ಹಾಸನ,ಡಿ. 5:
ಜೆಡಿಎಸ್ ನ ಭದ್ರಕೋಟೆ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ತವರಿನಲ್ಲಿ ಬೃಹತ್ ಶಕ್ತಿ ಪ್ರದರ್ಶನ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಸ್ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ಮತ್ತು ಜೆಡಿಎಸ್ ಪ್ರಗತಿಯ ವಿರೋಧಿಗಳು ಬಡವರ ವಿರೋಧಿಗಳು ತಾವು ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ಮೂಲಕ ಇದರ ಫಲಾನುಭವಿಗಳನ್ನು ಅಪಮಾನಗೊಳಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಸುಭದ್ರ ಸರ್ಕಾರ ಕೊಟ್ಟಿದೆ. ಮಾತ್ರವಲ್ಲ ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. 2013 ರಲ್ಲಿ ಕೊಟ್ಟ ಮಾತಿನಂತೆ ಹಲವಾರು ಭಾಗ್ಯಗಳನ್ನು ಜಾರಿ ಮಾಡಿದೆವು. ಈ ಬಾರಿ ಐದಕ್ಕೆ ಐದೂ ಗ್ಯಾರಂಟಿಗಳ ಜೊತೆಗೆ ಪ್ರಣಾಳಿಕೆಯಲ್ಲಿ ಘೋಷಿಸಿದ ಎಲ್ಲಾ ಗ್ಯಾರಂಟಿಗಳನ್ನೂ ಈಡೇರಿಸುತ್ತಿದ್ದೇವೆ ಎಂದು ಒಂದೊಂದಾಗಿ ವಿವರಿಸಿದರು.
ಬಿಜೆಪಿಯಾಗಲಿ, ಜೆಡಿಎಸ್ ಆಗಲಿ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ. ಪ್ರಧಾನಿ ಮೋದಿ ಅವರ ಸರ್ಕಾರ ನಾವು ದುಡ್ಡು ಕೊಡ್ತೀವಿ ಅಂದರೂ ಅಕ್ಕಿ ಕೊಡಲಿಲ್ಲ. ಇಂಥಾ ಜನದ್ರೋಹಿ ಸರ್ಕಾರ ಬಿಜೆಪಿಯದ್ದು ಎಂದರು.
ನಾವು ಐದು ಗ್ಯಾರಂಟಿಗಳಿಗಾಗಿ 56 ಸಾವಿರ ಕೋಟಿ ರೂಪಾಯಿಯನ್ನು ರಾಜ್ಯದ ಜನರ ಖಾತೆಗೆ ನೇರವಾಗಿ ಹಾಕುತ್ತಿದ್ದೇವೆ. ಈ ಐದು ಗ್ಯಾರಂಟಿಗಳನ್ನು ಪಡೆಯುತ್ತಿರುವ ಫಲಾನುಭವಿಗಳನ್ನು ಅವಮಾನಿಸುತ್ತಿರುವ ಬಿಜೆಪಿ-ಜೆಡಿಎಸ್ ದೊಡ್ಡ ಜನದ್ರೋಹಿಗಳು ಎಂದು ಗುಡುಗಿದರು
ಕೇಂದ್ರದಲ್ಲಿ ಮಂತ್ರಿಯಾಗಿರುವ ಹೆಚ್.ಡಿ.ಕುಮಾರಸ್ವಾಮಿಯವರು ಮೇಕೆದಾಟು ವಿಚಾರದಲ್ಲಿ ಮೌನ ಆಗಿರುವುದು ಏಕೆ? ಬೆಂಗಳೂತಿನ ಜನತೆಗೆ ನೀರು ಬೇಕಾಗಿದೆ. ಕೊಡಿಸಲಿ ಎಂದು ಸವಾಲು ಹಾಕಿದರು.
ಮಾಜಿ ಪ್ರಧಾನಿ ದೇವೇಗೌಡರು ನನಗಿಂತ 15 ವರ್ಷ ಹಿರಿಯರು. ಅವರು ಅಷ್ಟೆ ಘನತೆಯಿಂದ ಮಾತಾಡಬೇಕಿತ್ತು. ಯಾವತ್ತೂ ಗರ್ವ ತೋರಿಸದ ನನಗೆ, “ಸಿದ್ದರಾಮಯ್ಯ ಅವರ ಗರ್ವಭಂಗ ಮಾಡ್ತೀನಿ” ಎಂದರು. ಇದನ್ನು ನೀವು ಒಪ್ಪಿಕೊಳ್ಳುತ್ತೀರಾ, ಸಹಿಸುತ್ತೀರಾ ಎಂದು ಪ್ರಶ್ನಿಸಿದರು.
ವರನಟ ರಾಜ್‌ಕುಮಾರ್ ಅವರು ಅಭಿಮಾನಿ ದೇವರು ಎಂದು ಹೇಳುತ್ತಿದ್ದರು. ನಮಗೆ ಮತದಾರರೇ ದೇವರು. ಮೂರು ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಚನ್ನಪಟ್ಟಣದಲ್ಲಿ ಈ ಜಿಲ್ಲೆಗೆ ಸೇರಿದ ಮಹಾನಾಯಕರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದರು. ಶಿಗ್ಗಾವಿಯಲ್ಲಿ ಬಸವರಾಜ ಬೊಮ್ಮಾಯಿ ಅವರ ಪುತ್ರ ಸ್ಪರ್ಧೆ ಮಾಡಿದ್ದರು. ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರಲಿಲ್ಲ. ಆದರೆ, ಕಾರ್ಯಕರ್ತರು, ಮತದಾರರ ಆಶೀರ್ವಾದದಿಂದ ಈ ಎರಡೂ ಕ್ಷೇತ್ರಗಳಲ್ಲಿ ಈಗ ಕಾಂಗ್ರೆಸ್ ಜಯಗಳಿಸಿದೆ ಎಂದರು.
ಬಿಪಿಎಲ್ ಕಾರ್ಡ್ ರದ್ದತಿ ಮಾಡುತ್ತಿರುವುದಾಗಿ ಬಿಜೆಪಿ-ಜೆಡಿಎಸ್‌ನವರು ಆರೋಪಿಸುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ. ಉಚಿತ ಅಕ್ಕಿ ನೀಡಿದವರು, ಆಹಾರ ಭದ್ರತೆ ಯೋಜನೆ ಜಾರಿಗೊಳಿಸಿದ್ದು ನಮ್ಮ ಸರ್ಕಾರ. 5ರಿಂದ 7 ಕೆ.ಜಿ. ಅಕ್ಕಿ ಕೊಡುವ ತೀರ್ಮಾನ ಮಾಡಿದ್ದು ನಮ್ಮ ಸರ್ಕಾರ. 5 ಕೆ.ಜಿ. ಅಕ್ಕಿಯ ಜೊತೆಗೆ ಮತ್ತೆ 5 ಕೆ.ಜಿ. ಅಕ್ಕಿ ಕೊಡುವ ತೀರ್ಮಾನ ಮಾಡಿದವರು ನಾವು. ಬಡವರಿಗೆ ಹೆಚ್ಚುವರಿ ಅಕ್ಕಿ ಕೊಡುವಂತೆ ಕೇಂದ್ರ ಸರ್ಕಾರಕ್ಕೆ ಕೋರಿದರೆ, ಅಕ್ಕಿ ಕೊಡಲಿಲ್ಲ. ಅದರಿಂದ 5 ಕೆ.ಜಿ. ಅಕ್ಕಿಯ ಬದಲಾಗಿ ₹170 ಕೊಡಲಾಗುತ್ತಿದೆ ಎಂದರು.
ಬೇರೆ ಯಾವುದೇ ರಾಜ್ಯದಲ್ಲಿ 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡುತ್ತಿರುವುದನ್ನು ತೋರಿಸಿದರೆ, ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ. ಬಡವರ ಹೊಟ್ಟೆಯ ಮೇಲೆ ಹೊಡೆಯುವವರು ಬಿಜೆಪಿ, ಜೆಡಿಎಸ್‌ನವರು. ಅವರಿಗೆ ಯಾವ ನೈತಿಕ ಹಕ್ಕಿದೆ ಎಂದು ಪ್ರಶ್ನಿಸಿದರು.
ಗ್ಯಾರಂಟಿಗಳನ್ನು ಜಾರಿ ಮಾಡಲು ಸಾಧ್ಯವಿಲ್ಲ, ಜಾರಿ ಮಾಡಿದರೆ ಬೊಕ್ಕಸ ಖಾಲಿಯಾಗುತ್ತದೆ ಎಂದು ಪ್ರಧಾನಿ ಮೋದಿ ಸೇರಿದಂತೆ ಪ್ರತಿಪಕ್ಷಗಳ ನಾಯಕರು ಗ್ಯಾರಂಟಿಗಳನ್ನು ವಿರೋಧ ಮಾಡಿದರು. ಹಾಗಾಗಿ ಅವರು ಬಡವರ ವಿರೋಧಿಗಳು ಎಂದರು.
ನಬಾರ್ಡ್‌ನಿಂದ ಶೇ 4.5 ರಷ್ಟು ಬಡ್ಡಿದರದೊಂದಿಗೆ ನಬಾರ್ಡ್‌ನಿಂದ ಸಾಲ ಪಡೆದು, ₹5 ಲಕ್ಷದವರೆಗೆ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಆದರೆ, 5,600 ಕೋಟಿಯಿದ್ದ ನಬಾರ್ಡ್ ಸಾಲ ಈಗ 2,340 ಕೋಟಿಗೆ ಇಳಿಕೆ ಮಾಡಲಾಗಿದೆ. ಶೇ 58 ರಷ್ಟು ಕಡಿತ ಮಾಡಲಾಗಿದೆ. ಈ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದರೂ, ಪ್ರಯೋಜನವಾಗಿಲ್ಲ. ಮಣ್ಣಿನ ಮಗ ಎಂದು ಹೇಳಿಕೊಳ್ಳುವ ದೇವೇಗೌಡರು ಈ ಬಗ್ಗೆ ಪ್ರಶ್ನೆ ಮಾಡಬೇಕಲ್ಲವೇ? ರಾಜ್ಯಕ್ಕೆ ಅನ್ಯಾಯವಾದಾಗ, ರಾಜ್ಯದ ಬಿಜೆಪಿ ಸಂಸದರು ಅದರ ವಿರುದ್ಧ ಧ್ವನಿ ಎತ್ತಬೇಕು ಎಂದರು.
Previous Articleಸಿಎಂ ವಿರುದ್ಧ ಪ್ರಕರಣ ಮುಂದೂಡಿದ ಹೈಕೋರ್ಟ್.
Next Article ಒಂದೇ ಚಿತ್ರದಲ್ಲಿ ವಿವಿಧ ಕ್ಷೇತ್ರಗಳ ದಿಗ್ಗಜರು