ಬೆಂಗಳೂರು,
ಜಾತಿ ಮೇಲೆ ಯಾವುದೇ ಕಾರಣಕ್ಕೂ ರಾಜಕಾರಣ ಮಾಡಬಾರದು ಒಂದು ವೇಳೆ ಆ ರೀತಿಯ ರಾಜಕಾರಣ ಮಾಡಿದಲ್ಲಿ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ ಎಂದು ಮಾಜಿ ಸಂಸದ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಹೇಳಿದ್ದಾರೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆದರೆ
ಕೆಲವರು ಜಾತಿಯ ಹೆಸರಿನಲ್ಲಿ ಅಧಿಕಾರಕ್ಕೆ ಅಂಟಿಕೊಂಡು ಇರುತ್ತಾರೆ. ಅದೇ ರೀತಿ ಈಗಿನ ರಾಜಕೀಯದಲ್ಲಿ ಕೊಟ್ಟ ಮಾತು, ನಂಬಿಕೆ ಯಾವುದಕ್ಕೂ ಬೆಲೆಯೇ ಇಲ್ಲದಂತಾಗಿದೆ ಎಂದು ತಿಳಿಸಿದರು.
ಜಾತಿ ರಾಜಕಾರಣ ಬಹಳ ದಿನ ನಡೆಯುವುದಿಲ್ಲ, ಒಂದು ಪಕ್ಷಕ್ಕೆ ಒಕ್ಕಲಿಗ, ಲಿಂಗಾಯತ, ಎಸ್‌ಸಿ, ಎಸ್‌ಟಿ ಎಲ್ಲರ ಮತಗಳೂ ಬೇಕು, ಯಾವುದೇ ಒಂದು ವರ್ಗ ಬಿಟ್ಟು ರಾಜಕಾರಣ ಮಾಡಲಾಗದು.ಜಾತಿ ಹೆಸರಿನಲ್ಲಿ ಸರ್ಕಾರ ಮಾಡಿದರೆ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ ಎಂದು ಹೇಳಿದರು
ಪಂಚಾಯಿತಿ ಚೇರ್ಮನ್‌ಗಳ ಉದಾಹರಣೆಯನ್ನು ನೀಡಿ ಮಾತನಾಡಿದ ಅವರು ಆರಂಭದಲ್ಲಿ ಚೇರ್ಮನ್ ಸ್ಥಾನ ಬೇಡ ಎನ್ನುತ್ತಾರೆ. ಆ ಸ್ಥಾನಕ್ಕೆ ಅರ್ಹತೆ ಪಡೆದ ನಂತರ ಅಥವಾ ಹುದ್ದೆ ಲಭ್ಯವಾದಾಗ ‘ಬೇಕೇ ಬೇಕು’ ಎಂದು ಪಟ್ಟು ಹಿಡಿಯುತ್ತಾರೆ. ಮಾತನ್ನು ಕೊಟ್ಟು ಒಮ್ಮೆ ಹುದ್ದೆ ಪಡೆದ ನಂತರ ಅದನ್ನು ಬಿಟ್ಟುಕೊಡುವುದು ಅಥವಾ ಇತರರನ್ನು ಮನವೊಲಿಸುವುದು ಬಹಳ ಕಷ್ಟಕರ. ಇದು ರಾಜಕಾರಣದಲ್ಲಿ ನಂಬಿಕೆಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ ಎಂದರು.
ತಾವು ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಬೆಳವಣಿಗೆಗಳನ್ನು ಮಾತ್ರ ಉಲ್ಲೇಖಿಸಿದ್ದೇನೆ ಇದು ಯಾರನ್ನೂ ಗುರಿಯಾಗಿಸಿಕೊಂಡು ಹೇಳುತ್ತಿರುವ ಮಾತಾಗಿದೆ ಎಂದು ಸ್ಪಷ್ಟಪಡಿಸಿದರು.
ಕೆಲವರು ಚುನಾವಣೆಗೆ ನಿಲ್ಲಲು ಸಿದ್ಧರಿರುವುದಿಲ್ಲ. ಆದರೆ ಅಧ್ಯಕ್ಷ ಸ್ಥಾನ ದಕ್ಕಲಿದೆ ಎಂದಾಗ ಅಧಿಕಾರ ಬೇಕು ಎನ್ನುತ್ತಾರೆ. ಬೇರೆಯವರಿಗೆ ಹಸ್ತಾಂತರ ಸಮಯ ಬಂದಾಗ,150ದಿನ ಸಮಯ ಕೊಡಿ ಕಾರ್ಡ್‌ಲ್ಲಿ ಹೆಸರು ಹಾಕಿಸಿದ್ದೇನೆ ಎನ್ನುತ್ತಾರೆ, ನಂತರ ಮಾರ್ಚ್ ಮುಗಿಯಲಿ ಎನ್ನುತ್ತಾರೆ, ಮತ್ತೆ ಇನ್ನು ಮೂರು ದಿನ ಅವಕಾಶ ನೀಡಿ ಆಮೇಲೆ ಮಾಜಿ ಅನ್ನಿಸಿಕೊಳ್ಳುತ್ತೇನೆ ಎಂಬ ರಾಗ ತೆಗೆಯುತ್ತಾರೆ ಎಂದು ಹೇಳಿದರು
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮತಪತ್ರ ಬಳಸುವ ಸರ್ಕಾರದ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಈಗಾಗಲೇ ನಾವು ಬಹಳ ಮುಂದೆ ಹೋಗಿದ್ದೇವೆ, ಹಿಂದೆ ಸರಿಯುವುದು ಸರಿಯಲ್ಲ ಎನ್ನುವ ಮೂಲಕ ರಾಜ್ಯ ಸರ್ಕಾರದ ನಿಲುವನ್ನು ಟೀಕಿಸಿದ್ದಾರೆ.
ಬಜೆಟ್ ಸಿದ್ಧತೆ ಬಗ್ಗೆ ಮಾತನಾಡಿದ ಅವರು, ಈಗಾಗಲೇ ಬಜೆಟ್‌ಗಳನ್ನು ಮಂಡಿಸಿ ದಾಖಲೆ ಮಾಡಿದ್ದಾರೆ, ಅದಕ್ಕೆ ಇನ್ನೊಂದು ಗರಿ ಸಿಕ್ಕಿಸಿಕೊಳ್ಳಲಿ ಎಂದರು.
ತಮ್ಮ ಸಹೋದರ ಶಿವಕುಮಾರ್ ಅಧಿಕಾರ ಸಿಗುವುದು ದೇವರ ಇಚ್ಛೆ. ಶಿವಕುಮಾರ್ ಅವರು ಯಾವಾಗಲೂ ಪಕ್ಷಕ್ಕೆ ನಿಷ್ಠರಾಗಿದ್ದಾರೆ ಹೊರತು ವ್ಯಕ್ತಿಗಳಿಗಲ್ಲ. ಪಕ್ಷ ಅಧಿಕಾರದಲ್ಲಿದ್ದಾಗ ಅಥವಾ ಇಲ್ಲದಿದ್ದಾಗಲೂ ಅವರು ಪಕ್ಷದ ಜೊತೆ ನಿಂತಿದ್ದಾರೆ ಮತ್ತು ಎಲ್ಲವನ್ನೂ ತಾಳ್ಮೆಯಿಂದ ಗಮನಿಸುತ್ತಿದ್ದಾರೆ ಎಂದು ಹೇಳಿದರು.
ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಕೇವಲ ಕರ್ನಾಟಕ ಮಾತ್ರವಲ್ಲ, ಇಡೀ ರಾಷ್ಟ್ರ ರಾಜಕಾರಣ ನೋಡಬೇಕಾಗುತ್ತದೆ. ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕರ್ನಾಟಕದ ಬಗ್ಗೆ ಒಂದು ನಿಲುವಿಗೆ ಬರಲಿದ್ದಾರೆ ಎಂದರು.
ಬಜೆಟ್‌ಗೆ ಮುನ್ನವೇ ಅಧಿಕಾರ ಹಸ್ತಾಂತರ ಆಗಲಿದೆಯೇ ಎಂಬ ಪ್ರಶ್ನೆಗೆ ಕಾದು ನೋಡಿ ಎಂದರು.
ಪೋಲಿಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಕಚೇರಿಯಲ್ಲಿ ಮಹಿಳೆಯರ ಜೊತೆ ವರ್ತಿಸಿದ ರೀತಿ ಖಂಡಿಸಿದ ಸುರೇಶ್, ಇಲಾಖೆಯಲ್ಲಿ ಶಿಸ್ತು ಮುಖ್ಯ, ಅಧಿಕಾರಿ ಗೃಹ ಸಚಿವರಿಗೂ ಹತ್ತಿರ, ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದರು.

