ಬೆಂಗಳೂರು,ಸೆ. 20-
ಕಿತ್ತೂರು ಕರ್ನಾಟಕದ ಹಲವು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಕಳಸಾ ಬಂಡೂರಿ ಯೋಜನೆಗೆ ಅನುಮತಿ ನೀಡುವ ವಿಚಾರದಲ್ಲಿ ಕರ್ನಾಟಕ ಮತ್ತು ಗೋವಾ ಸರ್ಕಾರದ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ.
ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಈ ಯೋಜನೆಗೆ ಕೇಂದ್ರ ಮತ್ತು ಗೋವಾ ಸರ್ಕಾರಗಳು ಅನುಮತಿ ನೀಡದೇ ಹೋದರೆ ಗೋವಾದ ವಿದ್ಯುತ್ ಯೋಜನೆಗಾಗಿ ಕರ್ನಾಟಕ ನೀಡಿರುವ ತಾತ್ವಿಕ ಅನುಮೋದನೆಯನ್ನು ವಾಪಸ್ ಪಡೆಯಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ಕರ್ನಾಟಕದ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಹಾಗೂ ಗೋವಾ ಸರ್ಕಾರ ಹಸಿರು ನಿಶಾನೆ ತೋರುವವರೆಗೂ ಗೋವಾ-ತಮ್ನಾ ರ್ ವಿದ್ಯುತ್ ಮಾರ್ಗಕ್ಕಾಗಿ ರಾಜ್ಯದ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಮರ ಕಡಿಯುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಪುರಸ್ಕೃತ ಗೋವಾ ಸರ್ಕಾರದ ಈ ಯೋಜನೆಯ ಬಗ್ಗೆ ಪ್ರಸ್ತಾಪ ಬಂದಾಗ ಸುಮಾರು 1 ಲಕ್ಷ ಮರಗಳನ್ನು ಕಡಿಯಬೇಕಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನಾನು ಯೋಜನೆಗೆ ಅನುಮತಿ ನೀಡದಂತೆ ಸೂಚಿಸಲಾಗಿತ್ತು ಎಂದು ತಿಳಿಸಿದರು.
ಈ ನಡುವೆ ಅಂತಾರಾಜ್ಯಗಳಿಗೆ ಸಂಬಂಧಪಟ್ಟ ಮಹತ್ವದ ಕಾಮಗಾರಿಗಳ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಿ ಯೋಜನೆಯ ಈ ಬಗ್ಗೆ ಪ್ರಶ್ನಿಸಿದ್ದರು. ಅಂತಿಮವಾಗಿ ಗೋವಾ ಸರ್ಕಾರ ಇದೀಗ13 ಸಾವಿರ ಮರಗಳನ್ನು ಕಡಿಯಲು ಒಪ್ಪಿಗೆ ಕೊಡಿ ಎಂದು ಪರಿಷ್ಕೃತ ಪ್ರಸ್ತಾಪ ಸಲ್ಲಿಸಿದ್ದಾರೆ. ಆದರೆ, ಎಲ್ಲಿಯವರೆಗೆ ಗೋವಾ ಹಾಗೂ ಕೇಂದ್ರ ಸರ್ಕಾರ ಮಹದಾಯಿ ಯೋಜನೆ ಅನುಷ್ಠಾನಕ್ಕೆ ಅನುಮತಿ ನೀಡುವುದಿಲ್ಲವೋ, ಅಲ್ಲಿಯವರೆಗೆ ನಾವು ಈ ಯೋಜನೆಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.