ಬೆಂಗಳೂರು,ಮೇ. 26-
ಕಂಠಪೂರ್ತಿ ಕುಡಿದು ಅಮಲಿನಲ್ಲಿ ತೇಲುತ್ತಿದ್ದ ವ್ಯಕ್ತಿಯೊಬ್ಬ ಒನ್ ವೇಯಲ್ಲಿ ಕಾರು ನುಗ್ಗಿಸಿ ಹಲವು ವಾಹನಗಳಿಗೆ ಹಾನಿ ಉಂಟುಮಾಡಿ, ತಡೆಯಲು ಬಂದ ಪೊಲೀಸರ ಮೇಲೆಯೇ ಕಾರು ಹತ್ತಿಸಲು ಯತ್ನಿಸಿದ ಘಟನೆ ಕೋರಮಂಗಲದ ಜ್ಯೋತಿ ನಿವಾಸ ಕಾಲೇಜು ಬಳಿ ಸಂಭವಿಸಿದೆ.
ಮದ್ಯದ ಅಮಲಿನಲ್ಲಿ ತೇಲುತ್ತಿದ್ದ ನಂದಕೃಷ್ಣ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಅಮಲಿನಲ್ಲಿ ಈತ ಚಲಾಯಿಸುತ್ತಿದ್ದ ಕಾರು ಪೊಲೀಸ್ ಬ್ಯಾರಿಕೇಡ್ ಗೆ
ಗುದ್ದಿಸಿದ್ದರಿಂದ ಅದನ್ನು ತಡೆಯಲು ಬಂದ ಪೊಲೀಸರೊಬ್ಬರ ಕಾಲಿಗೆ ಗಾಯವಾಗಿದೆ.
ನಂತರ ಕಾರಿನ ಬಾಗಿಲು ತೆರೆಯುವಂತೆ ಪೊಲೀಸರು ಸೂಚನೆ ನೀಡಿದರೂ ನಂದಕೃಷ್ಣ ಪ್ರತಿಕ್ರಿಯಿಸುತ್ತಲೇ ಇರಲಿಲ್ಲ.ಹೀಗಾಗಿ ಪೊಲೀಸರೇ ಕಾರಿನ ಗಾಜು ಒಡೆದು ಆತನನ್ನು ಹೊರಗೆ ಎಳೆಯಲು ಹೋದಾಗ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಎನ್ನಲಾಗಿದೆ.
ಘಟನೆ ಸಂಬಂಧ ಆಡುಗೋಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಡ್ರಂಕ್ ಆ್ಯಂಡ್ ಡ್ರೈವ್ ಪ್ರಕರಣ ಸಾಮಾಜಿಕ ಮಾಧ್ಯಮಗಳಲ್ಲಿಯೂ ಈಗ ಭಾರಿ ಸದ್ದು ಮಾಡುತ್ತಿದೆ. ಪೊಲೀಸರು ಕಾರಿನ ಗಾಜು ಒಡೆದು ನಂದಕೃಷ್ಣನನ್ನು ಹೊರತೆಗೆಯುತ್ತಿರುವ ವಿಡಿಯೋವನ್ನು ‘ಕರ್ನಾಟಕ ಪೋರ್ಟ್ಫೊಲಿಯೋ’ ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಲಾಗಿದೆ.
ಜ್ಯೋತಿ ನಿವಾಸ ಕಾಲೇಜಿನ ಬಳಿ ಅಜಾಗರೂಕತೆಯಿಂದ ಕುಡಿದು ವಾಹನ ಚಲಾಯಿಸಿ ರಂಪಾಟ ಮಾಡಲಾಗಿದೆ.
ತಡರಾತ್ರಿ ಪಾರ್ಟಿಯಿಂದ ಹಿಂತಿರುಗುತ್ತಿದ್ದಾಗ ಅತಿಯಾದ ಮದ್ಯದ ಅಮಲಿನಲ್ಲಿದ್ದ ಚಾಲಕನೊಬ್ಬ ವಾಹನದ ನಿಯಂತ್ರಣ ಕಳೆದುಕೊಂಡು ಅತಿ ವೇಗದಲ್ಲಿ ಪೊಲೀಸ್ ಬ್ಯಾರಿಕೇಡ್‌ಗಳಿಗೆ ಡಿಕ್ಕಿ ಹೊಡೆಸಿ ಕಾರನ್ನು ನುಗ್ಗಿಸಿದ್ದಾನೆ.
ಚಾಲಕ ಸಾರ್ವಜನಿಕ ಸುರಕ್ಷತೆಯ ಬಗ್ಗೆ ಯಾವುದೇ ಕಾಳಜಿ ವಹಿಸಲಿಲ್ಲ. ರಸ್ತೆಯಲ್ಲಿ ಹಲವಾರು ವಾಹನಗಳಿಗೆ ಕಾರು ಡಿಕ್ಕಿಹೊಡೆಸಿದ್ದಾನೆ. ಚಾಲಕ ವಿಪರೀತ ಮದ್ಯಪಾನ ಮಾಡಿದ್ದ ಮತ್ತು ಅವನಿಗೆ ಸುತ್ತಮುತ್ತಲಿನ ಪ್ರಜ್ಞೆಯೇ ಇರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹಾನಿಗೊಳಗಾದ ವಾಹನಗಳು, ಗಾಯಗೊಂಡ ನಾಗರಿಕರು ಮತ್ತು ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಹರಸಾಹಸ ಪಡುತ್ತಿದ್ದರು” ಎಂದು ‘ಕರ್ನಾಟಕ ಪೋರ್ಟ್ಫೊಲಿಯೋ’ ಎಕ್ಸ್ ತಾಣದಲ್ಲಿ ಉಲ್ಲೇಖಿಸಲಾಗಿದೆ
Previous Articleಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಲೀಗಲ್ ನೋಟಿಸ್.
Next Article ಡಿ.ಕೆ. ಸುರೇಶ್ ಕೆಎಂಎಫ್ ಅಧ್ಯಕ್ಷರಾಗುವುದು ಖಚಿತ.