ಬೆಂಗಳೂರು:
ರಾಜ್ಯ ರಾಜಕೀಯದಲ್ಲಿ ಸೆಪ್ಟೆಂಬರ್ ಕ್ರಾಂತಿಯ ಸದ್ದು ಕೇಳಿ ಬರುತ್ತಿರುವ ಬೆನ್ನಲ್ಲೇ ಬೆಳಗಾವಿ ಜಿಲ್ಲೆಯಲ್ಲಿ ಜಾರಕಿಹೊಳಿ ಸಹೋದರರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಕುತೂಹಲ ಕೆರಳಿಸಿದ್ದಾರೆ.
ರಾಜಕೀಯ ಸೇರಿದಂತೆ ಹಲವಾರು ವಿಷಯಗಳಲ್ಲಿ ರಮೇಶ್ ಮತ್ತು ಸತೀಶ್ ಜಾರಕಿಹೊಳಿ ಉತ್ತರ ಮುಖಿ, ದಕ್ಷಿಣ ಮುಖಿಯಂತೆ ಇದ್ದವರು ಇದೀಗ ಸಾರ್ವಜನಿಕವಾಗಿ ಮುಖಾಮುಖಿಯಾಗುವ ಮೂಲಕ ಹಲವು ರಾಜಕೀಯ ಚರ್ಚೆಗೆ ಗ್ರಾಸವಾಗಿದ್ದಾರೆ.
ಗೋಕಾಕ್ ನಲ್ಲಿ 10 ವರ್ಷದ ಬಳಿಕ ನಡೆಯಲಿರುವ ಲಕ್ಷ್ಮೀದೇವಿ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಸ್ಥಳೀಯ ಶಾಸಕ ರಮೇಶ್ ಜಾರಕಿಹೊಳಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.
ಆರಂಭದಲ್ಲಿ ಇಬ್ಬರು ಪರಸ್ಪರ ಮಾತನಾಡದೆ ತಮಷ್ಟಕ್ಕೆ ತಾವು ಎಂಬಂತೆ ಇದ್ದರು. ಆದರೆ ವಿಷಯಾಧಾರಿತವಾಗಿ ಒಬ್ಬರಿಗೊಬ್ಬರು ಪೂರಕವಾಗಿ ಬೆಂಬಲಿಸಿದ್ದಾರೆ.ಜಿಲ್ಲಾಧಿಕಾರಿ ಜಾತ್ರೆಯ ಪೂರ್ವ ಸಿದ್ಧತೆಗಳ ಬಗ್ಗೆ ವಿವರಣೆ ನೀಡಿದ್ದಾರೆ. ಜನ ಜಂಗುಳಿಯನ್ನು ನಿಯಂತ್ರಿಸಲು ಅಗತ್ಯ ಸಿಬ್ಬಂದಿ ನಿಯೋಜನೆ, ವಾಹನ ನಿಲುಗಡೆ ವ್ಯವಸ್ಥೆ ಸೇರಿದಂತೆ ಎಲ್ಲಾ ತಯಾರಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ವೇಳೆ ಸ್ಥಳೀಯ ಕಾಂಗ್ರೆಸ್ ಮುಖಂಡ ಮಹಾಂತೇಶ್ ಕಡಾಡಿ, ಬ್ಯಾನರ್ ಅಳವಡಿಕೆ ಸಂಬಂಧಪಟ್ಟಂತೆ ಆಕ್ರೋಶ ವ್ಯಕ್ತ ಪಡಿಸಿದ್ದು, ಜಾರಕಿಹೊಳಿ ಕುಟುಂಬದವರು, ಅವರ ಬೆಂಬಲಿಗರು ಹಾಗೂ ಜಾತ್ರಾ ಸಮಿತಿಗೆ ಮಾತ್ರ ಬ್ಯಾನರ್ ಅಳವಡಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಆಕ್ಷೇಪಿಸಿದರು.
ಇದು ಸಣ್ಣ ವಿಚಾರ ನಾವೇ ಬಗೆ ಹರಿಸುತ್ತೇವೆ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು. ಆದರೂ ಸಮಾಧಾನಗೊಳ್ಳದೆ ಮಹಾಂತೇಶ್ ಕಡಾಡಿ, ನಗರ ಸಭೆ ಅಧಿಕಾರಿಗಳು ಫ್ಲೆಕ್ ಮತ್ತು ಬ್ಯಾನರ್ ಅಳವಡಿಕೆಗೆ ಅವಕಾಶ ನಿರಾಕರಿಸುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಿಗೂ ಅನುಮತಿ ನೀಡಿಲ್ಲ ಎಂದು ದೂರಿದರು.
ಅನುಮತಿ ನಿರಾಕರಿಸಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಇಂತಹ ವಿಚಾರದಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ನೀವು ಮಾಡುವುದಾದರೆ ನಾವೇನು ಮಾಡಲಾಗದು ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು.
ನಿಯಮ ಅನುಸಾರ ಫ್ಲೆಕ್ಸ್ ಬ್ಯಾನರ್ ಅಳವಡಿಕೆ ಅವಕಾಶ ಇಲ್ಲ. ಅಧಿಸೂಚಿತ ಪ್ರದೇಶದಲ್ಲಿ ಅವಕಾಶ ಇದೆ. ಆದರೆ ಇದನ್ನು ದೊಡ್ಡದು ಮಾಡುವ ಅಗತ್ಯ ಇಲ್ಲ. ನಮ ಹಂತದಲ್ಲೇ ಸರಿ ಪಡಿಸುತ್ತೇವೆ ಎಂದು ಜಿಲ್ಲಾಧಿಕಾರಿ ಸಮಾಧಾನ ಪಡಿಸಲು ಯತ್ನಿಸಿದ್ದಾರೆ.ಜಾತ್ರೆ ಯಾವುದೇ ಪಕ್ಷಕ್ಕೆ ಸೇರಿಲ್ಲ. ಎಲ್ಲರಿಗೂ ಫ್ಲೆಕ್ಸ್ , ಬ್ಯಾನರ್ ಅಳವಡಿಸಲು ಅವಕಾಶ ನೀಡುವಂತೆ ಸಚಿವ ಸತೀಶ್ ಜಾರಕಿಹೊಳಿ ಸೂಚನೆ ನೀಡಿದರು.
ಬ್ಯಾನರ್ ಗದ್ದಲದ ಹೊರತಾಗಿ ರಮೇಶ್ ಜಾರಕಿಹೊಳಿ ಹಾಗೂ ಸತೀಶ್ ಜಾರಕಿಹೊಳಿ ನಡುವೆ ಅಪರೋಕ್ಷವಾದ ಅನ್ಯೋನ್ಯತೆ ಕಂಡು ಬಂದಿತ್ತು.
ಪರಸ್ಪರ ಒಬ್ಬರಿಗೊಬ್ಬರು ಬೆಂಬಲವಾಗಿ ಮಾತನಾಡುತ್ತಿದ್ದರು. ಗಂಭೀರ ವಿಚಾರಗಳಲ್ಲಿ ರಮೇಶ್ ಜಾರಕಿಹೊಳಿ ಸಚಿವರ ಸೂಚನೆ ಮೇರೆ ಕ್ರಮ ಕೈಗೊಳ್ಳಿ ಎಂದು ಹೇಳುತ್ತಿದ್ದರೆ, ರಮೇಶ್ ಜಾರಕಿಹೊಳಿ ಹೇಳಿದ್ದಕ್ಕೆ ಸತೀಶ್ ಜಾರಕಿಹೊಳಿ ತಲೆ ಆಡಿಸುತ್ತಿದ್ದರು.ನೇರವಾಗಿ ಒಬ್ಬರಿಗೊಬ್ಬರು ಮಾತನಾಡದಿದ್ದರೂ, ಇಬ್ಬರ ನಡುವಿನ ಹೊಂದಾಣಿಕೆ ಮೇಲ್ನೋಟಕ್ಕೆ ಗಮನ ಸೆಳೆದಿತ್ತು.
Previous Articleದೀಪಕ್ ತಿಮ್ಮಯ ಅವರಿಗೆ ಕೆಂಪೇಗೌಡ ಪ್ರಶಸ್ತಿ
Next Article ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೆ.ಜೆ.ಜಾರ್ಜ್.