ಬೆಂಗಳೂರು,ಆ.14:
ವಿಧಾನಸಭೆ ಚುನಾವಣೆ ಸಮಯದಲ್ಲಿ ರಾಜ್ಯದ ಜನತೆಗೆ ನೀಡಿದ ಭರವಸೆಯಂತೆ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಕೆಲವರಿಗೆ ಈ ಯೋಜನೆಗಳು ಅಗತ್ಯವಿಲ್ಲ ಹೀಗಾಗಿ ಅಂತವರನ್ನು ಯೋಜನೆಯಿಂದ ಮುಕ್ತಗೊಳಿಸಬೇಕು ಎಂಬ ವಾದ ಮಂಡನೆಯಾಗುತ್ತಿದೆ.
ಚುನಾವಣೆಗೆ ಮುನ್ನ ಹೈಕಮಾಂಡ್ ರಾಜ್ಯದ ಎಲ್ಲಾ ನಾಗರಿಕರಿಗೂ ಯೋಜನೆ ಜಾರಿಗೊಳಿಸುತ್ತೇವೆ ಎಂದು ಘೋಷಿಸಿತ್ತು ಈ ಹಿನ್ನೆಲೆಯಲ್ಲಿ ಇದೀಗ ಇವುಗಳನ್ನು ಪರಿಷ್ಕರಿಸುವ ನಿರ್ಧಾರ ಕೂಡ ಹೈಕಮಾಂಡ್ ಮಾಡಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ದೆಹಲಿಗೆ ತೆರಳಿ ಹೈಕಮಾಂಡ್ ಜೊತೆ ಇವುಗಳ ಕುರಿತು ಮಾತನಾಡಿರುವ ಅವರು ಗ್ಯಾರಂಟಿ ಯೋಜನೆಗಳು ಅನೇಕರಿಗೆ ಅಗತ್ಯವಿಲ್ಲ ಅಂತಹವರನ್ನು ಯೋಜನೆಯಿಂದ ಹೊರಗಿಡಬೇಕಾಗಿದೆ ಹೀಗಾಗಿ ಯೋಜನೆ ಪರಿಷ್ಕರಿಸಲು ಅನುಮತಿ ನೀಡುವಂತೆ ಮಾನವಿ ಮಾಡಿರುವುದಾಗಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವೈಜ್ಞಾನಿಕವಾಗಿ ಈ ಯೋಜನೆಯನ್ನು ಮರು ಪರಿಷ್ಕರಣೆ ಮಾಡಬೇಕು ಎಂಬ ಅಭಿಪ್ರಾಯ ಹೈಕಮಾಂಡ್ ಜೊತೆ ಹಂಚಿಕೊಂಡಿದ್ದೇನೆ ಇದರ ಅರ್ಥ ನಾನು ಗ್ಯಾರಂಟಿ ಯೋಜನೆಗಳ ವಿರೋಧಿ ಅಲ್ಲ ಯಾರಿಗೆ ಅಗತ್ಯ ಇದೆಯೋ ಅವರಿಗೆ ಈ ಯೋಜನೆಯ ಸೌಲಭ್ಯ ಸಿಗಬೇಕು ಎನ್ನುವುದು ನನ್ನ ಮೆಲುವಾಗಿದೆ ಎಂದು ಸ್ಪಷ್ಟಪಡಿಸಿದರು .
ಗ್ಯಾರಂಟಿ ಯೋಜನೆಗಳಿಗೆ ಸಂಪನ್ಮೂಲದ ಕೊರತೆ ಇಲ್ಲ ಬಜೆಟ್ ನಲ್ಲಿ ಈ ಯೋಜನೆಗಳಿಗಾಗಿ 56 ಸಾವಿರ ಕೋಟಿ ನಿಗದಿಪಡಿಸಲಾಗಿದೆ. ಆದರೆ, ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಮಾತ್ರ ಯೋಜನೆ ನೀಡಿ. ಶ್ರೀಮಂತರನ್ನು ಯೋಜನೆಯಿಂದ ಹೊರಗಿಡಬೇಕು.ಇದರಿಂದಾಗಿ ವಾರ್ಷಿಕವಾಗಿ ರೂ. 10,000 ಕೋಟಿ ಉಳಿತಾಯವಾಗಲಿದೆ ಎಂದು ವಿವರಿಸಿದರು.
ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವಂತೆ ನಾನು ಹೇಳಿಲ್ಲ. ಈ ಗ್ಯಾರಂಟಿ ಯೋಜನೆಗಳು ಬಡವರಿಗೆ ತಲುಪಬೇಕು, ಶ್ರೀಮಂತರಿಗೆ ಬೇಡ ಎಂದು ಜನ ಹೇಳುತ್ತಿದ್ದಾರೆ. ಹೋಟೆಲ್ ಗಳಲ್ಲಿ, ಕೆಲಸಗಾರರು ಸೇರಿದಂತೆ ಎಲ್ಲೆಡೆಯೂ ಇದೇ ಚರ್ಚೆಯಾಗುತ್ತಿದೆ. ಶ್ರೀಮಂತರಿಗೆ ಯಾಕೆ ನೀಡುತ್ತಿದ್ದೀರಿ? ಬಡವರಿಗೆ ನೀಡಿ ಎಂದು ಪ್ರತಿಪಕ್ಷಗಳು ಕೂಡಾ ಕೇಳಿವೆ ಎಂದರು.
ಯೋಜನೆಗಳ ಪರಿಷ್ಕರಣೆಯಿಂದ ಸರ್ಕಾರದಿಂದ ಜನಪ್ರಿಯತೆ ಹೆಚ್ಚಲಿದೆ. ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಲು ಯಾರು ಹೇಳಿದ್ದು?ಅದನ್ನು ನಾವು ಸ್ಥಗಿತಗೊಳಿಸುವುದಿಲ್ಲ. ಇದರ ಬಗ್ಗೆ ಕ್ಯಾಬಿನೆಟ್ ಹಾಗೂ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ನಡೆದಿಲ್ಲ. ಇದರ ಬಗ್ಗೆ ಪಕ್ಷದ ವರಿಷ್ಠರು ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದರು.