ಕರ್ನಾಟಕ ಸಂಸ್ಥಾಪನಾ ದಿನ ಅಥವಾ ಕರ್ನಾಟಕ ದಿನ ಎಂದೂ ಕರೆಯಲ್ಪಡುವ ಕನ್ನಡ ರಾಜ್ಯೋತ್ಸವವನ್ನು ನವೆಂಬರ್ 1 ರಂದು ಪ್ರತಿ ವರ್ಷ ಆಚರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಚದುರಿ ಹೋಗಿದ್ದ ಕನ್ನಡ ಭಾಷಿಕರನ್ನು, ಪ್ರದೇಶಗಳನ್ನು 1956 ರಲ್ಲಿ ಒಗ್ಗೂಡಿಸಿ ಒಂದು ರಾಜ್ಯವಾಗಿ ಅಸ್ತಿತ್ವಕ್ಕೆ ತಂದ ದಿನ. 2024ಕ್ಕೆ ಕರ್ನಾಟಕ ಮರು ನಾಮಕರಣವಾಗಿ 51 ವರ್ಷಗಳು ಕಳೆದಿದ್ದು ಕನ್ನಡ ರಾಜ್ಯೋತ್ಸವವನ್ನು ಈ ಬಾರಿಯೂ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಶಾಲೆ ಕಾಲೇಜು ಕಚೇರಿಗಲ್ಲಿ ಕನ್ನಡ ದ್ವಜವನ್ನು (ಕೆಂಪು ಮತ್ತು ಹಳದಿ ಬಣ್ಣದ ದ್ವಜ)ದ್ವಜಾರೋಹಣ ಮಾಡುವ ಮೂಲಕ ರಾಷ್ಟ್ರ ಕವಿ ಕುವೆಂಪು ವಿರಚಿತ ‘ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ’ ಹಾಡನ್ನು ಹಾಡುವ ಮೂಲಕ ತಾಯಿ ಭುವನೇಶ್ವರಿ ದೇವಿಗೆ (ಕನ್ನಡಾಂಬೆ)ಗೆ ಗೌರವ ಸಲ್ಲಿಸಲಾಗುತ್ತದೆ.
ಕರ್ನಾಟಕ ಸರ್ಕಾರ ಸಹ 2023 ರಿಂದ ಕನ್ನಡ ರಾಜ್ಯೋತ್ಸವ ದಿನ ಕೆಳಗಿನ 5 ಹಾಡುಗಳನ್ನು ಕಡ್ಡಾಯವಾಗಿ ಹಾಡಬೇಕು ಎಂದು ಆದೇಶ ನೀಡಿದೆ.
- ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು – ಹುಯಿಳಗೋಳ ನಾರಾಯಣ ರಾಯರು
- ಎಲ್ಲಾದರೂ ಇರು ಎಂತಾದರು ಇರು – ಕುವೆಂಪು
- ಒಂದೇ ಒಂದೇ ಕರ್ನಾಟಕ ಒಂದೇ – ದ. ರಾ. ಬೇಂದ್ರೆ
- ಹೊತ್ತಿತೋ ಹೊತ್ತಿತು ಕನ್ನಡದ ದೀಪ – ಸಿದ್ದಯ್ಯ ಪುರಾಣಿಕ
- ಹೆಸರಾಯಿತು ಕರ್ನಾಟಕ – ಚನ್ನವೀರ ಕಣವಿ.
ಕರ್ನಾಟಕ ಸರ್ಕಾರದ ವತಿಯಿಂದ ವಿವಿಧ ಕ್ಷೇತ್ರಗಳ ಆಯ್ದ ಗಣ್ಯರಿಗೆ ಕರ್ನಾಟಕದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಈ ಸಮಯದಲ್ಲಿ ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾಯರು ಕನ್ನಡಕ್ಕಾಗಿ ಮಾಡಿದ ಹೋರಾಟವನ್ನು ಮರೆಯುವಂತಿಲ್ಲ.
ಕರ್ನಾಟಕದ ಇತಿಹಾಸ
ಮಹಾತ್ಮಾ ಗಾಂಧಿ, ನೆಹರು, ವಲ್ಲಭ್‌ಭಾಯಿ ಪಟೇಲ್ ಸೇರಿದಂತೆ ಅನೇಕ ಪ್ರಮುಖರ ಹೋರಾಟದ ದಿಸೆಯಿಂದ ಭಾರತಕ್ಕೆ ಸ್ವಾತಂತ್ರ್ಯ ಒದಗಿತು. 1950ರಲ್ಲಿ ಭಾರತವು ಗಣರಾಜ್ಯವಾದ ನಂತರ ಭಾರತದ ವಿವಿಧ ಪ್ರಾಂತ್ಯಗಳು, ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪುಗೊಂಡವು. ಈ ಹಿಂದೆ ರಾಜರ ಆಳ್ವಿಕೆಯಲ್ಲಿ ಚದುರಿ ಹೋಗಿದ್ದ ಕನ್ನಡ ಮಾತನಾಡುವ ಪ್ರಾಂತ್ಯಗಳು ಒಂದುಗೂಡಿ ಮೈಸೂರು ರಾಜ್ಯವು ಉದಯವಾಯಿತು.
1956 ರ ನವೆಂಬರ್ 1 ರಂದು, ಮದ್ರಾಸ್, ಮುಂಬಯಿ, ಹೈದರಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡ ಮೈಸೂರು ರಾಜ್ಯ ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆಯ ಮೈಸೂರು ಎಂಬುದಾಗಿ ಹೊಸದಾಗಿ ರೂಪುಗೊಂಡ ಮೈಸೂರು ರಾಜ್ಯವನ್ನು ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು.
ಹೊಸದಾಗಿ ಏಕೀಕೃತಗೊಂಡ ರಾಜ್ಯಕ್ಕೆ ಮೈಸೂರು ರಾಜ್ಯ ಎನ್ನುವ ಹೆಸರನ್ನೇ ಆರಂಭದಲ್ಲಿ ಉಳಿಸಿಕೊಂಡರು. ಆದರೆ ಉತ್ತರ ಕರ್ನಾಟಕದ ಜನರ ಮೈಸೂರು ರಾಜ್ಯ ಎನ್ನುವುದನ್ನು ಒಪ್ಪದೇ ಇದ್ದಾಗ ಅವರ ಮಾತಿಗೂ ಮಾನ್ಯತೆ ನೀಡಿ, ನವೆಂಬರ್ 1, 1973 ರಂದು ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಬದಲಿಸಲಾಯಿತು.
ಈ ಸಂದರ್ಭದಲ್ಲಿ ದೇವರಾಜ ಅರಸ್ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿದ್ದು ಕರ್ನಾಟಕ ಏಕೀಕರಿಸಿದ ಹೆಗ್ಗಳಿಕೆ ಇವರದಾಗಿದೆ. ಕರ್ನಾಟಕ ಏಕೀಕರಣದ ಮನ್ನಣೆ ಅನಕೃ, ಕೆ. ಶಿವರಾಮ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಎ.ಎನ್ . ಕೃಷ್ಣರಾವ್ ಮತ್ತು ಬಿ.ಎಂ. ಶ್ರೀಕಂಠಯ್ಯ ಇತರ ಪ್ರಮುಖ ವ್ಯಕ್ತಿಗಳಿಗೂ ಸೇರುತ್ತದೆ.
ಕನ್ನಡದ ಬಾವುಟ
ಕರು ನಾಡು ಕಪ್ಪು ಮಣ್ಣಿನ ನಾಡು – ಕರ್ನಾಟಕದ ಸಂಕೇತವಾಗಿ ಹಳದಿ ಹಾಗೂ ಕೆಂಪು ಬಣ್ಣದ ಬಾವುಟವಿದೆ. ಕನ್ನಡದ ಬಾವುಟ ಕೇವಲ ಬಣ್ಣದ ಬಾವುಟವಲ್ಲ, ಅದು ಕನ್ನಡಿಗರ ಭಾವೈಕ್ಯತೆಯ ಸಂಕೇತ.
ಸ್ವತಂತ್ರ್ಯದ ನಂತರ ಬೆಂಗಳೂರಿನಲ್ಲಿ ಅನ್ಯ ಭಾಷಿಕರ ಪ್ರಾಭಲ್ಯ ಬಲಿಷ್ಠವಾಗಿತ್ತು. ಅಂತಹ ಸ್ಥಿತಿಯಲ್ಲಿ ಕನ್ನಡಿಗರ ಸ್ವಾಭಿಮಾನ ಎತ್ತಿ ಹಿಡಿಯಲು ಕನ್ನಡ ಬಾವುಟವನ್ನು ರಚಿಸಿದವರು ಎಂ. ರಾಮಮೂರ್ತಿ ಅವರು. ಇವರು ಗಾಂಧೀಜಿಯವರ ವಿಚಾರಧಾರೆಗಳಿಂದ ಚಳುವಳಿಯ ಹಾದಿಹಿಡಿದ ಸೀತಾರಾಮಶಾಸ್ತ್ರಿ ಅವರ ಮಗ.
1965ರಲ್ಲಿ ರಾಜಕೀಯ ಪಕ್ಷ ಕನ್ನಡ ಪಕ್ಷಕ್ಕೆ ಬಾವುಟವಾಗಿ ಅದನ್ನು ಹುಟ್ಟು ಹಾಕಲಾಯಿತು, ಇಂದು ಅದು ಕನ್ನಡಿಗರ ಅಸ್ಮಿತೆಯಾಗಿದೆ.
ಕನ್ನಡ ಅಥವಾ ಕರ್ನಾಟಕದ ಧ್ವಜ 2 ಬಣ್ಣಗಳನ್ನು ಒಳಗೊಂಡಿದ್ದು ಈ ಧ್ವಜವನ್ನು ಎರಡು ಸಮತಲ ಭಾಗಗಳಾಗಿ ಮಾಡಲಾಗಿದ್ದು ಕೆಂಪು ಮತ್ತು ಹಳದಿ ಬಣ್ಣವನ್ನು ಹೊಂದಿದೆ. ಇವೆರಡು ಬಣ್ಣಗಳಿಗೆ ಭಾರತದ ಸಂಸ್ಕೃತಿಯಲ್ಲಿ ಅನಾದಿ ಕಾಲದಿಂದಲೂ ವಿಶೇಷ ಪ್ರತಿನಿತ್ಯವನ್ನು ಹೊಂದಿದೆ.
ಕೆಂಪು ಬಣ್ಣ ಮಂಗಳ,ಅಭಿವೃದ್ಧಿಯ ಸಂಕೇತ, ಅರಿಶಿನ ಬಣ್ಣ ಯೋಗಕ್ಷೇಮ ಆರೋಗ್ಯಕರ ಸಮಾಜದ ಸಂಕೇತವಾಗಿದೆ.
ಹಳದಿ ಬಣ್ಣವು ಶಾಂತಿಯನ್ನು ಮತ್ತು ಕೆಂಪು ಬಣ್ಣವು ಧೈರ್ಯವನ್ನು ಸೂಚಿಸುತ್ತದೆ.ಅಷ್ಟೇ ಅಲ್ಲ, ನಾವು ಕನ್ನಡಿಗರು ಕ್ರಾಂತಿಗೂ ಸೈ, ಶಾಂತಿಗೂ ಸೈ ಎಂಬ ಸಂದೇಶವನ್ನೂ ಸೂಚಿಸುತ್ತದೆ.