ಬೆಂಗಳೂರು,ಜ.2:
ಹೊಸ ವರ್ಷವನ್ನು ಅತ್ಯಂತ ಸಂಭ್ರಮದಿಂದ ಸ್ವಾಗತಿಸಿದ ರಾಜ್ಯದ ಜನತೆಗೆ ಹೊಸ ವರ್ಷದ ಎರಡನೇ ದಿನವೇ ರಾಜ್ಯ ಸರ್ಕಾರ ದರ ಏರಿಕೆಯ ಬರೆ ಹಾಕಿದೆ
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲ ರೀತಿಯ ಬಸ್ಸುಗಳ ಪ್ರಯಾಣದರವನ್ನು ಶೇಕಡ 15% ರಷ್ಟು ಹೆಚ್ಚಳ ಮಾಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ ನೂತನ ದರಗಳು ಜನವರಿ 5ರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.
ಶಕ್ತಿ ಯೋಜನೆ, ಸಿಬ್ಬಂದಿಯ ವೇತನ ಹೆಚ್ಚಳ, ಬಿಡಿ ಭಾಗಗಳು ಮತ್ತು ಡಿಸೇಲ್ ಬೆಲೆ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ನಿಗಮಗಳು ಭಾರಿ ನಷ್ಟ ಅನುಭವಿಸುತ್ತಿವೆ. ಇದನ್ನು ಬರಿಸುವ ದೃಷ್ಟಿಯಿಂದ ಪ್ರಯಾಣ ದರ ಹೆಚ್ಚಳಕ್ಕೆ ಅನುಮತಿ ನೀಡುವಂತೆ ನಾಲ್ಕು ನಿಗಮಗಳು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು.
ಈ ಪ್ರಸ್ತಾವನೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ ಸಂಪುಟ ಸಭೆ ಅಂತಿಮವಾಗಿ ಶೇಕಡ 15ರಷ್ಟು ಪ್ರಯಾಣದ ಹೆಚ್ಚಳಕ್ಕೆ ಅನುಮತಿ ನೀಡಿದೆ.
ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಪ್ರಯಾಣದರಗಳನ್ನು ಕಳೆದ 2014ರಲ್ಲಿ ಹೆಚ್ಚಳ ಮಾಡಲಾಗಿತ್ತು. ಇದಾದ ಹತ್ತು ವರ್ಷಗಳ ನಂತರದಲ್ಲಿ ಬಿಎಂಟಿಸಿ ಪ್ರಯಾಣದ ಹೆಚ್ಚಳ ಮಾಡಲಾಗಿದೆ.
ಅದೇ ರೀತಿ ಕಲ್ಯಾಣ ಕರ್ನಾಟಕ ಕಿತ್ತೂರು ಕರ್ನಾಟಕ ಮತ್ತು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳ ಪ್ರಯಾಣದರವನ್ನು 2020ರಲ್ಲಿ ಹೆಚ್ಚಳ ಮಾಡಲಾಗಿತ್ತು. ಇದೀಗ ಐದು ವರ್ಷಗಳ ನಂತರದಲ್ಲಿ ಈ ಮೂರು ನಿಗಮಗಳ ಬಸ್ಸುಗಳ ಪ್ರಯಾಣ ದರ ಹೆಚ್ಚಳಕ್ಕೆ ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.
ಕಳೆದ 2020ರಲ್ಲಿ ಪ್ರತಿನಿತ್ಯ ಡೀಸೆಲ್ ಗಾಡಿ 4 ನಿಗಮಗಳು 9 ಕೋಟಿ 16 ಲಕ್ಷ ವಿನಿಯೋಗಿಸುತ್ತಿದ್ದವು ಈಗ ಪ್ರತಿದಿನ 13 ಕೋಟಿ 26 ಲಕ್ಷ ರೂಪಾಯಿ ವಿನಿಯೋಗಿಸುತ್ತಿವೆ. ಅದೇ ರೀತಿಯಲ್ಲಿ ನಾಲ್ಕು ನಿಗಮಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಸಂಬಳ ನೀಡಲು ಪ್ರತಿನಿತ್ಯ12. 85 ಕೋಟಿ ರೂಪಾಯಿ ವೆಚ್ಚವಾಗುತ್ತಿತ್ತು ಇದೀಗ ಅವರ ಸಂಬಳ ಹೆಚ್ಚಳ ಮಾಡಿರುವ ಈ ನೆಲೆಯಲ್ಲಿ ಇದರ ಪ್ರಮಾಣ 18.36 ಕೋಟಿ ರೂಪಾಯಿಗೆ ಹೆಚ್ಚಳಗೊಂಡಿದೆ. ಇದರ ಜೊತೆಗೆ ಬಿಡಿ ಭಾಗಗಳು ಮತ್ತು ನಿರ್ವಹಣಾ ವೆಚ್ಚ ಕೂಡ ಹೆಚ್ಚಳಗೊಂಡಿದೆ ಈ ಹಿನ್ನೆಲೆಯಲ್ಲಿ ನಿಗಮಗಳು ಬಾರಿ ಪ್ರಮಾಣದ ಆರ್ಥಿಕ ಹೊರೆ ಅನುಭವಿಸುತ್ತಿವೆ. ಈ ಪ್ರಮಾಣವನ್ನು ಕಡಿಮೆ ಮಾಡುವ ದೃಷ್ಟಿಯಿಂದ ದರ ಹೆಚ್ಚಳ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ವಿವರಿಸಿದರು.
ಇದಲ್ಲದೆ ಹೀಗೆ ಹಿಂದೆ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದ್ದ ಅವಧಿಯಲ್ಲಿ ನಾಲ್ಕು ನಿಗಮಗಳಿಂದ 13 ಕೋಟಿ 71 ಲಕ್ಷ ರೂಪಾಯಿ ಸಾಲ ಇತ್ತು ಆದರೆ ಬಿಜೆಪಿ ಆಡಳಿತದ ಅವಧಿಯಲ್ಲಿ ಈ ಸಾಲದ ಪ್ರಮಾಣ 5900 ಕೋಟಿ ರೂಪಾಯಿಗೆ ಹೆಚ್ಚಳಗೊಂಡಿದೆ ಈ ಸಾಲವನ್ನು ತೀರಿಸಬೇಕು ಜೊತೆಗೆ ಸಿಬ್ಬಂದಿಗೆ ವೇತನ ಹೆಚ್ಚಳ ಮಾಡಬೇಕು ಎಂಬ ಒತ್ತಡಕ್ಕೆ ಸಿಲುಕಿರುವ ನಿಗಮಗಳು ಕಳೆದ ಐದು ಆರು ತಿಂಗಳ ಹಿಂದಿನಿಂದಲೇ ಪ್ರಯಾಣದ ಹೆಚ್ಚಳಕ್ಕೆ ಮನವಿ ಮಾಡಿದ್ದವು ಆದರೆ ಸರ್ಕಾರ ಇದಕ್ಕೆ ಅನುಮತಿ ನೀಡಿರಲಿಲ್ಲ. ಈಗ ನೌಕರರು ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಸಲು ಒತ್ತಡ ಹೇರಿರುವ ಹಿನ್ನೆಲೆಯಲ್ಲಿ ದರ ಹೆಚ್ಚಳಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ಬಿಎಂಟಿಸಿ: ಈ ವರ್ಷ ಆಗಸ್ಟ್ನಲ್ಲಿ ಶೇಕಡಾ 42 ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. 2014 ರಲ್ಲಿ ಟಿಕೆಟ್ ದರ ಹೆಚ್ಚಳ ಆಗಿತ್ತು ಮತ್ತೆ ಹೆಚ್ಚಳ ಆಗಿರಲಿಲ್ಲ.
ಕೆಎಸ್ಆರ್ಟಿಸಿ: ಶೇಕಡಾ 25 ರಿಂದ 30 ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ ಆಗಸ್ಟ್ನಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು. 2020ರ ಫೆಬ್ರುವರಿಯಲ್ಲಿ ಕೆಎಸ್‌ಆರ್ಟಿಸಿ ಟಿಕೆಟ್ ದರ ಹೆಚ್ಚಳ ಮಾಡಲಾಗಿತ್ತು, ಬಳಿಕ ಮತ್ತೆ ಹೆಚ್ಚಳ ಮಾಡಿಲ್ಲ.ಕೆಡಬ್ಲ್ಯೂಆರ್ಟಿಸಿ: ಶೇಕಡಾ 30 ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ ಆಗಸ್ಟ್ನಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು. 2020 ರ ಫೆಬ್ರುವರಿಯಲ್ಲಿ ಕೊನೆಯದಾಗಿ ಕೆಡಬ್ಲ್ಯೂಆರ್ಟಿಸಿ ಟಿಕೆಟ್ ದರ ಹೆಚ್ಚಳ ಮಾಡಲಾಗಿತ್ತು.
ಕೆಕೆಆರ್ಟಿಸಿ: ಶೇಕಡಾ 25 ರಿಂದ 30 ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ ಆಗಸ್ಟ್ನಲ್ಲೇ ಪ್ರಸ್ತಾವನೆ ಸಲ್ಲಿಸಿತ್ತು. 2020ರ ಫೆಬ್ರುವರಿಯಲ್ಲಿ ಕೆಕೆಆರ್ಟಿಸಿ ಟಿಕೆಟ್ ದರ ಹೆಚ್ಚಳ ಮಾಡಿದ್ದು ಬಿಟ್ಟರೆ ಮತ್ತೆ ಮಾಡಿಲ್ಲ.
Previous Articleಹೊಸ ವರ್ಷದಲ್ಲಿ ಬಿಜೆಪಿ ಭಿನ್ನಮತಕ್ಕೆ ಹೊಸ ರಂಗು
Next Article ಧಾರವಾಡ ಮಹಾನಗರ ಪಾಲಿಕೆ ಅಸ್ಥಿತ್ವಕ್ಕೆ