ಬೆಂಗಳೂರು,ಡಿ.10-
ನಾಡು ಕಂಡ ಶ್ರೇಷ್ಠ ಮುತ್ಸದ್ಧಿ,ಮಾಜಿ ಮುಖ್ಯಮಂತ್ರಿ, ಅಪರೂಪದ ನಾಯಕ, ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ ಇಹಲೋಕ ಯಾತ್ರೆ ಮುಗಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರದ ಸ್ವಗೃಹದಲ್ಲಿ ನಿಧನರಾದ ಅವರಿಗೆ 93 ವರ್ಷ ವಯಸ್ಸಾಗಿತ್ತು.
ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಿದೆ. ಮೃತರ ಗೌರವಾರ್ಥ ನಾಳೆ ಸರ್ಕಾರಿ ರಜೆ ಘೋಷಿಸಲಾಗಿದೆ.
ಮೃತರ ಅಂತ್ಯಕ್ರಿಯೆಯನ್ನು ಬುಧವಾರ ಅವರ ಹುಟ್ಟುರಾದ ಮಂಡ್ಯ ಜಿಲ್ಲೆಯಲ್ಲಿ ಸಕಲ ಸರ್ಕಾರಿ ಗೌವರಗಳೊಂದಿಗೆ ನೆರವೇರಿಸಲಾಗುವುದು’ ಎಂದು ರಾಜ್ಯ ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಿದೆ.
1932 ಮೇ.1ರಂದು ಮಲ್ಲಯ್ಯ ಮತ್ತು ತಾಯಮ್ಮ ದಂಪತಿಯ ಮಗನಾಗಿ ಮದ್ದೂರು ತಾಲೂಕು ಸೋಮನಹಳ್ಳಿಯಲ್ಲಿ ಜನಿಸಿದ ಎಸ್.ಎಂ.ಕೃಷ್ಣ
ಸೋಮನಹಳ್ಳಿ ಪ್ರಾಥಮಿಕ ಶಿಕ್ಷಣ, ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ಪ್ರೌಢಶಿಕ್ಷಣ, ಯುವರಾಜ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಹಾಗೂ ಮಹಾರಾಜ ಕಾಲೇಜಿನಲ್ಲಿ ಕಾನೂನು ಪದವಿ ಶಿಕ್ಷಣ, ಅಮೆರಿಕಾದ ಡಲ್ಲಾಸ್‌ನ ಸೌಥರ್ನ್ ಮೆತಡಿಸ್ಟ್ ಹಾಗೂ ಜಾರ್ಜ್ ವಾಷಿಂಗ್ಟನ್ ವಿವಿಯಲ್ಲಿ ಉನ್ನತ ವ್ಯಾಸಂಗ ಮಾಡಿದ್ದರು.
1962ರಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯಿಂದ ಚುನಾವಣಾ ರಾಜಕೀಯ ಆರಂಭ, ಮೊದಲ ಚುನಾವಣೆಯಲ್ಲಿ ಗೆಲುವು ಕಂಡ ಎಸ್.ಎಂ.ಕೃಷ್ಣ, 1967 ರ ವಿಧಾನಸಭಾ ಚುನಾವಣೆಯಲ್ಲಿ ಸೋಲುತ್ತಾರೆ.
1968ರ ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ತಮ್ಮ ಛಾಪು ಮೂಡಿಸಿದರು. 1971ರಲ್ಲಿ ಸಂಸದರಾಗಿ ಮರು ಆಯ್ಕೆಯಾದ ಇವರನ್ನು ಅಂದಿನ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ಕೊಡಿಸಿ ರಾಜ್ಯದಲ್ಲಿ ಸಚಿವರನ್ನಾಗಿ ಮಾಡುತ್ತಾರೆ. ಇದರಿಂದಾಗಿ ಅವರು ವಿಧಾನ ಪರಿಷತ್ ಸದಸ್ಯರಾಗಿ ನೇಮಕಗೊಳ್ಳುತ್ತಾರೆ.
ಮತ್ತೆ 1980ರಲ್ಲಿ ಲೋಕಸಭೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಆಯ್ಕೆಯಾಗುತ್ತಾರೆ. ಮೂರನೇ ಬಾರಿಗೆ ಎಂಪಿಯಾದ ಅವರಿಗೆ ಕೇಂದ್ರ ಹಣಕಾಸು ಸಚಿವರಾಗುವ ಅವಕಾಶ ಲಭಿಸಿತು.
1984ರ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡ ಇವರು 1989ರಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದು ಉಪ ಮುಖ್ಯಮಂತ್ರಿ ಹಾಗೂ ಸ್ಪೀಕರ್ ಹುದ್ದೆ ಅಲಂಕರಿಸುತ್ತಾರೆ.
1994ರ ವಿಧಾನಸಭೆ ಚುನಾವಣೆಯಲ್ಲಿ ಪರಾಜಯ ಹೊಂದಿದ ಎಸ್ ಎಂ ಕೃಷ್ಣ, 1996ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು ಬಳಿಕ ರಾಜ್ಯಸಭಾ ಸದಸ್ಯರಾಗಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಳ್ಳುತ್ತಾರೆ.
ಇವರ ನಾಯಕತ್ವದಲ್ಲಿ ಕಾಂಗ್ರೆಸ್ 1999ರಲ್ಲಿ ಗೆಲುವು ಸಾಧಿಸುತ್ತದೆ.ಬಳಿಕ ರಾಜ್ಯದ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡುತ್ತಾರೆ. 2004ರ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರು ಚಾಮರಾಜಪೇಟೆಯಿಂದ ಸ್ಪರ್ಧಿಸಿ ಗೆಲುವು ಸಾಧಿಸುತ್ತಾರೆ.
ಪಕ್ಷಕ್ಕೆ ಇವರು ನೀಡಿದ ಕೊಡುಗೆ ಗಮನಿಸಿದ ಹೈಕಮಾಂಡ್ 2004 ರಿಂದ 2008ರವರೆಗೆ ಮಹಾರಾಷ್ಟ್ರದ ರಾಜ್ಯಪಾಲರಾಗಿ ಸೇವೆ ಸಲ್ಲಿಸುವ ಅವಕಾಶ ಕಲ್ಪಿಸುತ್ತದೆ.
2010ರಲ್ಲಿ ಮತ್ತೆ ಸಕ್ರಿಯ ರಾಜಕಾರಣ ಪ್ರವೇಶಿಸುವ ಅವರಿಗೆ ಕಾಂಗ್ರೆಸ್ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಲು ಅವಕಾಶ ನೀಡುತ್ತದೆ. ಆನಂತರ ಡಾ.ಮನ್‌ಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಕೇಂದ್ರ ವಿದೇಶಾಂಗ ಸಚಿವರಾಗಿ ಕಾರ್ಯ ನಿರ್ವಹಿಸುತ್ತಾರೆ.
2017ರಲ್ಲಿ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರ್ಪಡೆಯಾಗುವ ಅವರು,ಕೆಲ ತಿಂಗಳಲ್ಲೇ ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಣೆ ಮಾಡಿದರು.
Previous Articleಸಮಚಿತ್ತದ ಮಾರ್ಗದರ್ಶಿ ಕಳೆದುಕೊಂಡ ಶಿವಕುಮಾರ್.
Next Article ಭ್ರಷ್ಟ ಅಧಿಕಾರಿಗಳ ಬೆವರು ಹರಿಸಿದ ಲೋಕಾಯುಕ್ತ.