ಹುಬ್ಬಳ್ಳಿ: ಕಮಿಷನ್ ವಿಚಾರವಾಗಿ ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ರಾಜಿನಾಮೆಗೆ ಎಲ್ಲೆಡೆ ಒತ್ತಾಯಗಳು ಕೇಳಿ ಬಂದಿವೆ. ಆದರೆ ಸ್ವಪಕ್ಷದಲ್ಲಿ ಈಶ್ವರಪ್ಪ ಅವರ ಸಮರ್ಥನೆ ನಡೆದಿದೆ. ಈ ಮದ್ಯೆ ಸಚಿವ ಈಶ್ವರಪ್ಪ ಅವರು ಮಾತ್ರ ರಾಜಿನಾಮೆ ನೀಡದೇ ಇರುವುದು ಕಾಂಗ್ರೆಸ್ ಸೇರಿದಂತೆ ಉಳಿದ ರಾಜಕೀಯ ಪಕ್ಷಗಳ ತೀವ್ರ ಅಸಮಾಧಾನಕ್ಕೂ ಕಾರಣವಾಗಿದೆ. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡುವುದಿಲ್ಲ ಎಂದು ಬಂಡತನ ತೋರುತ್ತಿರುವುದು ಆ ಪಕ್ಷಕ್ಕೆ ತಿರುಗುಬಾಣವಾಗಲಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜನರು ಬಿಜೆಪಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ದಕ್ಷ ಪೋಲಿಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಅಂದಿನ ಗೃಹ ಸಚಿವರಾಗಿದ್ದ ಕೆ.ಜೆ. ಚಾರ್ಜ್ ಅವರು ನೈತಿಕ ಹೊಣೆಹೊತ್ತು ಏಕಾಏಕಿ ರಾಜೀನಾಮೆ ಕೊಟ್ಟಿದ್ದರು. ಆ ಬಳಿಕ ತನಿಖೆ ನಂತರವೇ ಸಚಿವ ಸ್ಥಾನವನ್ನು ಅಲಂಕಾರ ಮಾಡಿದರು. ಆದರೆ ಅಂತಹ ಧೈರ್ಯ ತೋರುವ ತಾಕತ್ತು ಬಿಜೆಪಿಯವರಿಗೆ ಇಲ್ಲ. ಬಿಜೆಪಿಯವರು ಮಾತಾಡೋದು ಒಂದು, ಮಾಡೋದು ಒಂದು. ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಶಾಸಕ ಅಬ್ಬಯ್ಯ ಹರಿಹಾಯ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ರಾಜ್ಯಕ್ಕೆ ಬಂದಾಗ ಯಾವುದೇ ಆಧಾರವಿಲ್ಲದೇ ಕಾಂಗ್ರೆಸ್ ಸರ್ಕಾರ ಶೇ.10 ಕಮಿಷನ್ ಸರ್ಕಾರ ಎಂದು ಆರೋಪಿಸಿದರು. ಆದರೆ ಇವತ್ತು ರಾಜ್ಯದಲ್ಲಿ ಶೇ.40 ಕಮಿಷನ್ ಸರ್ಕಾರ ಪಡೆಯುತ್ತಿದೆ. ಇದನ್ನು ಸ್ವತಃ ಗುತ್ತಿಗೆದಾರರೇ ಬಿರುದು ನೀಡಿದ್ದಾರೆ. ಹಾಗಾಗಿ ಬಿಜೆಪಿಗೆ ನಾಚಿಕೆ ಆಗಬೇಕು. ಅವರಿಗೆ ಮಾನ ಮರ್ಯಾದೆ ಇದ್ದರೆ, ರಾಜೀನಾಮೆ ಕೊಟ್ಟು ಜನರ ಎದುರಿಗೆ ಹೋಗಬೇಕು ಎಂದು ಒತ್ತಾಯಿಸಿದರು.
ಬಿಜೆಪಿಗರ ಅಜೆಂಡಾ ಒಂದೇ, ಅವರ ಬಂಡವಾಳವೇ ಜಾತಿ-ಧರ್ಮ. ಅವರ ಮುಂದೆ ಯಾವುದೇ ಅಭಿವೃದ್ಧಿ ಕಾರ್ಯಗಳಿಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ಧರ್ಮದ ದಂಗಲ್ ಗೆ ನೇರ ಕಾರಣ ಬಿಜೆಪಿಯವರು. ಆರ್.ಎಸ್.ಎಸ್, ಬಜರಂಗಗಳು ಬಿಜೆಪಿಯ ಅಂಗಗಳು. ಅವರ ಮೂಲಕ ರಾಜ್ಯ, ದೇಶದಲ್ಲಿ ಅಶಾಂತಿ ಉಂಟುಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.