ಉದಯ ಟಿವಿಯ ಇತ್ತೀಚಿನ ಕೆಲವು ಧಾರಾವಾಹಿಗಳನ್ನು ನೋಡಿದ್ದೀರಾ? ಮದುಮಗಳು, ಕನ್ಯಾದಾನ, ರಾಧಿಕಾ ಇತ್ಯಾದಿ.. ಥಟ್ಟನೆ ತಮಿಳಿನ ಧಾರಾವಾಹಿ ಅನ್ನಿಸಿಬಿಡುತ್ತವೆ. ಹೌದು. ಅಸಲಿಗೆ ಅವು ತಮಿಳು ರಿಮೇಕ್ ಗಳು. ಸೀನ್ ಟು ಸೀನ್ ರೀಮೇಕ್. ಎಪಿಸೋಡ್ ಆರಂಭ, ಮಧ್ಯಂತರ, ಅಂತ್ಯ ಎಲ್ಲವೂ ತಮಿಳಿನಲ್ಲಿ ಇದ್ದ ಹಾಗೇ ಇರಬೇಕು. ಹಾಗಂತ ಸನ್ ನೆಟ್ ವರ್ಕ್ ಮ್ಯಾನೇಜ್ ಮೆಂಟ್ ಆದೇಶವಂತೆ. ಚೆನ್ನೈನಲ್ಲಿ ಕೂತವರಿಗೆ ಮಾತ್ರ ಬುದ್ಧಿ ಇದೆ. ಬೆಂಗಳೂರು ಆಫೀಸಲ್ಲಿ ಕುಳಿತವರಿಗೆ ಬುದ್ಧಿ ಇಲ್ಲ. ಇದ್ದರೂ ಉಪಯೋಗಿಸುವುದು ಬೇಡ ಅನ್ನೋ ಇರಾದೆಯಂತೆ. ಸುಪೀರಿಯಾರಿಟಿ ಕಾಂಪ್ಲೆಕ್ಸ್.
ಅಸಲಿಗೆ ಉದಯ ವಾಹಿನಿಗೆ ವೀಕ್ಷಕರೇ ಇಲ್ಲ. ಸ್ವಲ್ಪ ಜನ ನೋಡುತ್ತಿದ್ದಾರೆ ಅಂದರೆ ಕಾರಣ ಸಿನಿಮಾ. ಜೊತೆಗೆ ಸ್ವಮೇಕ್ ಕಥೆಗಳಾದ `ಗೌರಿಪುರದ ಗಯ್ಯಾಳಿಗಳು, ನೇತ್ರಾವತಿ, ನಯನತಾರಾ’ ತಕ್ಕಮಟ್ಟಿಗೆ ಓಡುತ್ತಿವೆ. ಈಗ ವೀಕ್ಷಕರ ನೆಚ್ಚಿನ ಚಾನೆಲ್ ಉದಯ ಅಲ್ಲವೇ ಅಲ್ಲ. ಹೀಗಿದ್ದಾಗಲೂ ಗತಕಾಲದ ವೈಭವದ ಭ್ರಮೆಯಲ್ಲಿ ಉದಯ ಕಟ್-ಎನ್-ಪೇಸ್ಟ್ ರೀಮೇಕಿಗೆ ಜೋತುಬಿದ್ದು ತನ್ನ ಗೋರಿಗೆ ತಾನೇ ಹೊಂಡ ತೋಡುತ್ತಿದೆ. ಕನ್ನಡದ ಕ್ರಿಯಾಶೀಲ ಮನಸ್ಸುಗಳನ್ನು ನಿಕೃಷ್ಟವಾಗಿ ಕಾಣುತ್ತಿದೆ. ಇದಕ್ಕೆಲ್ಲ ಸನ್ ನೆಟ್ವರ್ಕ್ ಮುಖ್ಯಸ್ಥ ಕಲಾನಿಧಿ ಮಾರನ್ ಪತ್ನಿ ಕಾವೇರಿ ಅವರೇ ಕಾರಣ ಅಂತ ಗುಸುಗುಸು ಓಡಾಡ್ತಿದೆ. ಬೆಂಗಳೂರು ಮುಖ್ಯಸ್ಥರಿಗೆ ಸ್ವಲ್ಪವೂ ಸ್ವಾತಂತ್ರ್ಯ ಇಲ್ಲ ಎನ್ನಲಾಗುತ್ತಿದೆ. ಕನ್ನಡ(ಉದಯ), ತಮಿಳು(ಸನ್), ತೆಲುಗು(ಜೆಮಿನಿ), ಮಲಯಾಳಂ(ಸೂರ್ಯ), ಸನ್ ಮರಾಠಿ, ಸನ್ ಬೆಂಗಾಲಿ ಭಾಷೆಗಳ ಎಲ್ಲ ಧಾರಾವಾಹಿಗಳ ಆಗುಹೋಗು ನಿರ್ಧರಿಸುವವರು ಕಾವೇರಿಯವರೇ ಅಂತೆ. ಮೂಲತಃ ಕನ್ನಡತಿ ಆಗಿದ್ದರೂ ಸ್ವಮೇಕ್ ವಿರೋಧಿ ಧೋರಣೆ ಏಕೋ ಗೊತ್ತಿಲ್ಲ; ಒಟ್ಟಿನಲ್ಲಿ ಇಂಥ ಭ್ರಮಿಷ್ಠ ನಿರ್ಧಾರಗಳಿಂದ ಉದಯವನ್ನು ಕಾಪಾಡಲು ಮ್ಯಾನೇಜ್ ಮೆಂಟೇ ಬದಲಾಗಬೇಕು ಎಂಬ ಕುಹಕ ಕಿರುತೆರೆ ವಲಯದಲ್ಲಿ ಕೇಳಿಬರುತ್ತಿದೆ.