ಬೆಂಗಳೂರು.
ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಮೀಸಲಿಟ್ಟ ಹಣವನ್ನು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿರುವ ಬೆನ್ನಲ್ಲೇ ಈ ಸರ್ಕಾರ ದಲಿತ ವಿರೋಧಿ ಎಂದು ಆರೋಪಿಸುವ ಮೂಲಕ ಹೊಸ ರಾಜಕೀಯ ಮಾಡುತ್ತಿರುವ ಬಿಜೆಪಿ ಇದೀಗ ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕನ ಹುದ್ದೆಯನ್ನು ಪರಿಶಿಷ್ಟ ಸಮುದಾಯಕ್ಕೆ ನೀಡಿದೆ.
ಪರಿಷತ್ತಿಗೆ ಮೊದಲ ಬಾರಿಗೆ ಆಯ್ಕೆಯಾಗಿರುವ ಛಲವಾದಿ ನಾರಾಯಣಸ್ವಾಮಿ ಅವರನ್ನು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕನಾಗಿ ಆಯ್ಕೆ ಮಾಡುವ ಮೂಲಕ ಆಶ್ಚರ್ಯ ಮೂಡಿಸಿದೆ.
ಛಲವಾದಿ ನಾರಾಯಣಸ್ವಾಮಿ ಮೂಲತಃ ಕಾಂಗ್ರೆಸ್ ನಾಯಕರಾಗಿದ್ದು ಕಳೆದ ಲೋಕಸಭೆ ಚುನಾವಣೆ ಸಮಯದಲ್ಲಿ ಅವರು ಕಾಂಗ್ರೆಸ್ ತೊರದು ಬಿಜೆಪಿ ಸೇರ್ಪಡೆಯಾಗಿದ್ದರು ಆನಂತರ ಅವರನ್ನು ಬಿಜೆಪಿ ಪರಿಶಿಷ್ಟ ಜಾತಿಯ ಮೋರ್ಚಾದ ರಾಜ್ಯ ಅಧ್ಯಕ್ಷ ಹಾಗೂ ವಕ್ತಾರನ್ನಾಗಿ ನೇಮಕ ಮಾಡಿತ್ತು.
ಇದೀಗ ಅವರನ್ನು ವಿಧಾನಪರಿಷತ್ ಪ್ರತಿಪಕ್ಷ ನಾಯಕನಾಗಿ ನೇಮಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಲು ತಂತ್ರ ರೂಪಿಸಿದೆ.
ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತರಾಗಿರುವ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ಸಿನಲ್ಲಿ ಸಿದ್ದರಾಮಯ್ಯ ಅವರಿಗೆ ಹೆಚ್ಚಿನ ಮಾನ್ಯತೆ ನೀಡಲಾಗುತ್ತಿದೆ ಎಂದು ಆರೋಪಿಸಿ ಪಕ್ಷ ತೊರೆದಿದ್ದರು ಸಿದ್ದರಾಮಯ್ಯ ಅವರ ಕಟು ಟೀಕಕಾರರಾಗಿ ಗುರುತಿಸಿಕೊಂಡಿರುವ ಛಲವಾದಿ ನಾರಾಯಣಸ್ವಾಮಿ ಅವರ ನೇಮಕ ಕುತೂಹಲ ಮೂಡಿಸಿದೆ.
ಈ ನೇಮಕದ ಮೂಲಕ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕನ ಹುದ್ದೆ, ಬದಲಾಗುತ್ತದೆ ಎಂದು ಹಾರಾಡಿದ್ದ ಸುದ್ದಿಗಳಿಗೂ ತೆರೆ ಬಿದ್ದಂತಾಗಿದೆ.
Previous Articleವಾಲ್ಮೀಕಿ ಹಗರಕ್ಕೆ ಸಿಕ್ಕಿದೆ ಹೊಸ ಟ್ವಿಸ್ಟ್.
Next Article ಪೊಲೀಸರು ಇದನ್ನು ಮಾಡಲೇ ಬಾರದಂತೆ !.