ಮುಂಬಯಿ: ಹಲವು ದಾಖಲೆಗಳನ್ನು ಕಂಡ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ ಗೆಲುವಿನ ಹೊಸ್ತಿನಲ್ಲಿ ಮುಗ್ಗರಿಸಿತು. ಬ್ರಬೌರ್ನ್ ಸ್ಟೇಡಿಯಂನಲ್ಲಿ ಸೋಮವಾರ ರಾತ್ರಿ ನಡೆದ ಟಾಟಾ ಐಪಿಎಲ್ ಪಂದ್ಯಾವಳಿಯ 30ನೇ ಪಂದ್ಯದಲ್ಲಿ ಟಾಸ್ ಗೆದ್ದ ಕೋಲ್ಕತಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ರಾಜಸ್ಥಾನದ ಆರಂಭಿಕ ಜೋಸ್ ಬಟ್ಲರ್ ಟೂರ್ನಿಯ ಎರಡನೇ ಶತಕದೊಂದಿಗೆ ಅಬ್ಬರಿಸಿದರು (103 ರನ್, 61 ಎಸೆತ, 9 ಬೌಂಡರಿ 5 ಸಿಕ್ಸರ್). ದೇವದತ್ತ ಪಡಿಕ್ಕಲ್ (24), ನಾಯಕ ಸಂಜು ಸ್ಯಾಮ್ಸನ್ (38 ರನ್, 19 ಎಸೆತ, 3 ಬೌಂಡರಿ, 2 ಸಿಕ್ಸರ್) ಹಾಗೂ ಶಿಮ್ರನ್ ಹ್ಯಾಟ್ಮರ್ ಆಜೇಯ 26 ರನ್ (13 ಎಸೆತ, 2 ಬೌಂಡರಿ, 2 ಸಿಕ್ಸರ್) ಅಮೋಘ ಆಟದ ನೆರವಿನೊಂದಿಗೆ ಈ ಟೂರ್ನಿಯ ಗರಿಷ್ಠ ಮೊತ್ತ 217 ರನ್ ಪೇರಿಸಿತು. ಇಷ್ಟರ ಮಧ್ಯೆಯೂ ಸುನೀಲ್ ನಾರಾಯಣ ಕೇವಲ 21 ರನ್ ನೀಡಿ 2 ವಿಕೆಟ್ ಕಿತ್ತರು.
ಗುರಿ ಬೆನ್ನಟ್ಟಿದ ಕೋಲ್ಕತಾ ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡರೂ ಆರನ್ ಫಿಂಚ್ (28 ರನ್, 28 ಎಸೆತ, 9 ಬೌಂಡರಿ, 2 ಸಿಕ್ಸರ್), ನಾಯಕ ಶ್ರೇಯಸ್ ಅಯ್ಯರ್ (85 ರನ್, 51 ಎಸೆತ, 7 ಬೌಂಡರಿ, 4 ಸಿಕ್ಸರ್) ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದರಿಂದ ಗೆಲುವು ಬಹುತೇಕ ಖಚಿತವಾಗಿತ್ತು. ಈ ಹೊತ್ತಿನಲ್ಲಿ ಚಹಲ್ (40 ರನ್ ನೀಡಿ 5 ವಿಕೆಟ್) ಹ್ಯಾಟ್ರಿಕ್ ಸಂಪಾದಿಸಿ ಪಂದ್ಯವನ್ನು ತಿರುಗಿಸಿದರು. ಅರ್ಹವಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಒಲಿಯಿತು. ಪಂದ್ಯದ ಕಥೆ ಮುಗಿಯಿತು ಎನ್ನುವ ಹೊತ್ತಿಗೆ ಉಮೇಶ್ ಯಾದವ್ 9 ಎಸೆತಗಳಲ್ಲಿ 21 ರನ್ ದೋಚಿ ರೋಚಕತೆ ಒದಗಿಸಿದರು. ಕೊನೆಯ ಓವರ್‌ನಲ್ಲಿ ಒಬೆಡ್ ಮೆಕಾಯ್ ಉಳಿದೆರಡೂ ವಿಕೆಟ್ ಕಿತ್ತು ರಾಜಸ್ಥಾನದ ಗೆಲುವನ್ನು ಖಾತ್ರಿಗೊಳಿಸಿದರು