ಬೆಂಗಳೂರು, ಜೂ.11:
ಸದಾ ಒಂದಲ್ಲಾ ಒಂದು ಕಾರಣಗಳಿಗಾಗಿ ವಿವಾದಕ್ಕೆ ಗುರಿಯಾಗುತ್ತಿರುವ ಸ್ಯಾಂಡಲ್ ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಮೈಸೂರಿನ ತಮ್ಮ ಫಾರಂ ಹೌಸ್ ನಲ್ಲಿದ್ದ ನಟ ದರ್ಶನ್ ಅವರನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿ ಕರೆತಂದಿದ್ದಾರೆ.
ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎಂಬುವರ ಹತ್ಯೆ ಪ್ರಕರಣದಲ್ಲಿ ದರ್ಶನ್ ಅವರನ್ನು ಬಂಧಿಸಲಾಗಿದೆ.
ದುಷ್ಕರ್ಮಿಗಳಿಂದ ಹತ್ಯೆಯಾಗಿರುಪಾ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎಂಬವರು ಸ್ಯಾಂಡಲ್ ವುಡ್ ನಟಿ ಪವಿತ್ರ ಗೌಡ ಅವರಿಗೆ ಹಲವು ಅಶ್ಲೀಲ ಮೆಸೇಜುಗಳನ್ನು ಕಳುಹಿಸಿದ್ದರು ಎಂದು ಆರೋಪಿಸಲಾಗಿದೆ.
ಪವಿತ್ರ ಗೌಡ ಅವರಿಗೆ ಈ ರೀತಿಯ ಮೆಸೇಜುಗಳನ್ನು ಕಳುಹಿಸಿದಂತೆ ಹಲವು ಬಾರಿ ಎಚ್ಚರಿಕೆ ನೀಡಿದರೂ ಅವರು ಕೇಳದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿದೆ ಎನ್ನಲಾಗಿದೆ. ಈ ಕೊಲೆ ಪ್ರಕರಣದ ಬೆನ್ನು ಹತ್ತಿದ ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ನಾಲ್ವರು ಹಂತಕರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು.
ವಿಚಾರಣೆ ವೇಳೆ ಹಂತಕರು ನಟ ದರ್ಶನ್ ಅವರ ಸೂಚನೆಯ ಮೇರೆಗೆ ಈ ಕೊಲೆ ಮಾಡಲಾಗಿದೆ. ಹತ್ಯೆ ನಡೆದ ಸಮಯದಲ್ಲಿ ಆ ಸ್ಥಳದಲ್ಲಿ ನಟ ದರ್ಶನ್ ಕೂಡ ಹಾಜರಿದ್ದರು ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅಗತ್ಯ ಸಾಕ್ಷಿಗಳನ್ನು ಕಲೆಹಾಕಿ ಪೊಲೀಸರು ದರ್ಶನ್ ಅವರನ್ನು ಬಂಧಿಸಿದ್ದಾರೆ.
ನಟ ದರ್ಶನ್ ಅವರು ಸ್ಯಾಂಡಲ್ ವುಡ್ ನ ನಟಿ ಪವಿತ್ರ ಗೌಡ ಅವರೊಂದಿಗೆ ಅತ್ಯಂತ ಆತ್ಮೀಯರಾಗಿದ್ದಾರೆ ಇತ್ತೀಚೆಗೆ ನಟಿ ಪವಿತ್ರಾ ಗೌಡ ಅವರು ದರ್ಶನ್ ಅವರೊಂದಿಗಿನ ಹಲವು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮೂಲಕ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದರು