ಬೆಂಗಳೂರು.
ಕಲಿಯುಗದ ಆರಾಧ್ಯ ದೈವ ಏಳು ಬೆಟ್ಟದ ಒಡೆಯ ತಿರುಪತಿ ತಿಮ್ಮಪ್ಪ ಎಲ್ಲರ ಸಂಕಷ್ಟ ಪರಿಹರಿಸುವ ಅನಾಥ ಬಂಧು ಎಂದು ನಂಬಿರುವ ಭಕ್ತರು ಜೀವಮಾನದಲ್ಲಿ ಒಮ್ಮೆಯಾದರೂ ತಿರುಪತಿಗೆ ತೆರಳಬೇಕು ಎಂದು ಬಯಸುತ್ತಾರೆ.
ಹಾಗೆಯೇ ಇಲ್ಲಿ ಪ್ರಸಾದ ರೂಪದಲ್ಲಿ ಕೊಡಲಾಗುವ ಲಡ್ಡು ಜಗತ್ಪ್ರಸಿದ್ಧ. ಈ ಲಡ್ಡು ಜೊತೆಗೆ ಕೇವಲ ಪಟ್ಟಿ ಮಾತ್ರವಲ್ಲ ಅದರ ರುಚಿ ಮತ್ತು ಗುಣಮಟ್ಟ ಕೂಡ ಸಮ್ಮಿಳಿತವಾಗಿದ್ದು ನಾಸ್ತಿಕರೂ ಕೂಡ ಈ ಲಡ್ಡುವಿನ ಪ್ರೀತಿಯಿಂದ ಹೊರತಾಗಿಲ್ಲ.
ಇಂಥ ರುಚಿಕರ ಲಡ್ಡುವಿಗೆ ಪ್ರಮುಖ ಕಾರಣ ಕರ್ನಾಟಕದ ಹಾಲು ಒಕ್ಕೂಟ (ಕೆಎಂಎಫ್) ಸರಬರಾಜು ಮಾಡುವ ತುಪ್ಪ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.ಹಲವು ದಶಕಗಳಿಂದ ಕೆಎಂಎಫ್ ತಿರುಪತಿಗೆ ತುಪ್ಪ ಸರಬರಾಜು ಮಾಡುತ್ತಿತ್ತು.
ಆದರೆ, ಕಳೆದ ಐದು ವರ್ಷಗಳಿಂದ ತುಪ್ಪ ಸರಬರಾಜು ಸ್ಥಗಿತ ಮಾಡಲಾಯಿತು 5 ವರ್ಷಗಳ ಹಿಂದೆ ಟಿಟಿಡಿ ಆಡಳಿತ ಮಂಡಳಿ ಕೇಳಿದ ಬೆಲೆಗೆ ತುಪ್ಪ ಸರಬರಾಜು ಮಾಡಲು ಸಾಧ್ಯವಿಲ್ಲ ಎಂದು ಕೆಎಂಎಫ್ ಹೇಳಿದ ಪರಿಣಾಮ ಟಿ ಟಿ ಡಿ ಆಡಳಿತ ಮಂಡಳಿ ತುಪ್ಪ ಸರಬರಾಜು ಮಾಡಲು ಟೆಂಡರ್ ಕರೆಯಿತು.
ಕೆಎಂಎಫ್ ಕೂಡಾ ಟೆಂಡರ್ ನಲ್ಲಿ ಭಾಗವಹಿಸಿ ಪ್ರತಿ ಕಿಲೋ ತುಪ್ಪಕ್ಕೆ 600 ರೂಪಾಯಿ ನಮೂದಿಸಿತ್ತು. ಆದರೆ ಖಾಸಗಿ ಸಂಸ್ಥೆಯೊಂದು ಕೇವಲ 320 ರೂಪಾಯಿಗೆ ಕಿಲೋ ತುಪ್ಪ ಆ ಸರಬರಾಜು ಮಾಡುವುದಾಗಿ ಹೇಳಿ ಟೆಂಡರ್ ಪಡೆದುಕೊಂಡಿತು. ಆಗಲೇ ಕೆಎಂಎಫ್ ಅಧಿಕಾರಿಗಳು ಎಷ್ಟು ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಹಸುವಿನ ತುಪ್ಪ ಸರಬರಾಜು ಮಾಡಲು ಸಾಧ್ಯವಿಲ್ಲ ಪ್ರಾಣಿಜನ್ಯ ಕೊಬ್ಬುಗಳಿಂದ ತಯಾರಿಸಿದ ಉತ್ಪನ್ನವನ್ನು ತುಪ್ಪ ಮಾರಾಟ ಮಾಡಬಹುದು ಎಂದು ಎಚ್ಚರಿಸಿತ್ತು.
ಆದರೆ ಅಂದು ಈ ಎಚ್ಚರಿಕೆಯನ್ನು ಯಾರೂ ಕೂಡ ಗಂಭೀರವಾಗಿ ಪರಿಗಣಿಸಿರಲಿಲ್ಲ.
ಇದೀಗ ಕಳೆದ ಐದು ವರ್ಷಗಳಿಂದ ತಿರುಪತಿಗೆ ಸರಬರಾಜು ಮಾಡಿದ ತುಪ್ಪವು ಸೋಯಾಬೀನ್, ಗೋವಿನ ಜೋಳದ ಎಣ್ಣೆ, ಆಲಿವ್ ಎಣ್ಣೆ, ಗೋಧಿ ಹೊಟ್ಟಿನ ಎಣ್ಣೆ, ಜೋಳದ ಎಣ್ಣೆ, ಹತ್ತಿಬೀಜದ ಎಣ್ಣೆ, ಮೀನಿನ ಎಣ್ಣೆ, ಗೋವಿನ ಕೊಬ್ಬು, ತಾಳೆ ಎಣ್ಣೆ ಮತ್ತು ಹಂದಿಯ ಕೊಬ್ಬನ್ನು ಒಳಗೊಂಡಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.
ಇದೀಗ ಲಡ್ಡುವಿನಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಬಳಸಿರುವುದು ಲ್ಯಾಬ್ ವರದಿಯಲ್ಲಿ ದೃಢಪಟ್ಟಿದ್ದು ತುಪ್ಪದ ಗುಣಮಟ್ಟವನ್ನು ಪರೀಕ್ಷಿಸಲು ದೇವಸ್ಥಾನದ ಆಡಳಿತ ಸಮಿತಿಯೊಂದನ್ನು ರಚಿಸಿದೆ.
ಡಾ.ಸುರೇಂದ್ರನಾಥ್, ಡಾ.ವಿಜಯ್ ಭಾಸ್ಕರ್ ರೆಡ್ಡಿ, ಡಾ.ಸ್ವರ್ಣಲತಾ ಮತ್ತು ಡಾ.ಮಹದೇವನ್ ಅವರನ್ನೊಳಗೊಂಡ ನಾಲ್ಕು ತಜ್ಞರ ಸಮಿತಿ ರಚಿಸಲಾಗಿದ್ದು, ಒಂದು ವಾರದೊಳಗೆ ವರದಿ ಸಲ್ಲಿಸುವ ನಿರೀಕ್ಷೆಯಿದೆ ಎಂದು ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಕಾರ್ಯನಿರ್ವಾಹಕ ಅಧಿಕಾರಿ ಜೆ.ಶ್ಯಾಮಲಾ ರಾವ್ ತಿಳಿಸಿದ್ದಾರೆ.
ಟೆಂಡರ್‌ಗಳಲ್ಲಿ ಗುಣಮಟ್ಟದ ತುಪ್ಪ ಖರೀದಿಸಲು ಸೇರಿಸಬೇಕಾದ ನಿಯಮಗಳು ಮತ್ತು ಷರತ್ತುಗಳ ಬಗ್ಗೆ ಸಮಿತಿಯು ಸಲಹೆ ನೀಡಲಿದೆ ಎಂದು ಅವರು ಹೇಳಿದರು.