ಬೆಂಗಳೂರು ಮಾ 14:
ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಐದು ವರ್ಷ ಪೂರೈಸಿರುವ ಡಿ.ಕೆ.ಶಿವಕುಮಾರ್ ಸಂಭ್ರಮಾಚರಣೆಯಲ್ಲಿ ನಿರತವಾಗಿರುವ ಬೆನ್ನಲ್ಲೇ ಹಲವು ರಾಜಕೀಯ ವಿದ್ಯಮಾನಗಳು ನಡೆಯುತ್ತಿದ್ದು ತೀವ್ರ ಕುತೂಹಲ ಮೂಡಿಸಿದೆ.
ಐದು ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಶಿವಕುಮಾರ್ ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು ಸಂಸದರು ಮತ್ತು ರಾಜ್ಯಸಭಾ ಸದಸ್ಯರಿಗೆ ಕಳೆದ ರಾತ್ರಿ ಭೋಜನಕೂಟ ಆಯೋಜಿಸಿದ್ದರು. ಈ ಭೋಜನ ಕೂಟದಲ್ಲಿ ಬಿಜೆಪಿ ಶಾಸಕರಾದ ಶಿವರಾಂ ಹೆಬ್ಬಾರ್ ಮತ್ತು ಎಸ್.ಟಿ. ಸೋಮಶೇಖರ್ ಪಾಲ್ಗೊಳ್ಳುವ ಮೂಲಕ ಕುತೂಹಲ ಮೂಡಿಸಿದರು.
ಇದರ ಬೆನ್ನಲ್ಲೇ ಇಂದು ಮುಂಜಾನೆ ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಮಂತ್ರಿ ರೇಣುಕಾಚಾರ್ಯ ಅವರು ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಶುಭಾಶಯ ಕೋರಿದ್ದಾರೆ ಈ ವೇಳೆ ಉಭಯ ನಾಯಕರು ಸುಧೀರ್ಘ ಕಾಲ ಮಾತುಕತೆ ನಡೆಸಿರುವುದು ಹೊಸ ಬೆಳವಣಿಗೆಯಾಗಿದೆ.
ಶಿವಕುಮಾರ್ ಅವರನ್ನು ಹಲವು ನಾಯಕರು ಭೇಟಿ ಮಾಡಿ ಶುಭಾಶಯ ಕೋರಿದ್ದಾರೆ ಆದರೆ ಶಿವಕುಮಾರ್ ಅವರು ಮಾಜಿ ಮಂತ್ರಿ ರೇಣುಕಾಚಾರ್ಯ ಅವರು ಭೇಟಿ ಮಾಡಿರುವ ಫೋಟೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿ ಕೊಳ್ಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ಬಿಜೆಪಿಯ ಇತ್ತೀಚಿನ ವಿದ್ಯಮಾನಗಳ ಬಗ್ಗೆ ಬೇಸರಗೊಂಡಿರುವ ರೇಣುಕಾಚಾರ್ಯ ಅವರು ತಮ್ಮ ಮುಂದಿನ ರಾಜಕೀಯ ನಿರ್ಧಾರದ ಕುರಿತು ಪಕ್ಷದ ಹಲವು ಮುಖಂಡರು ಮತ್ತು ಕಾರ್ಯಕರ್ತರ ಚರ್ಚಿಸುತ್ತಿರುವಾಗಲೇ ಈ ಬೆಳವಣಿಗೆ ನಡೆದಿರುವುದು ಹಲವು ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ.
ವಿಜಯೇಂದ್ರ ಅವರನ್ನು ಬೆಂಬಲಿಸಿ ರೇಣುಕಾಚಾರ್ಯ ಅವರು ವೀರಶೈವ ಲಿಂಗಾಯತ ಸಮುದಾಯದ ಪ್ರಮುಖರ ಸಭೆಯ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರು ಆದರೆ ಇದಕ್ಕೆ ಬಿಜೆಪಿ ಹೈಕಮಾಂಡ್ ತಡೆಯೊಡ್ಡಿದೆ. ಇದನ್ನು ಉಲ್ಲಂಘಿಸಿ ಸಭೆ ನಡೆಸಿದರೇ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದೆ ಇದರಿಂದ ಬೇಸರಗೊಂಡಿರುವ ಅವರು ಇದೀಗ ಬೆಂಬಲಿಗರ ಜೊತೆ ಸಮಾಲೋಚನೆ ನಡೆಸಿದ್ದಾರೆ.
ಈ ಹಿಂದೊಮ್ಮೆ ಅವರು ಬೆಂಬಲಿಗರ ಸಭೆ ನಡೆಸಿ ಕಾಂಗ್ರೆಸ್ ಸೇರುವ ಕುರಿತಂತೆ ಅಭಿಪ್ರಾಯ ಕೇಳಿದ್ದರು ಆ ವಿದ್ಯಮಾನಗಳಿಗೆ ಈಗ ಶಿವಕುಮಾರ್ ಜೊತೆಗಿನ ಭೇಟಿ ರಕ್ಕೆ ಪುಕ್ಕ ತಂದುಕೊಟ್ಟಿದೆ
Previous Articleನಟಿ ರನ್ಯಾ ಚಿನ್ನ ಸಾಗಿಸೋದು ಹೇಗೆ ಗೊತ್ತಾ..
Next Article ಕಾವೇರಿ ನೀರು ದರ ಹೆಚ್ಚಳ ಎಷ್ಟು ಗೊತ್ತೆ.