ಬೆಂಗಳೂರು,ಜೂನ್.3-ನಗರದ ಹೊರವಲಯದ ಹೆಬ್ಬಗೋಡಿಯ ಜಿಆರ್ ಫಾರ್ಮ್ ಹೌಸ್ ನಲ್ಲಿ ನಡೆದಿದ್ದ ರೇವ್ ಪಾರ್ಟಿ ಯಲ್ಲಿ ಡ್ರಗ್ಸ್ ಸೇವಿಸಿ ಬಂಧಿತರಾಗಿರುವ ತೆಲುಗು ನಟಿ ಹೇಮಾರನ್ನು ಮತ್ತೆ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
ಕಸ್ಟಡಿಗೆ ಪಡೆದಿರುವ ನಟಿ ಹೇಮಾರನ್ನು ಹೆಚ್ಚಿನ ವಿಚಾರಣೆ ನಡೆಸಿ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಸಿಸಿಬಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದ ನೂರಕ್ಕೂ ಹೆಚ್ಚು ಮಂದಿಯ ರಕ್ತ ಪರೀಕ್ಷೆ ವೇಳೆ 86 ಮಂದಿ ಡ್ರಗ್ಸ್ ಸೇವಿಸಿರುವುದು ಪತ್ತೆಯಾಗಿದ್ದು,ಈ ಸಂಬಂಧ ಈಗಾಗಲೇ ಐವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.
ಇದಲ್ಲದೆ, ಪಾರ್ಟಿಯಲ್ಲಿದ್ದ ಪ್ರಮುಖರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗಿದೆ.
ಮೊದಲ ದಿನವೇ ನಾನು ಘಟನೆ ನಡೆದ ಸ್ಥಳದಲ್ಲಿ ಇರಲಿಲ್ಲ ಎಂದು ಸುಳ್ಳು ಹೇಳಿದ್ದ ಹೇಮಾ ನಂತರ ಪೊಲೀಸರಿಗೆ ಹೆಸರು, ವಿಳಾಸ ತಪ್ಪು ವಿವರ ನೀಡಿ ತನಿಖೆ ದಾರಿ ತಪ್ಪಿಸಲು ನೋಡಿದ್ದರು.
ವಿಚಾರಣೆಗೆ ಕರೆದಾಗಲೂ ಕೂಡ ಅನಾರೋಗ್ಯ ಸಮಸ್ಯೆ ನೆಪದಲ್ಲಿ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದರು. ಕೊನೆಗೆ ಎರಡು ದಿನಗಳ ಹಿಂದೆ ವಿಚಾರಣೆಗೆ ಬಂದ ವೇಳೆ ಸಿಸಿಬಿ ಪೊಲೀಸರು ಬಂಧಿಸಿದ್ದರು.
ಪೊಲೀಸ್ ವಿಚಾರಣೆಯಲ್ಲಿ ಹೇಮಾ ಹಲವು ಡ್ರಗ್ಸ್ ಪಾರ್ಟಿಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ಅಷ್ಟೇ ಅಲ್ಲದೇ ಕೆಲ ಪೆಡ್ಲರ್‌ಗಳ ಜೊತೆಗೂ ಸಂಪರ್ಕ ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಫಾರ್ಮ್ ಹೌಸ್‌ನಲ್ಲಿ ಡ್ರಗ್ಸ್ ಪಾರ್ಟಿ ಮಾತ್ರ ಅಲ್ಲದೇ ಕೆಲವೊಂದು ಅಕ್ರಮ ಚಟುವಟಿಕೆಗಳು ಕೂಡ ನಡೆದಿರುವ ಬಗ್ಗೆ ಸಿಸಿಬಿಗೆ ಮಾಹಿತಿ ಲಭ್ಯವಾಗಿದೆ.
ಆಗಮಿಸಿದ ಯುವತಿಯರಿಗೆ ಅಲ್ಲಿ ಪರಿಚಯವೇ ಇರಲಿಲ್ಲ. ಅಷ್ಟೇ ಅಲ್ಲದೇ ಲಕ್ಷಾಂತರ ರೂ. ಪತ್ತೆಯಾಗಿರುವುದು ಹಲವು ಅನುಮಾಗಳಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಆನೇಕಲ್ ಜಿಲ್ಲಾ ಕೋರ್ಟ್ ಮುಂದೆ ಹೇಮಾ ಅವರನ್ನು ಹಾಜರುಪಡಿಸಿದ್ದ ಸಿಸಿಬಿ ಪೊಲೀಸರು ಈ ಸಂಬಂಧ ಕೆಲ ದಾಖಲೆಗಳು, ವಿಚಾರಣೆಯಲ್ಲಿ ಸಿಕ್ಕ ಮಾಹಿತಿಯನ್ನು ಕೋರ್ಟ್ ಮುಂದಿಟ್ಟು ಇನ್ನೂ ಎರಡು ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ.
Previous Articleವಾಲ್ಮೀಕಿ ನಿಗಮದ ಹಣ ವಶಕ್ಕೆ ಪಡೆದ ಎಸ್ಐಟಿ.
Next Article ಗೂಳಿಹಟ್ಟಿ ಶೇಖರ್ ಸಿಡಿಸಿದ ವಿವಾದದ ಬಾಂಬ್.