ಬೆಂಗಳೂರು.
‘ರಾಜ್ಯದ ವಿವಿಧ ಕಾಮಗಾರಿಗಳ ಗುತ್ತಿಗೆ ವಿಚಾರವಾಗಿ Congress ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು, ಗುತ್ತಿಗೆದಾರರಿಗೆ ಪರೋಕ್ಷವಾಗಿ ಬೆದರಿಕೆ ಹಾಕುತ್ತಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಆಪಾದಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಾವ ಗುತ್ತಿಗೆದಾರರನ್ನೂ ನೀಡಬೇಡಿ. ಮುಂದೆ ಅಧಿಕಾರಕ್ಕೆ ಬಂದು ತನಿಖೆ ಮಾಡಿಸುತ್ತೇವೆ ಎಂದು ಧಮಕಿ ಹಾಕುತ್ತಿದ್ದಾರೆ. ಇದರ ಅರ್ಥ ಏನೆಂದರೆ ಅಧಿಕಾರಕ್ಕೆ ಬಂದರೆ ಸುಲಿಗೆ ಮಾಡಲು ಬರುತ್ತಿದ್ದಾರೆ ಎನ್ನುವುದು ಬಹಳ ಸ್ಪಷ್ಟವಾಗಿದೆ’ ಎಂದು ದೂರಿದರು.
‘Congress ನವರು ಅವರ ಅಜೆಂಡಾ ಅವರೇ ಹೇಳಿಕೊಂಡಿದ್ದಾರೆ. ಇವರು ನಮ್ಮ ವಿರುದ್ಧ ಮಾಡಿದ್ದ ಶೇ 40 ಕಮಿಷನ್ ಆರೋಪ ಯಾವುದೂ ನಿರೂಪಿತವಾಗಿಲ್ಲ. ನ್ಯಾಯಾಲಯದಲ್ಲಿ ದಾಖಲೆಗಳನ್ನು ಕೊಡುವುದಾಗಿ ಹೇಳಿದ್ದು ಇನ್ನೂ ಕೊಟ್ಟಿಲ್ಲ. ಅವರು ಎಲ್ಲಿ ಬೇಕಾದರೂ ನಿರ್ದಿಷ್ಟ ಪ್ರಕರಣ ದಾಖಲು ಮಾಡಿದರೆ ತನಿಖೆಯಾಗುತ್ತದೆ. ಅದನ್ನು ಮಾಡುವುದು ಬಿಟ್ಟು ಗಾಳಿಯಲ್ಲಿ ಗುಂಡು ಹೊಡೆದರೆ ಏನೂ ಪ್ರಯೋಜನವಿಲ್ಲ’ ಎಂದರು.
‘ಕಾಂಗ್ರೆಸ್ ನವರ ಹಿಂದಿನ ಹಗರಣಗಳ ಬಗ್ಗೆ ಲೋಕಾಯುಕ್ತ (Lokayukta) ತನಿಖೆ ನಡೆಯುತ್ತಿದೆ. ಅವರ ಮೇಲಿರುವ ಆರೋಪಗಳಿಗೆ ಉತ್ತರ ಕೊಡಲಿ. ಅವರ ಕಾಲದಲ್ಲಿ ಆಗಿರುವ ಟೆಂಡರ್ ಹಗರಣಗಳ ಬಗ್ಗೆ ಉತ್ತರ ಕೊಡಲಿ’ ಎಂದು ಸವಾಲು ಹಾಕಿದರು. ‘ಗೂಳಿಹಟ್ಟಿ ಶೇಖರ್ (Gulihatti D Shekhar) ಅವರು ಸಾಮಾನ್ಯವಾಗಿ ಪತ್ರ ಬರೆದಿದ್ದಾರೆ. ನಾವು ಅವರಿಗೆ ಪತ್ರ ಮುಖೇನ ಉತ್ತರಿಸಿದ್ದು, ನಿರ್ದಿಷ್ಟ ಪ್ರಕರಣವಿದ್ದರೆ ನೀಡಲಿ, ತನಿಖೆ ಮಾಡುತ್ತೇವೆ ಎಂದು ಕೇಳುತ್ತಿದ್ದೇವೆ. ನಿನ್ನೆ ಸದನದಲ್ಲಿಯೂ ಸ್ಪಷ್ಟವಾಗಿ ಕೇಳಿದ್ದೇವೆ. ಯಾವುದಾದರೂ ಅಧಿಕಾರಿ ಯಾವುದೇ ಹಂತದಲ್ಲಿ ಭ್ರಷ್ಟಾಚಾರ ಮಾಡಿದ್ದರೆ ತನಿಖೆ ಮಾಡುತ್ತೇವೆ ಎನ್ನುವುದು ನಮ್ಮ ನಿಲುವಾಗಿದೆ. ಇದ್ಯಾವುದೂ ನೀಡದೆ, ಕೇವಲ ಹೇಳಿಕೆ ನೀಡಿದರೆ ಆಗುವುದಿಲ್ಲ’ ಎಂದು ಹೇಳಿದರು
‘ಕಾಂಗ್ರೆಸ್ 5 ವರ್ಷ ಆಡಳಿತ ಮಾಡಿದೆ. ಅವರೂ ಟೆಂಡರ್ ಕರೆದಿದ್ದಾರೆ. ನಾವು ಬಂದ ನಂತರ ಟೆಂಡರ್ ಪರಿಶೀಲನಾ ಸಮಿತಿಯನ್ನು ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನೇಮಕ ಮಾಡಿದ್ದೇವೆ. ಟೆಂಡರ್ ಪರಿಶೀಲನೆಯಾಗುತ್ತದೆ ಹಾಗೂ ಇಡೀ ಪ್ರಕ್ರಿಯೆ ಪಾರದರ್ಶಕವಾಗಿದೆ. ಯಾರು ಬೇಕಾದರೂ ದೂರು ನೀಡಬಹುದಾಗಿದೆ. ಡಿ.ಕೆ.ಶಿವಕುಮಾರ್ (DK Shivakumar) ಅವರು ನೀರಾವರಿ ಸಚಿವರಿದ್ದಾಗ ಟೆಂಡರ್ ಪರಿಶೀಲನಾ ಸಮಿತಿಯನ್ನು ತೆಗೆದುಹಾಕಿದ್ದರು. ಟಿ. ಎ. ಸಿ ಯನ್ನೂ ತೆಗೆದುಹಾಕಿದ್ದರು. ನಿಗಮದಲ್ಲಿ ಎರಡು ಹಂತದ ಪರಿಶೀಲನೆಯನ್ನು ತೆಗೆದವರು ಅವರು, ಭ್ರಷ್ಟಾಚಾರಕ್ಕೆ ರಹದಾರಿ ಮಾಡಿಕೊಂಡಿದ್ದರು. ನಾವು ಬಂದ ನಂತರ ಅದನ್ನು ಪುನ: ಸ್ಥಾಪನೆ ಮಾಡಿದ್ದೇವೆ. ಹೀಗಾಗಿ ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ’ ಎಂದರು.

