ಬೆಂಗಳೂರು,ಆ.13- ಅಗ್ನಿಶಾಮಕದಳ ಕಚೇರಿ ಬಳಿಯೇ ಶಾಲಾ ವಾಹನವೊಂದು ಬೆಂಕಿ ಹೊತ್ತಿ ಉರಿದು ಅದರೊಳಗಿದ್ದ ವ್ಯಕ್ತಿ ಸಜೀವ ದಹನವಾಗಿರುವ ದುರ್ಘಟನೆ ಬಾಣಸವಾಡಿಯ ಒಎಂಬಿಆರ್ ಲೇಔಟ್‌ನಲ್ಲಿ ನಿನ್ನೆ ರಾತ್ರಿ ನಡೆದಿದೆ.
ರಾತ್ರಿ 10:08 ಕ್ಕೆ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಕೂಡಲೇ ಅಗ್ನಿಶಾಮಕದಳ ವಾಹನ ದೌಡಾಯಿಸಿ ಬೆಂಕಿ ನಂದಿಸಲಾಗಿದೆ. ಬಸ್ಸಿನ ಒಳಗೆ ಒಬ್ಬರು ಸಜೀವ ದಹನವಾಗಿದ್ದಾರೆ ಎಂದು ಬಾಣಸವಾಡಿ ಅಗ್ನಿಶಾಮಕದಳ ಕಚೇರಿ ಮಾಹಿತಿ ನೀಡಿದೆ.
ಬಸ್‌ನ ಓಳಗೆ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಸುಮಾರು 30 ವರ್ಷದ ಆಸುಪಾಸಿನ ವ್ಯಕ್ತಿ ಎಂದು ಅಂದಾಜಿಸಲಾಗಿದೆ.
ಅರುಣ್ ಎಂಬವರಿಗೆ ಸೇರಿದ ಖಾಸಗಿ ಶಾಲೆ ಬಸ್ ಇದಾಗಿದೆ. ಘಟನೆಯಲ್ಲಿ ಮೃತ ವ್ಯಕ್ತಿ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಗುರುತು ಇನ್ನೂ ಪತ್ತೆಯಾಗಿಲ್ಲ. ಘಟನೆ ಸಂಬಂಧ ಪೊಲೀಸರು ಯುಡಿಆರ್ ದಾಖಲಿಸಿಕೊಂಡಿದ್ದಾರೆ. ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಖಾಸಗಿ ಬಸ್‌ನಲ್ಲಿ ಚಾಪೆ, ದಿಂಬು ತಂದು ವ್ಯಕ್ತಿ ಮಲಗಿದ್ದ ಎಂಬುದು ಪರಿಶೀಲನೆಯಿಂದ ಗೊತ್ತಾಗಿದೆ. ಸುಮಾರು ಮೂರು ತಿಂಗಳಿನಿಂದ ಶಾಲಾ ಬಸ್ ಕೆಟ್ಟು ನಿಂತಿತ್ತು. 14 ವರ್ಷದ ಹಳೆ ಬಸ್‌ಗೆ ಎಫ್‌ಸಿ, ಇನ್ಯೂರೆನ್ಸ್ ಮುಗಿದಿತ್ತು. ಹೀಗಾಗಿ, ಲೇಔಟ್ ರಸ್ತೆಯಲ್ಲಿ ಮಾಲೀಕ ಅರುಣ್ ಬಸ್ ನಿಲ್ಲಿಸಿದ್ದರು. ನಿನ್ನೆ ಸಂಜೆ ಕೂಡ ಬಸ್ ಬಳಿ ಬಂದು ನೋಡಿಕೊಂಡು ಹೋಗಿದ್ದರು.
ಬಸ್‌ಗೆ ಸರಿಯಾಗಿ ಡೋರ್ ಲಾಕ್ ಆಗಿರಲಿಲ್ಲ. ಹೀಗಾಗಿ, ಬಸ್‌ನ ಒಳಗೆ ಹೋಗಿ ವ್ಯಕ್ತಿ ಧೂಮಪಾನ ಮಾಡಿ ಮಲಗಿದ್ದ. ಬಸ್‌ನಲ್ಲಿ ಕೆಲ ಬೀಡಿ ತುಂಡುಗಳು ಪತ್ತೆಯಾಗಿದೆ ಎನ್ನಲಾಗಿದೆ. ಬೀಡಿ ಸೇದಿದ ತುಂಡಿನಿಂದ ಬಸ್‌ನಲ್ಲಿ ಬೆಂಕಿ ಹೊತ್ತಿಕೊಂಡಿದ್ಯಾ ಅಥವಾ ಬೇರೆ ಯಾರಾದರೂ ಬಸ್‌ಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರಾ ಎಂಬ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿರುವ ರಾಮಮೂರ್ತಿ ನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Previous Articleಈ ಕಾರಣಕ್ಕೆ ಪ್ರಧಾನಿ ಮೋದಿ ರಾಜೀನಾಮೆ ಕೊಡಬೇಕಂತೆ
Next Article ಎಲ್ಲಾ ನಗರಗಳಲ್ಲೂ ಇ ಖಾತೆ ವ್ಯವಸ್ಥೆ ಜಾರಿ