ಬೆಂಗಳೂರು,ಜೂ.1-
ಹಿಂದಿನ ಬಿಜೆಪಿ ಸರ್ಕಾರ ವಿರುದ್ಧ 40 ಪರ್ಸೆಂಟ್ ಕಮಿಷನ್ ಮಾಡಿದ ಆರೋಪ ಹಾಗೂ ಈ ಕುರಿತು ಸುಳ್ಳು ಜಾಹೀರಾತು ನೀಡಿ ಬಿಜೆಪಿ ವರ್ಚಸ್ಸಿಗೆ ಧಕ್ಕೆ ತಂದ ಆರೋಪದಡಿ ದಾಖಲಿಸಲಾಗಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ಜಾಮೀನು ಪಡೆದುಕೊಂಡರು.
ಬಿಜೆಪಿಯ ರಾಜ್ಯ ಘಟಕದ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಬಿ.ಎಸ್.ಕೇಶವಪ್ರಸಾದ್ ಈ ಸಂಬಂಧ ಸಲ್ಲಿಸಿರುವ ಖಾಸಗಿ ದೂರನ್ನು ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ’ದ 42ನೇ ಎಸಿಎಂಎಂ ಕೋರ್ಟ್ ವಿಚಾರಣೆಗೆ ಅಂಗೀರಿಸಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಸಮನ್ಸ್ ಜಾರಿಗೊಳಿಸಲಾಗಿತ್ತು.
ಪ್ರಕರಣದಲ್ಲಿ ಎ1 ಕೆಪಿಸಿಸಿ, ಎ2 ಡಿಕೆ ಶಿವಕುಮಾರ್, ಎ3 ಆರೋಪಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎ4 ಆರೋಪಿಯಾಗಿ ರಾಹುಲ್ ಗಾಂಧಿ ಅವರನ್ನು ಹೆಸರಿಸಲಾಗಿದೆ.ಐಪಿಸಿ ಸೆಕ್ಷನ್ 499 ಹಾಗೂ 500 ಅಡಿಯಲ್ಲಿ ಖಾಸಗಿ ದೂರು ದಾಖಲಾಗಿದೆ.
ಈ ಹಿನ್ನೆಲೆಯಲ್ಲಿ ಕೋರ್ಟ್ ಆರೋಪಿಗಳ ಖುದ್ದು ಹಾಜರಿಗೆ ಸಮನ್ಸ್ ನೀಡಿತ್ತು.ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿಚಾರಣೆಗೆ ಆಗಮಿಸಿ ಕೋರ್ಟ್ನಲ್ಲಿ ಕೈಮುಗಿದು ಕೈ ಕಟ್ಟಿ ನಿಂತರು. ಈ ವೇಳೆ ಹಾಜರಿರುವವರು ಯಾರು ಎಂದು ನ್ಯಾಯಾಧೀಶರು ಕೇಳಿದ್ದು 2 ಮತ್ತು 3ನೇ ಆರೋಪಿ, ಸಿಎಂ,ಡಿಸಿಎಂ ಹಾಜರಾಗಿದ್ದಾರೆ. ಆದರೆ ರಾಹುಲ್ ಗಾಂಧಿ ಮುಂದಿನ ವಿಚಾರಣೆಗೆ ಹಾಜರಾಗುತ್ತಾರೆ ಹಾಜರಾತಿಯಿಂದ ವಿನಾಯಿತಿ ಕೊಡಿ ಎಂದು ವಕೀಲರು ಮನವಿ ಮಾಡಿದರು.
ಇಂಡಿಯಾ ಒಕ್ಕೂಟದ ಸಭೆಯಿದೆ. ಹೀಗಾಗಿ ರಾಹುಲ್ ಗಾಂಧಿ ಹಾಜರಿಯಿಂದ ವಿನಾಯಿತಿ ಕೋರಿ ರಾಹುಲ್ ಗಾಂಧಿ ಪರ ನಿಶಿತ್ ಕುಮಾರ್ ಶೆಟ್ಟಿ ಮನವಿ ಮಾಡಿದರು. ಕೋರ್ಟ್ ಮುಂದೆ ಎಲ್ಲರೂ ಸಮಾನರು. ರಾಹುಲ್ ಗಾಂಧಿ ಇಂದು ಹಾಜರಾಗುವುದಾಗಿ ಹೇಳಿದ್ದರು. ಹಾಜರಾಗುವುದು ರಾಹುಲ್ ಗಾಂಧಿ ಕರ್ತವ್ಯ. ಚುನಾವಣೆ ನೆಪ ಹೇಳಿ ಗೈರು ಹಾಜರಾಗುವಂತಿಲ್ಲ ಎಂದು ಬಿಜೆಪಿ ಪರ ವಕೀಲ ವಿನೋದ್ ಕುಮಾರ್ ವಾದ ಮಾಡಿದರು
ವಿಚಾರಣೆ ವೇಳೆ ರಾಹುಲ್ ಗಾಂಧಿ ಪರ ಹಾಜರಾಗಿದ್ದ ಹೈಕೋರ್ಟ್ ವಕೀಲ ನಿಶಿತ್ ಶೆಟ್ಟಿ, ಅರ್ಜಿದಾರರ ಹಾಜರಿಗೆ ವಿನಾಯ್ತಿ ಕೋರಿದರು. ಇದಕ್ಕೆ ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದರು.
ಉಳಿದ ಆರೋಪಿಗಳ ಹಾಜರಿಯನ್ನು ದಾಖಲಿಸಿಕೊಂಡ ನ್ಯಾಯಾಧೀಶರು ನಗದು ಶ್ಯೂರಿಟಿ ಆಧಾರದಲ್ಲಿ ಜಾಮೀನು ಮಂಜೂರು ಮಾಡಿದರು. ಬಾಂಡ್ ಪತ್ರಗಳಿಗೆ ಸಹಿ ಹಾಕಿದ ನಂತರ ಇಬ್ಬರೂ ಕೆಲ ಹೊತ್ತು ಕೋರ್ಟ್ ಹಾಲ್ ನ ಹೊರಗಡೆಯ ಬೆಂಚ್ ನಲ್ಲಿ ಕುಳಿತು ಸ್ನೇಹಿತರನ್ನು ಮಾತನಾಡಿಸಿ ಅಲ್ಲಿಂದ ತೆರಳಿದರು.
Previous Articleವಾಲ್ಮೀಕಿ ನಿಗಮದ ಅಕ್ರಮದ ಬೆನ್ನು ಹತ್ತಿದ ಎಸ್ಐಟಿ.
Next Article ಪ್ರಜ್ವಲ್ ಗೆ ವಿಡಿಯೋದಲ್ಲಿರೋರು ಯಾರು ಗೊತ್ತಿಲ್ಲವಂತೆ.