ಬಾಗಲಕೋಟೆಯ ವಕೀಲರಾದ ಸಂಗೀತಾ ಶಿಕ್ಕೇರಿ ಎಂಬುವರನ್ನು ಹಾಡುಹಗಲೆ ಸಾರ್ವಜನಿಕವಾಗಿ ಥಳಿಸಿದ ಆರೋಪದ ಮೇಲೆ ಬಿಜೆಪಿ ಕಾರ್ಯಕರ್ತ ಮಹಾಂತೇಶ ಚೊಳಚಗುಡ್ಡ ಎಂಬಾತನನ್ನು ಬಾಗಲಕೋಟೆ ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆಯ ವಿನಾಯಕ ನಗರದಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ವಕೀಲೆಯ ಪತಿ ಸಹಾಯಕ್ಕೆ ಮನವಿ ಮಾಡಿದರೂ ಜನರು ನೆರವಿಗೆ ಬಂದಿರಲಿಲ್ಲ.ಮಹಿಳೆ ಮೇಲೆ ಹಲ್ಲೆ ಮಾಡಿ, ಜಾಡಿಸಿ ಒದ್ದ ವಿಡಿಯೊ ವೈರಲ್ ಆಗಿತ್ತು.
ತೀವ್ರವಾಗಿ ಗಾಯಗೊಂಡಿರುವ ಸಂಗೀತಾ ಅವರನ್ನು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಸಂಗೀತ ಶಿಕ್ಕೇರಿ ಹಾಗೂ ಮಹಾಂತೇಶ ಚೊಳಚಗುಡ್ಡ ಅಕ್ಕಪಕ್ಕದ ಮನೆಯ ನಿವಾಸಿಗಳು. ಸಂಗೀತಾ ಅವರ ಮನೆಯನ್ನು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ಖರೀದಿಸಿದ್ದಾರೆ. ಕುಟುಂಬದವರ ಗಮನಕ್ಕೆ ತಾರದೇ ನಮ್ಮ ದೊಡ್ಡಪ್ಪ ಮನೆಯನ್ನು ಮಾರಾಟ ಮಾಡಿದ್ದಾರೆ. ವಿವಾದ ನ್ಯಾಯಾಲಯದಲ್ಲಿದೆ. ಆದರೂ ರಾಜು ನಾಯ್ಕರ್ ತಮ್ಮ ಪ್ರಭಾವ ಬಳಸಿ ಮನೆ ಖಾಲಿ ಮಾಡಲು ಕಿರುಕುಳ ನೀಡುತ್ತಿದ್ದಾರೆ ಎಂದು ಸಂಗೀತಾ ಶಿಕ್ಕೇರಿ ಎರಡು ದಿನಗಳ ಹಿಂದೆ ಪತ್ರಿಕಾಗೋಷ್ಠಿ ನಡೆಸಿ ಆರೋಪಿಸಿದ್ದರು. ಈಗ ನಡೆದಿರುವ ಹಲ್ಲೆಯ ಹಿಂದೆಯೂ ಅವರದ್ದೇ ಕೈವಾಡ ಇದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಈ ಆರೋಪವನ್ನು ನಿರಾಕರಿಸಿರುವ ರಾಜು ನಾಯ್ಕರ್, ‘ಇದೆಲ್ಲ ನನ್ನ ವಿರುದ್ಧದ ರಾಜಕೀಯ ಷಡ್ಯಂತ್ರ. ಕಾನೂನು ಬದ್ಧವಾಗಿಯೇ ಮನೆ ಖರೀದಿಸಿದ್ದೇನೆ. ಅಧಿಕಾರ ದುರ್ಬಳಕೆ ಮಾಡಿಕೊಂಡಿಲ್ಲ. ಹಲ್ಲೆ ನಡೆಸಲು ಕುಮ್ಮಕ್ಕೂ ನೀಡಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.
Previous Articleಪಾತಾಳಕ್ಕೆ ಕುಸಿಯುತ್ತಿರುವ ಟೆಕ್ ಕಂಪನಿಗಳು…
Next Article ಪೊಲೀಸರ ಮೇಲೆ ವಾಹನ ಹರಿಸಲು ಯತ್ನ…