ಬೆಂಗಳೂರು,ಏ.11-
ಈ ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಸರ್ಕಾರದ ಕಾಮಗಾರಿಗಳ ಗುತ್ತಿಗೆಗೆ ಶೇಕಡ 40ರಷ್ಟು ಕಮಿಷನ್ ಕೊಡಬೇಕಿತ್ತು ಎಂಬ ಆರೋಪಗಳ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಲು ತೀರ್ಮಾನಿಸಿದೆ
ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಈ ಆರೋಪಗಳ ಬಗ್ಗೆ ಪರಿಶೀಲನೆ ನಡೆಸಲು ನ್ಯಾಯಮೂರ್ತಿ ನಾಗ ಮೋಹನ್ ದಾಸ್ ನೇತೃತ್ವದಲ್ಲಿ ಆಯೋಗವನ್ನು ರಚಿಸಲಾಗಿತ್ತು. ಈ ಆಯೋಗ ಸರ್ಕಾರಕ್ಕೆ ವರದಿ ನೀಡಿದ್ದು ಅದರ ಬಗ್ಗೆ ಇಂದು ನಡೆದ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.
ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಎಚ್ ಕೆ ಪಾಟೀಲ್, ಗುತ್ತಿಗೆದಾರರು ಮಾಡಿದ ಶೇಕಡ 40ರಷ್ಟು ಕಮಿಷನ್ ಆರೋಪ ಕುರಿತು ನ್ಯಾಯಮೂರ್ತಿ ನಾಗಮೋಹನ್ ದಾಸ್ ನೀಡಿರುವ ವರದಿಯ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಗುತ್ತಿಗೆದಾರರು ಮಾಡಿದ ಆರೋಪದ ಬಗ್ಗೆ ಪರಿಶೀಲಿಸಲು ರಚಿಸಲಾಗಿದ್ದ ನ್ಯಾಯಮೂರ್ತಿ ನಾಗ ಮೋಹನ್ ದಾಸ್ ನೇತೃತ್ವದ ಆಯೋಗವು, ಆಯೋಗವು ಒಟ್ಟು ಮೂರು ಲಕ್ಷ ಕಾಮಗಾರಿಗಳ ಪೈಕಿ 1729 ಕಾಮಗಾರಿಗಳನ್ನು ಸ್ಯಾಂಪಲ್ ಆಗಿ ತೆಗೆದುಕೊಂಡು ಪರಿಶೀಲನೆ ನಡೆಸಿದೆ.
ಇವುಗಳಲ್ಲಿ ಹಲವು ವ್ಯತ್ಯಾಸಗಳು ಕಂಡುಬಂದಿವೆ ಪ್ರಮುಖವಾಗಿ ಅನುದಾನ ಮೀರಿ ಕೆಲವು ಯೋಜನೆಗಳನ್ನು ಕೈಗೊಳ್ಳಲಾಗಿದೆ ಅನುಮೋದನೆ ಇಲ್ಲದೆ ಕೆಲವು ಕಾಮಗಾರಿ ಮಾಡಲಾಗಿದೆ ಹಣ ಬಿಡುಗಡೆ ಸಮಯದಲ್ಲಿ ನಿಯಮಾವಳಿ ಪಾಲಿಸಲಾಗಿಲ್ಲ ಎಲ್ ಓ ಸಿ ಸೇರಿದಂತೆ ಹಲವು ವಿಷಯಗಳಲ್ಲಿ ಸಾಕಷ್ಟು ವ್ಯತ್ಯಾಸ ಇರುವುದನ್ನು ಆಯೋಗ ಪತ್ತೆ ಹಚ್ಚಿದೆ ಹೀಗಾಗಿ ಆಯೋಗ ಪಟ್ಟಿ ಮಾಡಿರುವ ಲೋಪಗಳ ಕುರಿತು ಹೆಚ್ಚಿನ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.