ಮೈಸೂರು,ಆ.10:
ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಬಿಜೆಪಿ ಅತ್ಯಂತ ಭ್ರಷ್ಟ ಎಂದು ಹೇಳಿ ಅಬ್ಬರದ ಪ್ರಚಾರ ಮಾಡಿ ಅಧಿಕಾರ ಹಿಡಿದ ಕಾಂಗ್ರೆಸ್ 15 ತಿಂಗಳ ಆಡಳಿತ ಪೂರ್ಣಗೊಳಿಸಿದರೂ ಯಾವುದೇ ಒಂದೂ ಪ್ರಕರಣವನ್ನು ಬಯಲಿಗೆಳೆಯಲು ಯಾಕೆ ಸಾಧ್ಯವಾಗಿಲ್ಲ ಎಂದು ಕೇಂದ್ರ ಮಂತ್ರಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ನಡೆಸಿದ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ವಿರುದ್ಧ ಪ್ರಹಾರ ನಡೆಸಿದರು.
ತಮ್ಮ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈ ಹಿಂದೆ ಜೇಡರ ಹಳ್ಳಿಯ ರಸ್ತೆಯಲ್ಲಿ ಹಾಕಲಾಗಿದ್ದ ಮ್ಯಾನ್ ಹೋಲ್ ಮುಚ್ಚಳ ಗಳನ್ನು ಕದ್ದು ಮಾರಾಟ ಮಾಡುತ್ತಿದ್ದರು ಎಂದು ಆಪಾದಿಸಿದರು.
ನನ್ನ ಮಗನ ರಾಜಕೀಯ ಭವಿಷ್ಯಕ್ಕಾಗಿ ಎಚ್ ಡಿ ರೇವಣ್ಣ ಅವರ ಮಕ್ಕಳನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಆರೋಪಿಸುತ್ತಿರುವ ಶಿವಕುಮಾರ್ ಅವರೇ
ಕೊತ್ವಾಲ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ತಮ್ಮನ್ನು ಕಾರ್ಯತಂತ್ರ ರಾಜಕೀಯವಾಗಿ ಬೆಳೆಸಿದ
ಮಾಜಿ ಮುಖ್ಯಮಂತ್ರಿ ಹಿರಿಯ ನಾಯಕ ಎಸ್ಎಂ ಕೃಷ್ಣ ಅವರ ಕುಟುಂಬದಲ್ಲಿನ ಶ್ರಮಜೀವಿ ಆತ್ಮಹತ್ಯೆ ಮಾಡಿಕೊಳ್ಳಲು ಯಾರು ಕಾರಣರು ಎಂಬುದನ್ನು ಹೇಳುವ ಕಾಲ ಸನ್ನಿಹಿತವಾಗಿದೆ ಎಂದು ಎಚ್ಚರಿಸಿದರು.
ಮಾಜಿ ಪ್ರಧಾನಿ ದೇವೇಗೌಡರು ರಾಜಕೀಯಕ್ಕೆ ಬರುವ ಮುನ್ನ ಗುತ್ತಿಗೆದಾರರಾಗಿದ್ದರು ಆದರೆ ಶಿವಕುಮಾರ್ ಅವರೇ ನಿಮ್ಮ ತಂದೆ ಯಾವ ವೃತ್ತಿ ಮಾಡುತ್ತಿದ್ದರು ಆಗ ಅವರ ಆಸ್ತಿ ಎಷ್ಟಿತ್ತು ಈಗ ನಿಮ್ಮ ಆಸ್ತಿ ಎಷ್ಟಿದೆ ಎಂದು ಹೇಳುವ ಕಾಲ ಬಂದಿದೆ ತಾವು ಇನ್ನು ಮುಂದೆ ಯಾವುದನ್ನು ಸಹಿಸಿಕೊಂಡು ಕೂರುವುದಿಲ್ಲ ಎಂದು ಹೇಳಿದರು.
ಇವರಿಗೆ ನನ್ನ ಬಗ್ಗೆ, ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ. ನಿನ್ನೆ ಇಲ್ಲಿಂದಲೇ ನಿಖಿಲ್ ಕುಮಾರಸ್ವಾಮಿಗೆ ಪ್ರಶ್ನೆ ಮಾಡಿದ್ದೀರಿ. ರಾಜಕೀಯದಲ್ಲಿ ನಾನಿದ್ದಾಗ ನೀನು ಹುಟ್ಟೇ ಇರಲಿಲ್ಲ ಎಂದು ಹೇಳಿದ್ದೀರಿ. ಈಗ ನಾನು ಕೇಳುತ್ತಿದ್ದೇನೆ. ದೇವೇಗೌಡರು, ಮೊದಲ ಬಾರಿಗೆ ಶಾಸಕರಾಗಿ ಕಾವೇರಿ ನೀರಿನ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದಾಗ ನೀವು ಹುಟ್ಟಿದ್ದರಾ ಎಂದು ಪ್ರಶ್ನಿಸಿದರು.
ಪಾಪದ ಕೊಡ :
ಸಿದ್ದರಾಮಯ್ಯ ತಾನು ಹಿಂದುಳಿದ ವರ್ಗಗಳ ನಾಯಕ ಎಂದು ಹೇಳಿಕೊಳ್ತಾರೆ. ನೀವು ಕೇವಲ ಹಿಂದೂಳಿದವರಿಗೆ ಮಾತ್ರ ಮುಖ್ಯಮಂತ್ರಿ ಅಲ್ಲ, ರಾಜ್ಯದ ಆರೂವರೆ ಕೋಟಿ ಜನರಿಗೆ ಮುಖ್ಯಮಂತ್ರಿ ಎಂಬುದು ನೆನಪಿರಲಿ. ಆದರೆ ಹಿಂದುಳಿದ, ಬಡವರ ಅಭಿವೃದ್ಧಿ ಮಾಡದೇ ಅವರ ಅಭಿವೃದ್ಧಿಗೆ ಬಳಕೆಯಾಗಬೇಕಿದ್ದ ನೂರಾರು ಕೋಟಿ ಹಣ ಲೂಟಿ ಹೊಡೆದಿದ್ದಾರೆ. ವಾಲ್ಮೀಕಿ, ಮುಡಾ ಹಗರಣದಲ್ಲಿ ಸಿಎಂ ಕೈವಾಡ ಇದೆ. ಈ ಸರ್ಕಾರ ಬಂದಮೇಲೆ ಅಭಿವೃದ್ಧಿ ನಿಂತುಹೋಗಿದೆ. ಹಗರಣಗಳಲ್ಲಿ ಮುಳುಗಿದೆ. ನಾವು ಇದನ್ನ ಪ್ರಶ್ನಿಸಿದರೆ ಸಿದ್ದರಾಮಯ್ಯ ಸಿಎಂ ಆಗಿದ್ದಕ್ಕೆ ಕೆಲವರಿಗೆ ಉರಿ ಎಂದು ಹೇಳ್ತಾರೆ. ಅಲ್ಲ ಸ್ವಾಮಿ ನೀವು ಸರಿಯಾಗಿ ಆಡಳಿತ ಮಾಡಿದ್ರೆ ನಾವ್ಯಾಕೆ ಉರಿ ಪಟ್ಟುಕೊಳ್ಬೇಕು? ವಾಲ್ಮೀಕಿ ಹಗರಣ ಆಗಿದೆ, ಮುಡಾದಲ್ಲಿ ಹಗರಣ ನಡೆದಿದೆ. ಇದನ್ನೆಲ್ಲ ನೋಡಿಕೊಂಡು ವಿರೋಧ ಪಕ್ಷದವರಾಗಿ ನಾವು ಸುಮ್ಮನಿರಬೇಕಾ? ಈಗ ಹೊಸ ಸಂಪ್ರಾದಯ ಮಾಡಿದ್ದಾರೆ. ಆಡಳಿತ ಪಕ್ಷದವರೇ ಪ್ರಶ್ನೆ ಕೇಳ್ತಾರಂತೆ ವಿರೋಧ ಪಕ್ಷಗಳು ಉತ್ತರ ಕೊಡಬೇಕಂತೆ ಇದ್ಯಾವ ಸಂಪ್ರದಾಯ ಸ್ವಾಮಿ? ಎಂದು ಪ್ರಶ್ನಿಸಿದರು.
ನನ್ನ ಪತ್ನಿ ಸಾರ್ವಜನಿಕ ಜೀವನದಲ್ಲಿ ಎಂದೂ ಕಾಣಿಸಿಕೊಂಡಿಲ್ಲ. ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೂ ಬಂದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅವರು ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಂಡಿಲ್ಲವೋ, ಪ್ರಮಾಣವಚನ ಕಾರ್ಯಕ್ರಮಕ್ಕೆ ಬಂದಿಲ್ಲವೋ ಅದು ನಾಡಿನ ಜನತೆಗೆ ಮುಖ್ಯ ಅಲ್ಲ. ನೀವು ಭ್ರಷ್ಟಾಚಾರ ರಹಿತ ಆಡಳಿತ ಕೊಡುವುದಷ್ಟೇ ರಾಜ್ಯದ ಜನರಿಗೆ ಮುಖ್ಯ ಎಂದು ಟಾಂಗ್ ನೀಡಿದರು.
ಮುಡಾ ಹಗರಣದಲ್ಲಿ ಲಪಟಾಯಿಸಿರೋ ಭೂಮಿ ನಿಂಗನದ್ದೂ ಅಲ್ಲ, ದೇವರಾಜನದ್ದೂ ಅಲ್ಲ. ಅದು ಸರ್ಕಾರದ ಭೂಮಿ. ನಿಮ್ಮ ಬಾಮೈದ ಅದನ್ನು ಯಾವ ರೀತಿ ಖರೀದಿ ಮಾಡಿದ್ದ? ಅದನ್ನ ಪ್ರಶ್ನೆ ಮಾಡುತ್ತಾ ಇದ್ದೇವೆ. ಈಗ ಅದನ್ನು ವಾಪಸ್ ಕೊಡ್ತಿವಿ ಅಂತೀರಾ? ವಾಪಸ್ ಕೊಟ್ರೆ ತಪ್ಪು ಮುಚ್ಚಿ ಹೋಗುತ್ತಾ? ಎಂದು ಹರಿಹಾಯ್ದರು
Previous Articleಮಕ್ಕಳ ಮೊಟ್ಟೆ ಕದ್ದ ಅಂಗನವಾಡಿ ಕಾರ್ಯಕರ್ತೆ
Next Article ಕುಮಾರಸ್ವಾಮಿಗೆ ಡಿಸಿಎಂ ಶಿವಕುಮಾರ್ ಸವಾಲು.