ಬೆಂಗಳೂರು,ಏ.26:
ಲೋಕಸಭೆ ಚುನಾವಣೆ ಸೋಲಿನ ನಂತರ ಯಾವುದೇ ಚುನಾವಣೆ ರಾಜಕಾರಣದಲ್ಲಿ ತೊಡಗಿಕೊಳ್ಳದ ಮಾಜಿ ಸಂಸದ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಹೋದರ ಡಿಕೆ ಸುರೇಶ್ ಇದೀಗ ಕೆಎಂಎಫ್ ಅಧ್ಯಕ್ಷ ಸ್ಥಾನ ಅಲಂಕರಿಸಲು ತಂತ್ರಗಾರಿಕೆ ಆರಂಭಿಸಿದ್ದಾರೆ.
ಉಪಮುಖ್ಯಮಂತ್ರಿಯೂ ಆಗಿರುವ ತಮ್ಮ ಸಹೋದರನ ಜೊತೆಗೆ ಸೇರಿ ರಾಜಕೀಯ ಲೆಕ್ಕಾಚಾರ ಆರಂಭಿಸಿರುವ ಅವರು ಇದೀಗ ರಾಜ್ಯ ಹಾಲು ಒಕ್ಕೂಟದ ಚುಕ್ಕಾಣಿ ಹಿಡಿಯಲು ಪ್ರಯತ್ನ ಆರಂಭಿಸಿದ್ದಾರೆ.
ಹಾಲಿ ಅಧ್ಯಕ್ಷರಾಗಿರುವ ಭೀಮಾ ನಾಯಕ್ ಅವರ ಅಧಿಕಾರಾವಧಿ ಪೂರ್ಣಗೊಳ್ಳುತ್ತಿದ್ದು ಅವರ ನಂತರದಲ್ಲಿ ಈ ಹುದ್ದೆ ಅಲಂಕರಿಸಲು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಸಹೋದರ ಹಾಗೂ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಂತ್ರ ರೂಪಿಸುತ್ತಿರುವ ಬೆನ್ನಲ್ಲೇ ಡಿಕೆ ಶಿವಕುಮಾರ್ ತಮ್ಮ ಸೋದರನ ಪರವಾಗಿ ಅಖಾಡಕ್ಕೆ ಇಳಿದಿದ್ದಾರೆ.
ಸಂಪುಟ ದರ್ಜೆಯ ಸಚಿವ ಸ್ಥಾನ ಹೊಂದಿರುವ ಈ ಹುದ್ದೆಯನ್ನು ತಮ್ಮ ಸೋದರನಿಗೆ ದೊರಕಿಸಿ ಕೊಡಬೇಕು ಎಂದು ಲೆಕ್ಕಾಚಾರ ಹಾಕುತ್ತಿರುವ ಅವರು ರಾಜ್ಯದ ಇತರ ಜಿಲ್ಲಾ ಹಾಲು ಒಕ್ಕೂಟಗಳಿಗೆ ತಮ್ಮ ಬೆಂಬಲಿಗರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಜೊತೆಗೆ ಕೆಲವರನ್ನು ನಾಮನಿರ್ದೇಶನ ಮಾಡುವ ಅವಕಾಶ ಸರಕಾರಕ್ಕೆ ಇದೆ ಇದನ್ನು ಬಳಸಿಕೊಂಡು ತಮ್ಮ ಬೆಂಬಲಿಸರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೆಎಂಎಫ್ ನಿರ್ದೇಶಕರನ್ನಾಗಿ ಮಾಡುತ್ತಿರುವ ಡಿಕೆ ಶಿವಕುಮಾರ್ ಇವರ ಮೂಲಕ ತಮ್ಮ ಸೋದರ ಹಾಗೂ ಮಾಜಿ ಸಂಸದ ಡಿಕೆ ಸುರೇಶ ಅವರಿಗೆ ಉನ್ನತ ಹುದ್ದೆ ದೊರಕಿಸಿಕೊಡಲು ತಂತ್ರ ಹೆಣದಿದ್ದಾರೆ.
ಇದರ ಭಾಗವಾಗಿ ಡಿ.ಕೆ. ಸುರೇಶ್ ಅವರು ತಮ್ಮ ತೋಟದ ಮನೆ ಇರುವ ಕನಕಪುರ ತಾಲ್ಲೂಕಿನ ಕೋಡಿಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಇದರ ನಂತರ ಅವರು ಬೆಂಗಳೂರು ಹಾಲು ಒಕ್ಕೂಟ(ಬಮೂಲ್) ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಷ್ಟೇ ಅಲ್ಲ ತಮ್ಮ ಪಕ್ಷಕ್ಕೆ ಬಹುಮತ ಸಿಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಮೂಲಕ ಬಮೂಲ್ ಗೆ ಆಯ್ಕೆಯಾಗಿರುವ ಡಿಕೆ ಸುರೇಶ್ ಅವರು ಆನಂತರ ಕೆಎಂಎಫ್ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು ಅರ್ಹತೆ ಪಡೆದಿದ್ದಾರೆ. ಆನಂತರ ಬಹುತೇಕ ಜಿಲ್ಲಾ ಹಾಲು ಒಕ್ಕೂಟಗಳ ಬೆಂಬಲ ಪಡೆದಿರುವ ಅವರು ನಾಮ ನಿರ್ದೇಶಿತ ಸದಸ್ಯರ ನೆರವಿನೊಂದಿಗೆ ಕೆಎಂಎಫ್ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆಗಳು ಹೆಚ್ಚಿವೆ ಎನ್ನುತ್ತವೆ ಉನ್ನತ ಮೂಲಗಳು.
ಇದರ ಜೊತೆಗೆ ರಾಜಕೀಯವಾಗಿ ಇದಕ್ಕಿರುವ ಅಡ್ಡಿ ನಿವಾರಿಸಲು ಪ್ರಯತ್ನ ನಡೆಸಿದ ಡಿಕೆ ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಜೊತೆ ಮಾತುಕತೆ ನಡೆಸಿ ತಮ್ಮ ಸಹೋದರನ ಆಯ್ಕೆಗೆ ಇರುವ ಅಡ್ಡಿ ಆತಂಕಗಳನ್ನು ನಿವಾರಿಸಿದ್ದಾರೆ.
ಪ್ರಮುಖವಾಗಿ ಈ ಹುದ್ದೆಯ ಮೇಲೆ ಲೋಕೋಪಯೋಗಿ ಮಂತ್ರಿ ಸತೀಶ್ ಜಾರಕಿಹೊಳಿ ಅವರ ಸೋದರ ಹಾಗೂ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಣ್ಣಿಟ್ಟಿದ್ದರು.ತಮ್ಮ ಸೋ ಸೋದರನಿಗೆ ಈ ಹುದ್ದೆ ದೊರಕಿಸಿಕೊಡಲು ಮಂತ್ರಿ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಸೇರಿ ಲಾಬಿ ನಡೆಸಿದರು.
ಈ ಬಗ್ಗೆ ಮಾಹಿತಿ ಇದ್ದ ಡಿಕೆ ಶಿವಕುಮಾರ್ ಅವರು ಹೈಕಮಾಂಡ್ ನಾಯಕರನ್ನು ತಮ್ಮ ಪರ ಇರುವಂತೆ ಮಾಡುವಲ್ಲಿ ಯಶಸ್ವಿಯಾದರು ಇದರ ಪರಿಣಾಮ ಈಗ ಹೈಕಮಾಂಡ್ ಡಿಕೆ ಸುರೇಶ್ ಅವರ ಆಯ್ಕೆಗೆ ಹಸಿರು ನಿಶಾನೆ ತೊರೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇದಕ್ಕೆ ಸಮ್ಮತಿ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.
ಈ ಮೂಲಕ ಡಿ ಕೆ ಸುರೇಶ್ ಅವರು ಕರ್ನಾಟಕ ಹಾಲು ಒಕ್ಕೂಟದ ಅಧ್ಯಕ್ಷರಾಗಲು ಇರುವ ಅಡ್ಡಿ ಆತಂಕಗಳು ನಿವಾರಣೆಯಾಗಿದ್ದು ಚುನಾವಣೆ ಪ್ರಕ್ರಿಯೆ ಮೂಲಕ ಅವರ ಆಯ್ಕೆ ಅಧಿಕೃತವಾಗಿ ಘೋಷಣೆಯಾಗಲಿದೆ.
