ಬೆಂಗಳೂರು, ಜ.9: ವಯಕ್ತಿಕ ಪ್ರತಿಷ್ಠೆಗಾಗಿ ಪತಿ-ಪತ್ನಿಯರ ನಡುವೆ ನಡೆದ ಸಂಘರ್ಷದಲ್ಲಿ ಸಿಲುಕಿದ ನಾಲ್ಕು ವರ್ಷದ ಹಾಲುಗಲ್ಲದ ಹಸುಳೆಯೊಂದು ಬಲಿಯಾಗಿದೆ.ತನ್ನ ಗಂಡನ ಬಳಿ ಮಗು ಹೋಗಲು ಬಯಸದ ತಾಯಿ ತಾನು ಹೆತ್ತ ಮಗುವನ್ನೇ ಕೊಲೆ ಮಾಡಿ ಪೊಲೀಸರ ಅತಿಥಿಯಾಗಿದ್ದಾರೆ.
ಬಂಧಿತ ಮಹಿಳೆಯನ್ನು ಬೆಂಗಳೂರಿನ ಪ್ರತಿಷ್ಠಿತ ಕೃತಕ ಬುದ್ಧಿಮತ್ತೆಯ ಸ್ಟಾರ್ಟ್ ಅಪ್ ಕಂಪನಿಯ ಸಿಇಒ ಸುಚನಾ ಸೇಠ್ ಎಂದು ಗುರುತಿಸಲಾಗಿದೆ.
ಉತ್ತರ ಗೋವಾದ ಕಲ್ಲಂಗೂಟ್ ಠಾಣೆಯ ಪೊಲೀಸರ ನಿರ್ದೇಶನದ ಮೇರೆಗೆ ಚಿತ್ರದುರ್ಗದ ಪೊಲೀಸರು ಬಂಧಿಸಿದರು.
ತನ್ನ ಮಗನೊಂದಿಗೆ ಪ್ರವಾಸಕ್ಕೆಂದುಗೋವಾಕ್ಕೆ ತೆರಳಿ ತನ್ನ ನಾಲ್ಕು ವರ್ಷದ ಮಗನನ್ನು ಕೊಂದು ಆತನ ಶವವನ್ನು ಬ್ಯಾಗ್‌ನಲ್ಲಿ ತುಂಬಿ ಟ್ಯಾಕ್ಸಿಯಲ್ಲಿ ಕರ್ನಾಟಕಕ್ಕೆ ಪ್ರಯಾಣಿಸುತ್ತಿರುವಾಗ ಸಿಕ್ಕಿಬಿದ್ದಿದ್ದಾರೆ.
ಗೋವಾ (Goa) ಪೊಲೀಸರ ಮಾಹಿತಿ ಮೇರೆಗೆ ಐಮಂಗಲ ಠಾಣೆಯ ಪೊಲೀಸರು ಸೋಮವಾರ ಸಂಜೆ ಕಾರೊಂದನ್ನು ತಪಾಸಣೆ ಮಾಡಿದ್ದರು. ಕಾರಿನ ಲಗೇಜ್ ಬ್ಯಾಗಿನಲ್ಲಿ ನಾಲ್ಕು ವರ್ಷದ ಬಾಲಕನ ಮೃತದೇಹ ಪತ್ತೆಯಾಯಿತು. ತಕ್ಷಣ ಮಹಿಳೆಯನ್ನು ವಶಕ್ಕೆ ಪಡೆಯಲಾಯಿತು’ ಎಂದು ಮಾಹಿತಿ ನೀಡಿದ್ದಾರೆ.
‘ಚಿತ್ರದುರ್ಗಕ್ಕೆ ಧಾವಿಸಿದ ಗೋವಾ ಪೊಲೀಸರು ಹೆಚ್ಚಿನ ತನಿಖೆಗೆ ಆಕೆಯನ್ನು ತಮ್ಮೊಂದಿಗೆ ಕರೆದೊಯ್ದಿದ್ದಾರೆ. ಬಾಲಕನ ಶವವನ್ನು ಹಿರಿಯೂರು ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ’
ಕೋಲ್ಕತ್ತದ ಸುಚನಾ ಸೇಠ್ 2008ರಲ್ಲಿ ಬೆಂಗಳೂರಿಗೆ ಬಂದಿದ್ದಳು. ತಮಿಳುನಾಡಿನ ವೆಂಕಟರಮಣ ಪರಿಚಯವಾಗಿದ್ದು, 2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2019ರಲ್ಲಿ ಮಗ ಚಿನ್ಮಯ್ ಜನಿಸಿದ ಬಳಿಕ ಸೇಠ್ ದಾಂಪತ್ಯದಲ್ಲಿ ಬಿರುಕು ಮೂಡಿತ್ತು. ದಂಪತಿಗಳಿಬ್ಬರು ಪರಸ್ಪರ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ವಿಚ್ಚೇದನ ನೀಡಿದ ಕೋರ್ಟ್ ಪ್ರತಿ ಭಾನುವಾರ ಮಗುವನ್ನು ತನ್ನ ತಂದೆಯ ಬಳಿ ಬೀಡಲು ಆದೇಶಿಸಿತ್ತು.ಇದು ಸುಚನಾ ಅವರಿಗೆ ಇಷ್ಟವಿರಲಿಲ್ಲ.
ಸುಚನಾ ಪತಿಯು ಮಗನನ್ನು ಭೇಟಿಯಾದರೆ, ಅವರು ಮಗುವನ್ನು ತಮ್ಮ ಬಳಿಯೇ ಇರಿಸಿಕೊಳ್ಳಬಹುದು ಎಂದು ಆತಂಕಗೊಂಡಿದ್ದರು ಎನ್ನಲಾಗಿದೆ.
ಸುಚನಾ ಸೇಠ್ ಕಳೆದ ಜ.6ರಂದು ತನ್ನ ಮಗನೊಂದಿಗೆ ಉತ್ತರ ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಸೋಲ್ ಬನಿಯನ್ ಗ್ರಾಂಡೆಗೆ ಭೇಟಿ ನೀಡಿದ್ದು ನಿನ್ನೆ ಆಕೆ ಕೊಠಡಿಯಿಂದ ಒಬ್ಬಂಟಿಯಾಗಿ ಚೆಕ್ ಔಟ್ ಮಾಡಿದ್ದಳು. ಬೆಂಗಳೂರಿಗೆ ಟ್ಯಾಕ್ಸಿ ಕಾಯ್ದಿರಿಸುವಂತೆ ಹೋಟೆಲ್ ಸಿಬ್ಬಂದಿಗೆ ಕೇಳಿದ್ದಳು. ವಿಮಾನದಲ್ಲಿ ತೆರಳಲು ಸಿಬ್ಬಂದಿ ಸಲಹೆ ನೀಡಿದರೂ ಅದಕ್ಕೆ ಒಪ್ಪದೆ, ಟ್ಯಾಕ್ಸಿ ಬುಕ್ ಮಾಡುವಂತೆ ಒತ್ತಾಯಿಸಿದ್ದಳು.
ಜೊತೆಗೆ ಬಂದ ಮಗು:
ಜೊತೆಗೆ ಬಂದ ಮಗು ಚೆಕ್ ಔಟ್ ಮಾಡುವಾಗ ಇಲ್ಲದಿರುವುದನ್ನು ಗಮನಿಸಿದ ಸಿಬ್ಬಂದಿ, ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದರು. ಆಕೆ ಹೋದ ಬಳಿಕ ಕ್ಲೀನಿಂಗ್ ಸಿಬ್ಬಂದಿ ಆಕೆಯ ಅಪಾರ್ಟ್‌ಮೆಂಟ್ ನಲ್ಲಿ ರಕ್ತದ ಕಲೆಗಳನ್ನು ಗಮನಿಸಿದ್ದರು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಟ್ಯಾಕ್ಸಿ ಚಾಲಕನಿಗೆ ಕರೆ ಮಾಡಿ ಸುಚನಾ ಸೇಠ್ ಅವರೊಂದಿಗೆ ಮಾತನಾಡಿದ್ದರು. ಆಕೆಯ ಮಗನ ಬಗ್ಗೆ ಕೇಳಿದಾಗ, ಅವನು ಸ್ನೇಹಿತನೊಂದಿಗೆ ಇದ್ದಾನೆ ಎಂದು ಹೇಳಿ ಒಂದು ವಿಳಾಸ ನೀಡಿದ್ದಳು. ಅದು ನಕಲಿ ಎಂದು ತಿಳಿದುಬಂದಿತ್ತು.
ಚಾಲಕನಿಗೆ ಕರೆ:
ನಂತರ ಪೊಲೀಸರು ಮತ್ತೆ ಚಾಲಕನಿಗೆ ಕರೆ ಮಾಡಿದ್ದರು. ಸುಚನಾಗೆ ಅರ್ಥವಾಗದಂತೆ ಕೊಂಕಣಿ ಭಾಷೆಯಲ್ಲಿ ಆತನೊಂದಿಗೆ ಮಾತನಾಡಿ, ಕ್ಯಾಬ್ ಅನ್ನು ಚಿತ್ರದುರ್ಗದ ಪೊಲೀಸ್ ಠಾಣೆ ಕಡೆಗೆ ತಿರುಗಿಸಲು ಆದೇಶಿಸಿದ್ದರು. ಕಾರು ಅಲ್ಲಿಗೆ ಬಂದ ಬಳಿಕ ಸುಚನಾಳನ್ನು ಬಂಧಿಸಿದ್ದರು.