ಮಂಗಳೂರು,ಡಿ.26-ಟ್ರಾಯ್ ಹೆಸರಿನಲ್ಲಿ ಕರೆ ಮಾಡಿ ವ್ಯಕ್ತಿಯೊಬ್ಬರಿಗೆ ಡಿಜಿಟಲ್ ಅರೆಸ್ಟ್ ಮಾಡಿ 1.71 ಕೋಟಿ ವಂಚನೆ ನಡೆಸಿದ್ದ ಸೈಬರ್ ವಂಚಕನನ್ನು ನಗರದ ಸಿಇಎನ್ ಕ್ರೈಂ ಪೊಲೀಸರು ಕೇರಳದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೇರಳದ ಕೋಯಿಕೋಡ್ ಮೂಲದ ಆಕಾಶ್ ಎ. (22) ಬಂಧಿತ ಆರೋಪಿಯಾಗಿದ್ದಾನೆ, ಪ್ರಕರಣದಲ್ಲಿ, ಅಪರಿಚಿತ ವ್ಯಕ್ತಿಯು ಟ್ರಾಯ್ ನಿಂದ ಪ್ರತಿನಿಧಿಸಿ ಕರೆ ಮಾಡುವುದಾಗಿ ಪರಿಚಯಿಸಿಕೊಂಡಿದ್ದ. ಆ ಬಳಿಕ ನಿಮ್ಮ ಹೆಸರಿನಲ್ಲಿ ಇನ್ನೊಂದು ಮೊಬೈಲ್ ನಂಬರ್ ರಿಜಿಸ್ಟರ್ ಆಗಿದ್ದು, ಮುಂಬೈನ ಅಂಧೇರಿ(ಇ)ಯಲ್ಲಿ ಹಲವು ಕಾನೂನುಬಾಹಿರ ಚಟುವಟಿಕೆಗೆ ಬಳಸಲಾಗಿದೆ.
ಮಾರ್ಕೆಟಿಂಗ್ ನೆಪದಲ್ಲಿ ನಿಮಗೆ ಸಂಬಂಧಿಸಿದ ಮೊಬೈಲ್ ನಂಬರ್ನಿಂದ ಕರೆ ಮಾಡಿ ಕಿರುಕುಳ ಕೊಡುತ್ತಿರುವ ಬಗ್ಗೆ ಎಫ್ಐಆರ್ ದಾಖಲಾಗಿದೆ ಎಂದು ಹೆದರಿಸಿರುವ ಬಗ್ಗೆ ದೂರು ದಾಖಲಾಗಿತ್ತು.
ಅಲ್ಲದೇ, ಕೂಡಲೇ ಅಂಧೇರಿ(ಇ) ಪೊಲೀಸ್ ಠಾಣೆಗೆ ಸಂಪರ್ಕಿಸಬೇಕು, ಇಲ್ಲದಿದ್ದಲ್ಲಿ ನಿಮ್ಮ ಮೊಬೈಲ್ ನಂಬರ್ ಸೇವೆಯನ್ನು 2 ಗಂಟೆಗಳಲ್ಲಿ ಕೊನೆಗೊಳಿಸಲಾಗುವುದು ಎಂಬುದಾಗಿ ಬೆದರಿಸಿದ್ದ. ಜೊತೆಗೆ, ಅಂಧೇರಿಯ ಕೆನರಾ ಬ್ಯಾಂಕ್ನಲ್ಲಿ ನಿಮ್ಮ ಹೆಸರಿನಲ್ಲಿ ಖಾತೆ ತೆರೆದು ವಂಚನೆಗೆ ಬಳಸಲಾಗಿದೆ. ಇದಕ್ಕೆ ಐಡೆಂಟಿಟಿ ಬಳಸಿ ಸಿಮ್ ಖರೀದಿಸಲಾಗಿದ್ದು, ಹಾಗಾಗಿ ನಿಮ್ಮನ್ನು ಬಂಧಿಸಲಾಗುವುದು ಎಂದು ತಿಳಿಸಿ, ಡಿಜಿಟಲ್ ಆರೆಸ್ಟ್ ಮಾಡುವುದಾಗಿ ನಂಬಿಸಿದ್ದಾನೆ. ಆ ಬಳಿಕ ಹಂತ, ಹಂತವಾಗಿ ಒಟ್ಟು 1 ಕೋಟಿ 71 ಲಕ್ಷ ರೂ. ಹಣವನ್ನು ಪಡೆದು ವಂಚನೆ ಮಾಡಲಾಗಿದೆ ಎಂದು ದೂರು ನೀಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಆಕಾಶ್ ಎಂಬಾತನನ್ನು ಕೇರಳಕ್ಕೆ ತೆರಳಿ ಬಂಧಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
Previous Articleಬೆಂಗಳೂರಿನ ಈ 14 ರಸ್ತೆಗಳಲ್ಲಿ ಏನಾಗಲಿದೆ ಗೊತ್ತಾ.
Next Article ತಿರುಪತಿ ದರ್ಶನ ಹೆಸರಲ್ಲಿ ಶಾಸಕರಿಗೆ ಪಂಗನಾಮ.