ವಿಭಿನ್ನ ಕಥಾಹಂದರ ಹೊಂದಿರುವ ಡಾಲಿ ಧನಂಜಯ್ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ “ಜಮಾಲಿಗುಡ್ಡ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬಿಝಿಯಾಗಿದೆ.
ಜಮಾಲಿಗುಡ್ಡ ಸಿನಿಮಾವನ್ನು ಕುಶಾಲ್ ಗೌಡ ಅವರು ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ನಿಹಾರಿಕಾ ಮೂವೀಸ್ ಮೂಲಕ ಶ್ರೀಹರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಇನ್ನು, ಟೈಟಲ್ಲೇ ಹೇಳುವಂತೆ, “ಜಮಾಲಿ ಗುಡ್ಡ’ ಎಂಬ ಕಾಲ್ಪನಿಕ ಊರಿನಲ್ಲಿ ನಡೆಯುವ ಒಂದಷ್ಟು ಘಟನೆಗಳು, ಪಾತ್ರಗಳ ಸುತ್ತ ಇಡೀ ಸಿನಿಮಾ ನಡೆಯುತ್ತದೆ. ಕೋವಿಡ್ ಮೊದಲನೇ ಲಾಕ್‌ಡೌನ್ ನಿರ್ದೇಶಕ ಕುಶಾಲ್ ಗೌಡ ಮಾಡಿಕೊಂಡಿದ್ದ ಕಥೆ ಸುಮಾರು ಎರಡು ವರ್ಷಗಳ ಬಳಿಕ ಸಿನಿಮಾ ರೂಪ ಪಡೆದುಕೊಳ್ಳುತ್ತಿದೆ.
“ಜಮಾಲಿ ಗುಡ್ಡ’ ಚಿತ್ರದ ಟೈಟಲ್‌ಗೆ “ಒನ್ಸ್ ಅಪಾನ್ ಎ ಟೈಮ್’ ಎಂಬ ಟ್ಯಾಗ್ ಲೈನ್ ಇದ್ದು, 1990ರ ದಶಕದ ಹಿನ್ನೆಲೆಯಲ್ಲಿ ಇಡೀ ಚಿತ್ರದ ಕಥೆ ನಡೆಯುತ್ತದೆ. “ಜಮಾಲಿ ಗುಡ್ಡ’ ಚಿತ್ರದ ಕಥೆಯಲ್ಲಿ ಇರುವಂಥ ಕಾಲ್ಪನಿಕ ಊರಾದರೂ, ಇಲ್ಲಿ ಒಂದು ವಿಭಿನ್ನ ಸಂಸ್ಕೃತಿ, ವಿಭಿನ್ನ ವ್ಯಕ್ತಿತ್ವಗಳ ಅನಾವರಣವಾಗಲಿದೆ. ಇದರಲ್ಲಿ ಒಂದು ಜರ್ನಿ ಇದೆ. ಎಮೋಶನ್ಸ್ ಇದೆ. ಅದೆಲ್ಲವನ್ನೂ ದೃಶ್ಯದಲ್ಲಿ ಕಟ್ಟಿಕೊಡುತ್ತಿದ್ದೇವೆ. ಅದು ಹೇಗಿರಲಿದೆ ಅನ್ನೋದನ್ನ ತೆರೆಮೇಲೆ ನೋಡಬೇಕು’ ಎನ್ನುತ್ತದೆ ಚಿತ್ರತಂಡ.
ನಟ ಡಾಲಿ ಧನಂಜಯ್, ಅದಿತಿ ಪ್ರಭುದೇವ, ಪ್ರಕಾಶ್ ಬೆಳವಾಡಿ, ಭಾವನಾ ರಾಮಣ್ಣ, ಪ್ರಾಣ್ಯಾ ಪಿ. ರಾವ್, ನಂದಗೋಪಾಲ್, ಯಶ್ ಶೆಟ್ಟಿ, ಸತ್ಯಣ್ಣ, ತ್ರಿವೇಣಿ ರಾವ್ ಮೊದಲಾದ ಕಲಾವಿದರು “ಜಮಾಲಿ ಗುಡ್ಡ’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರದ ಮೂರು ಹಾಡುಗಳಿಗೆ ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿದ್ದು, ಯೋಗರಾಜ್ ಭಟ್, ಜಯಂತ ಕಾಯ್ಕಿಣಿ, ಕುಶಾಲ್ ಗೌಡ ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಸೋನು ನಿಗಮ್, ಶ್ರೇಯಾ ಘೋಷಾಲ್, ವಿಜಯ್ ಯೇಸುದಾಸ್ ಮೊದಲಾದವರು ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ. “ಜಮಾಲಿ ಗುಡ್ಡ’ದ ದೃಶ್ಯಗಳಿಗೆ ಮಾಸ್ತಿ ಮತ್ತು ಕುಶಾಲ್ ಗೌಡ ಸಂಭಾಷಣೆ ಬರೆದಿದ್ದಾರೆ. ಚಿತ್ರಕ್ಕೆ ಕಾರ್ತಿಕ್ ಎಸ್. ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನವಿದೆ.