ಕೊಯಮತ್ತೂರು.
ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದಲ್ಲಿ ಕೊಯಮತ್ತೂರಿನ ಇಶಾ ಕೇಂದ್ರದಲ್ಲಿ ನಡೆದ ಮಹಾಶಿವರಾತ್ರಿ ಆಚರಣೆ ಇದೀಗ ದೊಡ್ಡ ಪ್ರಮಾಣದಲ್ಲಿ ಸುದ್ದಿ ಮಾಡುತ್ತಿದೆ.
ಮಹಾಶಿವರಾತ್ರಿಯಂದು ಪರಶಿವನ ಆರಾಧನೆ, ಜಾಗರಣೆ ಮೊದಲಾದ ದೈವಿಕ ಕೈಂಕರ್ಯಗಳಿಂದಾಗಿ ಅಥವಾ ಈ ಧಾರ್ಮಿಕ ಮೇಳದಲ್ಲಿ ಪಾಲ್ಗೊಂಡು ಸಂಭ್ರಮಿಸಿದ ವಿದೇಶಿಯರ ಕಾರಣಕ್ಕಾಗಿ ಇದು ಸುದ್ದಿಯಾಗುತ್ತಿಲ್ಲ. ಬದಲಿಗೆ ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಕಾಂಗ್ರೆಸಿನ ಪ್ರಭಾವಿ ನಾಯಕ ಹಾಗೂ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಮುಂದೆ ಕೂರಿಸಿಕೊಂಡು ಕಾಂಗ್ರೆಸ್ ಪಕ್ಷ ಮತ್ತು ಈ ಹಿಂದಿನ ಕಾಂಗ್ರೆಸ್ ನೇತೃತ್ವದ ಆಡಳಿತದ ಬಗ್ಗೆ ಟೀಕೆ ಮಾಡುತ್ತಾ ಕೇಂದ್ರದ ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರವನ್ನು ಹಾಡಿ ಹೊಗಳಿದ್ದಕ್ಕಾಗಿ ಸುದ್ದಿಯಾಗಿದ್ದಾರೆ.
ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ತಮ್ಮ ಮನೆಗೆ ಬಂದು ಆಹ್ವಾನ ನೀಡಿದರು ಹಾಗೂ ಇದೊಂದು ಧಾರ್ಮಿಕ ಕಾರ್ಯಕ್ರಮ ಎಂಬ ಕಾರಣಕ್ಕೆ ಇದರಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಎಂದು ಸಮರ್ಥನೆ ನೀಡಿ ಸಮಾರಂಭಕ್ಕೆ ಹಾಜರಾದ ಡಿಕೆ ಶಿವಕುಮಾರ್ ಇದೀಗ ಸ್ವಪಕ್ಷಯರಿಂದಲೇ ಮುಜುಗರ ಅನುಭವಿಸುವಂತಾಗಿದೆ.
ಬಿಜೆಪಿಯ ಪ್ರಭಾವಿ ನಾಯಕ ಹಾಗೂ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ, ಕೇಂದ್ರ ವಾರ್ತಾ ಮತ್ತು ಪ್ರಸಾರ ಮಂತ್ರಿ ಎಲ್. ಮುರುಗನ್ ಪಂಜಾಬ್ ಮತ್ತು ಒಡಿಶಾ ರಾಜ್ಯಗಳ ರಾಜ್ಯಪಾಲರು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಬಿಜೆಪಿ ನಾಯಕ ಹಾಗೂ ಮಾಜಿ ಮಂತ್ರಿ ವೇಲುಮಣಿ ಅವರ ಜೊತೆ ಡಿಕೆ ಶಿವಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಮತ್ತು ಒಂದು ಆಶ್ಚರ್ಯಕರ ಸಂಗತಿ ಎಂದರೆ ಡಿಕೆ ಶಿವಕುಮಾರ್ ಅವರಿಗೆ ಯಾರೇ ಆಗಲಿ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದರೆ ಆಗುವುದಿಲ್ಲ ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕತ್ವವನ್ನು ಟೀಕಿಸುವ ವ್ಯಕ್ತಿ ಎಷ್ಟೇ ದೊಡ್ಡವರಾಗಿದ್ದರೂ ಲೆಕ್ಕಿಸದೆ ಅವರ ವಿರುದ್ಧ ಮುಗಿ ಬೀಳುವುದಕ್ಕೆ ಡಿಕೆ ಶಿವಕುಮಾರ್ ಹೆಸರುವಾಸಿ ಇವರ ಈ ನಡವಳಿಕೆಯಿಂದಾಗಿ ಹಲವು ಸಮಸ್ಯೆಗಳನ್ನು ಎದುರಿಸಿದ್ದಾರೆ.
ಇಂತಹ ಡಿಕೆ ಶಿವಕುಮಾರ್ ಇಶಾ ಫೌಂಡೇಶನ್ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರಾದ ಜೊತೆ ಪಾಲ್ಗೊಂಡು ಅಚ್ಚರಿ ಮೂಡಿಸಿದರು ಮಾತ್ರವಲ್ಲ ಆ ಕಾರ್ಯಕ್ರಮದಲ್ಲಿ ಇಶಾ ಫೌಂಡೇಶನ್ ಮುಖ್ಯಸ್ಥ ಜಗ್ಗಿ ವಾಸುದೇವ್ ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕತ್ವವನ್ನು ವಾಚಾಮಗೋಚರವಾಗಿ ನಿಂದಿಸಿದರೂ ಡಿಕೆ ಶಿವಕುಮಾರ್ ತುಟಿ ಪಿಟಿಕ್ ಎನ್ನುವುದು ಕುಳಿತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಶಿವರಾತ್ರಿ ಸಮಾರಂಭದಲ್ಲಿ ಧಾರ್ಮಿಕ ಪ್ರವಚನ ನೀಡಲಿದ್ದಾರೆ ಎಂದು ಭಾವಿಸಿದ್ದ ಜಗ್ಗಿ ವಾಸುದೇವ್ ಎಲ್ಲರ ನಿರೀಕ್ಷೆ ಹುಸಿಗೊಳಿಸಿ ರಾಜಕೀಯ ಭಾಷಣ ಮಾಡಿದರು.
ಸಭಿಕರ ಸಾಲಿನಲ್ಲಿ ಕುಳಿತಿದ್ದ ಡಿಕೆ ಶಿವಕುಮಾರ್ ಅವರನ್ನು ನೋಡುತ್ತಲೇ, ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಶ್ಲಾಘಿಸಿ ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಕಳೆದ ಹತ್ತು ವರ್ಷಗಳ ಹಿಂದೆ ದೇಶದಲ್ಲಿ ಅಭದ್ರತೆಯ ವಾತಾವರಣ ಇತ್ತು. ಎಲ್ಲೆಂದರಲ್ಲಿ ಬಾಂಬ್ ಸ್ಫೋಟಿಸಿ ಉಗ್ರಗಾಮಿಗಳು ಅಟ್ಟಹಾಸ ಮೆರೆಯುತ್ತಿದ್ದರು. ಇಂತಹ ದುಷ್ಕೃತ್ಯಗಳಿಗೆ ಕಡಿವಾಣ ಆಗಿದ್ದು ಪ್ರಧಾನಿ ಮೋದಿ ಮತ್ತು ಗೃಹ ಮಂತ್ರಿ ಅಮಿತ್ ಶಾ ಅವರ ಸಮರ್ಥ ನಾಯಕತ್ವ ಎಂದು ಬಣ್ಣಿಸಿದರು.
ತಮ್ಮ ಭಾಷಣದುದ್ದಕ್ಕೂ ಬಿಜೆಪಿ ಮತ್ತು ಕೇಂದ್ರ ಸರ್ಕಾರವನ್ನು ಹಾಡಿ ಹೊಗಳಿದ ಜಗ್ಗಿ ವಾಸುದೇವ್ ಅಪ್ಪಿ ತಪ್ಪಿಯೂ ಡಿಕೆ ಶಿವಕುಮಾರ್ ಅವರ ಬಗ್ಗೆ ಚಕಾರ ಎತ್ತಲಿಲ್ಲ ತಮ್ಮ ಮುಂದೆಯೇ ತಮ್ಮ ಪಕ್ಷದ ಸಿದ್ಧಾಂತ ಮತ್ತು ನಾಯಕತ್ವದ ಬಗ್ಗೆ ವ್ಯಾಪಕ ಟೀಕೆ ಮಾಡಿದರೂ ಮೌನವಾಗಿ ಕೇಳುತ್ತಾ ಜಾಗರಣೆ ಮಾಡಿದ ಡಿಕೆ ಶಿವಕುಮಾರ್ ಅವರ ನಡೆ ಇದೀಗ ಎಲ್ಲೆಡೆ ಆಶ್ಚರ್ಯ ಮೂಡಿಸಿದೆ.