ಮುಂಬರುವ ವಿಧಾನಸಭಾ ಚುನಾವಣೆಗೆ ಜೆಡಿಎಸ್ ರಣ ಕಹಳೆ ಮೊಳಗಿಸಿದೆ. ಪಕ್ಷವನ್ನು ಚುನಾವಣೆಗೆ ಸಜ್ಜುಗೊಳಿಸುವ ದೃಷ್ಟಿಯಿಂದ ಜನತಾ ಜಲಧಾರೆ ರಥಯಾತ್ರೆಗೆ ಚಾಲನೆ ನೀಡಲಾಗಿದೆ. ಇದಕ್ಕಾಗಿ ಹದಿನೈದು ಗಂಗಾ ರಥಗಳು ಯಾತ್ರೆ ಆರಂಭಿಸಿವೆ ಇವುಗಳ ಜತೆಗೆ 15 ತಂಡಗಳು ತೆರಳಲಿವೆ. ವಿವಿಧ ನದಿಗಳ ಪ್ರಮುಖ ಸ್ಥಳಗಳಿಗೆ ತೆರಳಿ ಜಲ ಸಂಗ್ರಹ ಮಾಡಿಕೊಂಡು ಮೇ 8ರಂದು ಬೆಂಗಳೂರು ನಗರಕ್ಕೆ ಎಲ್ಲ ರಥಗಳು ವಾಪಸ್ ಬರುತ್ತವೆ.
ಅನಂತರ ಅರಮನೆ ಮೈದಾನದಲ್ಲಿ ಸಮಾವೇಶ ಮಾಡಿ ಆ ರಥಗಳ ನೀರನ್ನು ಒಂದು ಬ್ರಹ್ಮ ಕಲಶಕ್ಕೆ ತುಂಬಿ ಪೂಜಿಸಿ ನಂತರ ಅಂದೇ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಆ ಕಲಶ ಪ್ರತಿಷ್ಟಾಪನೆ ಮಾಡಲಾಗುತ್ತದೆ. ಆ ಕಲಶಕ್ಕೆ ಮುಂದಿನ ಚುನಾವಣೆಯವರೆಗೆ ನಿತ್ಯ ಗಂಗಾ ಪೂಜೆ ಸಲ್ಲಿಸಲು ಕಾರ್ಯಕ್ರಮ ರೂಪಿಸಲಾಗಿದೆ.
ಮೈಸೂರು ಚಾಮುಂಡಿ ಬೆಟ್ಟದಲ್ಲಿ ನಾಡದೇವಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಮಾಜಿ ಸಿಎಂ ಕುಮಾರಸ್ವಾಮಿ ಜನತಾ ಜಲಧಾರೆ ರಥಯಾತ್ರೆಗೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ರಾಜ್ಯದ 180 ತಾಲೂಕಿನಲ್ಲಿ ಜಲಧಾರೆ ಯಾತ್ರೆ ಸಂಚರಿಸಲಿದೆ. ನಾಡಿನ ನೆಲ-ಜಲದ ವಿಚಾರದಲ್ಲಿ ರಾಜ್ಯಮತ್ತು ಕೇಂದ್ರ ಸರ್ಕಾರದಿಂದ ಆಗಿರುವ ದ್ರೋಹದ ಬಗ್ಗೆ ರಾಜ್ಯದ ಜನತೆಗೆ ಮನವರಿಕೆ ಮಾಡಲಾಗುತ್ತದೆ ಎಂದರು. ರಾಜ್ಯದ ಜನತೆ ಎರಡೂ ರಾಷ್ಟ್ರೀಯ ಪಕ್ಷಗಳಿಂದ ಬೇಸತ್ತಿದ್ದಾರೆ. ಹೀಗಾಗಿ ಪ್ರಾದೇಶಿಕ ಪಕ್ಷದ ಕಡೆ ಒಲವು ತೋರುತ್ತಿದ್ದಾರೆ. ಹಿಂದೆ ಕೇವಲ 2-3 ಸ್ಥಾನ ಪಡೆಯುತ್ತಿದ್ದ ಪಕ್ಷಗಳು ಈಗ ಅಧಿಕಾರ ಹಿಡಿಯುತ್ತಿವೆ. ಇಂತಹ ಸನ್ನಿವೇಶದಲ್ಲಿ ನಾವು 120 ಸ್ಥಾನ ಪಡೆಯುವುದು ಕಷ್ಟವಲ್ಲ ಎಂದು ಹೇಳಿದರು.
ಜೆಡಿಎಸ್‍ಗೆ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ನೀಡಿದರೆ ಐದು ವರ್ಷದಲ್ಲಿ ನಾಡಿನ ನೀರಾವರಿ ಯೋಜನೆ ಪೂರ್ಣಗೊಳಿಸುತ್ತೇನೆ. ಇಲ್ಲವಾದರೆ ಜೆಡಿಎಸ್ ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆ ಎಂದರು.