ಬೆಂಗಳೂರು. ಡಿ.30:
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಮುಷ್ಕರ ಭೀತಿ ಇದೀಗ ದೂರಾಗಿದೆ. ವರ್ಷಾಂತ್ಯದಲ್ಲಿ ಮತ್ತು ಹೊಸ ವರ್ಷದ ಆರಂಭದಲ್ಲಿ ನೌಕರರ ಮುಷ್ಕರದಿಂದಾಗಿ ಸಾರಿಗೆ ಸಂಸ್ಥೆಗಳ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂಬುದಾಗಿ ಇದ್ದ ಆತಂಕ ದೂರವಾಗಿದೆ
ನೌಕರರ ಸಮಸ್ಯೆಗಳ ಬಗ್ಗೆ ಸಂಘಟನೆಗಳೊಂದಿಗೆ ಸಂಕ್ರಾಂತಿ ಬಳಿಕ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ ಕಾರಣ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಡಿ.31ರಂದು ನಡೆಸಲು ಉದ್ದೇಶಿಸಿದ ಮುಷ್ಕರವನ್ನು ಹಿಂದಕ್ಕೆ ಪಡೆದಿದೆ.
2020ರ ಜನವರಿ 1ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಮಾಡಲಾಗಿತ್ತು. 2023ರ ಫೆಬ್ರುವರಿ 28ರವರೆಗೆ ಪರಿಷ್ಕರಣೆಯ ಹಿಂಬಾಕಿಯನ್ನು ಆಗಿನ ಸರ್ಕಾರ ನೀಡಿಲ್ಲ. ನೌಕರರ ಮತ್ತು ಈ ಸಮಯದಲ್ಲಿ ನಿವೃತ್ತರಾದವರಿಗೆ ನೀಡಬೇಕಾದ ಹಿಂಬಾಕಿ 1,785 ಕೋಟಿಯಾಗಿದ್ದು, ಅದನ್ನು ಕೂಡಲೇ ಪಾವತಿಸಬೇಕು 2024ರ ಜನವರಿ 1ರಿಂದ ಅನ್ವಯವಾಗುವಂತೆ ಮತ್ತೆ ವೇತನ ಪರಿಷ್ಕರಣೆ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜಂಟಿ ಕ್ರಿಯಾ ಸಮಿತಿ ಮುಷ್ಕರಕ್ಕೆ ಕರೆ ನೀಡಿತ್ತು.
ಈ ಎಲ್ಲಾ ಬೇಡಿಕೆಗಳ ಬಗ್ಗೆ ಸಂಕ್ರಾಂತಿ ಮುಗಿದ ನಂತರ ಸಾರಿಗೆ ಸಂಸ್ಥೆಯ ನೌಕರರ ಸಂಘದ ಪ್ರತಿನಿಧಿಗಳು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಆನಂತರ ಮಾರ್ಚ್ ನಲ್ಲಿ ನಡೆಯಲಿರುವ ವಿಧಾನಮಂಡಲದ ಬಜೆಟ್ ಅಧಿವೇಶನದಲ್ಲಿ ಇವುಗಳಿಗೆ ಪರಿಹಾರ ನೀಡಲಾಗುವುದು ಎಂಬ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ ಈ ಹಿನ್ನೆಲೆಯಲ್ಲಿ ಮುಷ್ಕರದ ಆತಂಕ ದೂರವಾಗಿದೆ.
Previous Articleಕಾವೇರಿ ನದಿ ತೀರದ ಈ ಪ್ರದೇಶದಲ್ಲಿ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ.
Next Article ಆಂಧ್ರ ಮುಖ್ಯಮಂತ್ರಿ ಹೆಸರಲ್ಲಿ ವಂಚನೆ