ಚಾಗಿ ಮೊದಲು ನನಗೆ ರಾಜ್ಯದ ಅಭಿವೃದ್ಧಿ ಕಡೆ ಹೆಚ್ಚು ಗಮನ ನೀಡಬೇಕು. ಕರ್ನಾಟಕವನ್ನು ಎಲ್ಲಾ ಕ್ಷೇತ್ರಗಳಲ್ಲೂ ಮೊದಲ ಸ್ಥಾನಕ್ಕೆ ಕೊಡಯ್ಯಬೇಕು ಎಂಬುದು ನಮ್ಮ ಸರ್ಕಾರದ ಹೆಗ್ಗುರಿಯಾಗಿದೆ. ಇದು ನಮ್ಮ ದೊಡ್ಡ ಸಂಕಲ್ಪವೂ ಹೌದು ಎಂದು ತಿಳಿಸಿದರು.
Previous Articleಬೆಂಗಳೂರಲ್ಲಿ ಕ್ರೀಡಾ ಜ್ವರ..
Next Article ತಮಿಳುನಾಡಿನಲ್ಲಿ ದಾಖಲೆ ಬರೆದ ಕನ್ನಡದ ಕೆಜಿಎಫ್ 2