ಬೆಂಗಳೂರು, ಜ.3
ನಾಯಕತ್ವದ ಕೊರತೆಯಿಂದ ತತ್ತರಿಸಿರುವ ಜೆಡಿಎಸ್ ಶಾಸಕರು ಇದೀಗ ದೊಡ್ಡ ಪ್ರಮಾಣದಲ್ಲಿ ಪಕ್ಷಾಂತರಕ್ಕೆ ಸಜ್ಜುಗೊಂಡಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡ ಅವರು ವಯೋ ಸಹಜ ಕಾರಣದಿಂದಾಗಿ ಪಕ್ಷ ಸಂಘಟನೆಯಲ್ಲಿ ತೊಡಗಲು ಸಾಧ್ಯವಾಗುತ್ತಿಲ್ಲ.ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೇಂದ್ರ ಮಂತ್ರಿಯಾದ ನಂತರ ರಾಜ್ಯದ ಪಕ್ಷದ ವಿದ್ಯಮಾನಗಳ ಬಗ್ಗೆ ಅಷ್ಟಾಗಿ ಗಮನ ಹರಿಸುತ್ತಿಲ್ಲ. ತಮ್ಮ ಪುತ್ರರ ವಿರುದ್ಧ ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ ರೇವಣ್ಣ ಎಲ್ಲಿಯೂ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿಲ್ಲ.
ಶಾಸಕಾಂಗ ಪಕ್ಷದ ನಾಯಕರಾಗಿರುವ ಸುರೇಶ್ ಬಾಬು ಅಷ್ಟೊಂದು ಸಕ್ರಿಯವಾಗಿ ಕೆಲಸ ಮಾಡುತ್ತಿಲ್ಲ ಎಂದು ಬೇಸರಗೊಂಡಿರುವ ಶಾಸಕರು ಇದೀಗ ತಮ್ಮ ಭವಿಷ್ಯದ ಹೆಸರಲ್ಲಿ ಪಕ್ಷಾಂತರಕ್ಕೆ ಸಜ್ಜಾಗಿದ್ದಾರೆ ಎನ್ನಲಾಗಿದೆ.
ಈ ರೀತಿ ಆತಂಕದಲ್ಲಿರುವ ಶಾಸಕರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರತ್ಯೇಕವಾಗಿ ಸಂಪರ್ಕಿಸಿ ಕಾಂಗ್ರೆಸ್ ಸೇರುವಂತೆ ಆಹ್ವಾನ ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಾಜಿ ಮಂತ್ರಿ ಜಿ.ಟಿ.ದೇವೇಗೌಡ ಹಾಗೂ ಅವರ ಪುತ್ರ ಹುಣಸೂರು ಕ್ಷೇತ್ರದ ಶಾಸಕ ಜಿ.ಡಿ.ಹರೀಶ್ ದೇವದುರ್ಗ ಶಾಸಕಿ ಕರೆಮ್ಮಾ,ಶಿವಮೊಗ್ಗ ಗ್ರಾಮೀಣ ಶಾಸಕರಾದ ಶಾರದಾ ಪೂರ್ಯಾನಾಯಕ್, ಹನೂರು ಕ್ಷೇತ್ರದ ಶಾಸಕ ಮಂಜುನಾಥ್ ಯಾದಗಿರಿ ಕ್ಷೇತ್ರದ ಶಾಸಕ ಕುಂದಕೂರು ಸೇರಿದಂತೆ ಹಲವು ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಒಲವು ಹೊಂದಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರೆ ಎಲ್ಲರಿಗೂ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನದ ಜೊತೆಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿದ್ದು ಹಲವು ಶಾಸಕರು ಕಾಂಗ್ರೆಸ್ ಭರವಸೆ ಬಗ್ಗೆ ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಾಹಿತಿ ಪಡೆದಿರುವ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ತಮ್ಮ ಶಾಸಕರನ್ನು ಸಂಪರ್ಕಿಸಿ ಪಕ್ಷದಲ್ಲಿ ಉಳಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ ಎಂದು ಗೊತ್ತಾಗಿದೆ.
ಈ ಬೆಳವಣಿಗೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಕಾಂಗ್ರೆಸ್ ಆಪರೇಷನ್ ಹಸ್ತದ ದುಷ್ಪ್ರಯತ್ನ ಮಾಡುತ್ತಿದೆ. ಆದರೆ, ಅದು ವರ್ಕ್ ಆಗುವುದಿಲ್ಲ ಎಂದು ಹೇಳಿದರು.
ಜೆಡಿಎಸ್ ಮುಗಿಸಬೇಕು ಎಂದು 12 ಜನ ಶಾಸಕರನ್ನು ಕರೆದುಕೊಂಡು ಬನ್ನಿ, 13 ಜನರನ್ನು ಕರೆದುಕೊಂಡು ಬನ್ನಿ ಎನ್ನುವ ಷಡ್ಯಂತ್ರ ನಡೆಯುತ್ತಿದೆ. ಇದೆಲ್ಲವೂ ನನಗೆ ಗೊತ್ತಿದೆ. ನಮ್ಮ ಯಾವ ಶಾಸಕರು ಪಕ್ಷ ಬಿಟ್ಟು ಹೋಗುವ ಪರಿಸ್ಥಿತಿ ಇಲ್ಲ. ಕಾಂಗ್ರೆಸ್ ನವರು ಏನೇನು ಮಾಡುತ್ತಿದ್ದಾರೆ ಎನ್ನುವುದು ಗೊತ್ತಿದೆ. ಕಾಂಗ್ರೆಸ್ಸಿನವರ ಪಾಪದ ಕೊಡ ತುಂಬಿದೆ. ದೇವರೇ ಅವರಿಗೆ ಶಿಕ್ಷೆ ಕೊಡುತ್ತಾನೆ ಎಂದರು.
ಸಂಕ್ರಾಂತಿ ನಂತರ ರಾಜ್ಯ ರಾಜಕೀಯದಲ್ಲಿ ಕ್ರಾಂತಿ ಆಗುತ್ತದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವರು; ಕ್ರಾಂತಿ, ವಾಂತಿ ಬಗ್ಗೆ ನಾನು ಹೇಳೊದಿಲ್ಲ. ಎಲ್ಲವನ್ನು ಈಗಾಗಲೇ ನೋಡಿ ಆಗಿದೆ. ನಾನು ಇದ್ಯಾವುದರ ಬಗ್ಗೆಯೂ ಮಾತನಾಡುವುದಿಲ್ಲ ಎಂದರು.
ನಾನು ಕಾಂಗ್ರೆಸ್ ಶಾಸಕರಿಗೆ ಮನವಿ ಮಾಡುವುದು ಇಷ್ಟೇ.. ನಿಮ್ಮೆಲ್ಲರಿಗೂ ಆತ್ಮಸಾಕ್ಷಿ ಎನ್ನುವುದು ಇದ್ದರೆ ನಿಮ್ಮ ಪಕ್ಷದ ಸರಕಾರ ಹೋಗುತ್ತಿರುವ ಮಾರ್ಗ ಏನು? ಜನರಿಗೆ ನೀವೆಲ್ಲಾ ಏನು ಮಾತು ಕೊಟ್ಟು ಬಂದಿದ್ದೀರಿ? ಆ ಬಗ್ಗೆ ಯೋಚನೆ ಮಾಡಿ ಎಂದು ಹೇಳಿದರು
ನಿಮ್ಮ ಗ್ಯಾರಂಟಿಗಳು ಹಳ್ಳ ಹಿಡಿದು ಹೋಗಿವೆ. ಗ್ಯಾರಂಟಿ ಕೊಡುವುದಕ್ಕೆ ಪೈಪೋಟಿ ನಡೆಯುತ್ತಿದೆ. ಇಂತಹ ಗ್ಯಾರಂಟಿ ಕೊಟ್ಟಿದ್ದ ಹಿಮಾಚಲ ಪ್ರದೇಶ ಇವತ್ತು ಏನಾಗಿದೆ? ಕಾಂಗ್ರೆಸ್ ಶಾಸಕರು, ಮಂತ್ರಿಗಳು ನಿಮ್ಮ ಆತ್ಮಕ್ಕೆ ಪ್ರಶ್ನೆ ಹಾಕಿಕೊಳ್ಳಿ, ರಾಜ್ಯದಲ್ಲಿ ಏನೇನು ನಡೆಯುತ್ತಿದೆ ಎಂದು ಗಮನಿಸಿ. ರಾಜ್ಯವನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೀರಿ ಎಂದು ನೋಡಿ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು.
ನಮ್ಮ ಶಾಸಕರ ಬಗ್ಗೆ ನಮಗೆ ಆತಂಕ ಇಲ್ಲ. ಕಾಂಗ್ರೆಸ್ ಏನೆಲ್ಲಾ ಮಾಡುತ್ತಿದೆ ಎಂದು ನಮ್ಮ ಶಾಸಕರು ನನಗೆ ಹೇಳುತ್ತಿದ್ದಾರೆ. ನಮ್ಮ ಪಕ್ಷವನ್ನು ಭದ್ರ ಮಾಡಿಕೊಳ್ಳುವುದು ಹೇಗೆ ಎನ್ನುವುದು ಗೊತ್ತಿದೆ. ಜೆಡಿಎಸ್ ಪಕ್ಷವನ್ನು ಯಾವುದೇ ಶಾಕು.. ವೀಕು ಮಾಡಲು ಆಗುವುದಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.
Previous Articleವಿಧಾನ ಪರಿಷತ್ ಸದಸ್ಯರ ಹೆಸರಲ್ಲಿ ವಿಷ ಮಿಶ್ರಿತ ಲಡ್ಡು ರವಾನೆ.?
Next Article ಇಡಿ ಎಂದು ಬಂದ ತಂಡ ಮಾಡಿದ್ದೇನು.


1 ಟಿಪ್ಪಣಿ
Bouclier Apextrail Rezension
Der Bouclier Apextrail ist gepragt durch seine bahnbrechende und modernste Investitionsplattform fur Kryptowahrungen, die die Rechenkraft von Artificial Intelligence verwendet, um ihren Kunden wichtige Pluspunkte im Wettbewerb zu sichern.