ಮಂಗಳೂರು,ಜು.10- ಮನೆಗಳ ಕಿಟಕಿ ಕಂಬಿಗಳನ್ನು ಕತ್ತರಿಸಿ ಒಳನುಗ್ಗಿ ಬೆದರಿಸಿ ಕಳವು ಮಾಡುತ್ತಾ ಸಿಕ್ಕಿಬಿದ್ದ ಮಧ್ಯಪ್ರದೇಶ ಮೂಲದ ಚಡ್ಡಿ ಗ್ಯಾಂಗ್ ನ ಇಬ್ಬರು ದರೋಡೆಕೋರರಿಗೆ ನಗರ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
ಬಂಧಿತ ದರೋಡೆಕೋರರ ಗ್ಯಾಂಗ್ ನ ನಾಲ್ವರನ್ನು ಇಂದು ಬೆಳಗ್ಗೆ ನಗರದ ಹೊರವಲಯದ ಮುಲ್ಕಿ ಬಳಿ ಸ್ಥಳ ಮಹಜರು ಮಾಡಲು ಹೋದಾಗ ಅವರಲ್ಲಿ ಇಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹೊಡೆದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಕಲೇಶಪುರದಿಂದ ನಿನ್ನೆ ಬಂಧಿಸಿ ಕರೆತಂದಿದ್ದ ಕಳ್ಳರನ್ನು ಈ ಸ್ಥಳಕ್ಕೆ ಕರೆದೊಯ್ಯಲಾಗಿತ್ತು. ಉಡುಪಿಯಲ್ಲಿ ಒಬ್ಬರು ವೃದ್ಧ ದಂಪತಿಯ ಮನೆ ದರೋಡೆ ಮಾಡಿದ್ದ ಕಳ್ಳರು, ಆ ಮನೆಯ ಕಾರನ್ನೂ ಕದ್ದು ಅದರಲ್ಲಿ ಪರಾರಿಯಾಗಿದ್ದರು. ಆ ಕಾರನ್ನು ಬಿಟ್ಟು ಬೆಂಗಳೂರಿಗೆ ಬಸ್ಸಿನಲ್ಲಿ ಹೊರಟಿದ್ದರು. ಕಾರು ಇದ್ದ ಸ್ಥಳಕ್ಕೆ ಮಹಜರಿಗೆ ಇವರನ್ನು ಕರೆತಂದಾಗ ಇಬ್ಬರು ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದರು.
ಎಎಸ್‌ಐ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಇವರ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಎಲ್ಲಿ ದರೋಡೆ:
ಮಂಗಳೂರಿನ ಕಾಪಿಕಾಡು ಬಳಿಯ ಕೋಟೆಕಣಿ ಎಂಬಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆಡ್ಡಿ, ಬನಿಯನ್ ಗ್ಯಾಂಗ್ಗೆ ಸೇರಿದ ಮಧ್ಯಪ್ರದೇಶದ ದರೋಡೆಕೋರರಾದ ರಾಜು ಸಿಂಗ್ವಾನಿಯ (24), ಮಯೂರ್ (30), ಬಾಲಿ (22), ವಿಕ್ಕಿ (21) ನನ್ನು ಬಂಧಿಸಲಾಗಿತ್ತು.
ವೃದ್ಧ ದಂಪತಿಗಳಿದ್ದ ಮನೆಗೆ ಮೂರು ದಿನಗಳ ಹಿಂದೆ ಕನ್ನ ಹಾಕಿದ್ದ ಈ ತಂಡ ದರೋಡೆ ಮಾಡಿತ್ತು. ವೃದ್ಧ ದಂಪತಿಗೆ ಹಲ್ಲೆ ಮಾಡಿ ಲೂಟಿ ಮಾಡಿದ್ದರು. ಹಲ್ಲೆಗೊಳಗಾದ ವಿಕ್ಟರ್ ಮೆಂಡೋನ್ಸಾ(71), ಪ್ಯಾಟ್ರಿಷಾ ಮೆಂಡೋನ್ಸಾ(60) ಆಸ್ಪತ್ರೆಗೆ ದಾಖಲಾಗಿದ್ದರು. ಆರೋಪಿಗಳಿಂದ 12 ಲಕ್ಷ ರೂ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣ, ಸ್ಯಾಮ್ ಸಂಗ್ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು 1 ಲಕ್ಷ ರೂ. ಮೌಲ್ಯದ 10 ಬ್ರಾಂಡೆಡ್ ವಾಚ್ ಗಳು, ರೂ 3೦00 ರೂಪಾಯಿ ನಗದು ಹಣವನ್ನು ದರೋಡೆ ಮಾಡಿದ್ದರು. ಪ್ರಕರಣ ನಡೆದ ಮಾಹಿತಿ ಬಂದ ಕೂಡಲೇ ಉರ್ವಾ ಠಾಣೆಯ ಪೊಲೀಸ್ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದರು. ಅದರಲ್ಲಿ ಕೆ.ಎಸ್.ಅರ್.ಟಿ.ಸಿ ಬಸ್ನಲ್ಲಿ ದರೋಡೆಕೋರರರು ಮಂಗಳೂರು ಕಡೆಗೆ ಪ್ರಯಾಣಿಸಿದ್ದು ಕಂಡು ಬಂದಿತ್ತು. ಬಳಿಕ ಬಸ್ ಫಾಲೋ ಮಾಡಿ ಬಂಧಿಸಿದ್ದರು.
ಉಡುಪಿಯಲ್ಲಿ ಕೆಲ ತಿಂಗಳ ಹಿಂದೆ ʼಬನಿಯನ್ ಗ್ಯಾಂಗ್ʼ ಸಕ್ರಿಯವಾಗಿತ್ತು. ಬನಿಯನ್ ಹಾಗೂ ಚಡ್ಡಿ ಧರಿಸಿ ಬರುವ ಈ ಕಳ್ಳರು ಮೈಗೆ ಎಣ್ಣೆ ಹಚ್ಚಿಕೊಂಡು ಫೀಲ್ಡಿಗಿಳಿಯುತ್ತಾರೆ. ಎಲ್ಲರೂ ಗಾಢ ನಿದ್ರೆ ಜಾರುವ ಸಮಯಕ್ಕೆ ಕಾದುಕುಳಿತು ನಂತರ ಕಳ್ಳತನಕ್ಕೆ ಮುಂದಾಗುತ್ತಾರೆ. ರಾತ್ರೋ ರಾತ್ರಿ ಕಳ್ಳ ಬೆಕ್ಕಿನಂತೆ ನುಗ್ಗುವ ಇವರು ಕ್ಷಣಾರ್ಧದಲ್ಲಿ ಚಿನ್ನಾಭರಣವನ್ನು ಲೂಟಿ ಮಾಡಿ ಪರಾರಿ ಆಗುತ್ತಾರೆ.
ಈ ಕಚ್ಚಾ ಬನಿಯನ್ ಗ್ಯಾಂಗ್ ಪತ್ತೆ ಮಾಡುವುದೇ ಉಡುಪಿ ಪೊಲೀಸರಿಗೆ ಸವಾಲಾಗಿತ್ತು.
ಸಂತೆಕಟ್ಟೆಯಲ್ಲಿ ನಡೆದಿದ್ದ ಮನೆ ದರೋಡೆ ಪ್ರಕರಣದಲ್ಲಿ ಈ ತಂಡದ ಕೃತ್ಯ ಬಯಲಾಗಿತ್ತು. ಕೃತ್ಯದ ಬಳಿಕ ಈ ಗ್ಯಾಂಗ್ ಸಿಂಗಲ್ ಚಪ್ಪಲಿಯನ್ನು ಬಿಟ್ಟು ಹೋಗುತ್ತಿತ್ತು. ಸೊಂಟಕ್ಕೆ ಚಪ್ಪಲಿ ಕಟ್ಟಿಕೊಂಡು ಬರುವ ಈ ಗ್ಯಾಂಗ್ ಡೆಲ್ಲಿ ಕ್ರೈಮ್-2 ವೆಬ್ ಸೀರೀಸ್ ಕಚ್ಚಾ ಬನಿಯನ್ ಗ್ಯಾಂಗ್ ನೆನಪಿಸುವಂತಿತ್ತು.
Previous Articleಸಂಕಷ್ಟಕ್ಕೆ ಸಿಲುಕಿದ ಸಿದ್ದರಾಮಯ್ಯ.
Next Article ದರ್ಶನ್ ಪ್ರಕರಣ: ಸರ್ಕಾರಕ್ಕೆ ನೋಟಿಸ್.