ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅತಿ ಹೆಚ್ಚು ಮೊತ್ತದ ಡ್ರಗ್ಸ್ ಸಾಗಾಟ ನಡೆದಿದ್ದು, ಬರೋಬ್ಬರಿ 99 ಕೋಟಿ ರೂಪಾಯಿ ಮೌಲ್ಯದ 14 ಕೆಜಿ ಹೆರಾಯಿನ್ ನೊಂದಿಗೆ ಪರಾರಿಯಾಗಲೆತ್ನಿಸಿದ ಶಿಕ್ಷಕನೊಬ್ಬನನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. ತೆಲಂಗಾಣದ ವ್ಯಕ್ತಿ ಎಂದು ಗುರುತಿಸಲಾದ ಈ ಶಂಕಿತ ವ್ಯಕ್ತಿ, ಆನ್‌ಲೈನ್ ಉದ್ಯೋಗ ಹುಡುಕಾಟದ ಮೂಲಕ ಇಥಿಯೋಪಿಯಾದಲ್ಲಿ ಡ್ರಗ್ ಕ್ಯಾರಿಯರ್ ಕೆಲಸಕ್ಕೆ ಇಳಿದಿದ್ದ.
ಆತ ಭಾರತಕ್ಕೆ ಬಂದಿಳಿದಾಗ ತನ್ನೊಂದಿಗೆ ಎರಡು ಟ್ರಾಲಿ ಬ್ಯಾಗ್‌ಗಳ ವಿಶೇಷವಾಗಿ ನಿರ್ಮಿತವಾಗಿದ್ದ ಕೃತಕ ತಳ ಭಾಗದೊಳಗೆ ಡ್ರಗ್ಸ್ ಗಳನ್ನೂ ಇರಿಸಿ ಕಳ್ಳಸಾಗಣೆ ಮಾಡುತ್ತಿದ್ದ. ಗುಪ್ತಚರ ಇಲಾಖೆಗೆ ಒಬ್ಬ ಮಧ್ಯವಯಸ್ಕ ವ್ಯಕ್ತಿ ಅಡಿಸ್ ಅಬಾಬಾದಿಂದ ಬೆಂಗಳೂರು ಮೂಲಕ ದೆಹಲಿಗೆ ಹೆಚ್ಚಿನ ಪ್ರಮಾಣದ ಹೆರಾಯಿನ್ ಅನ್ನು ಕಳ್ಳಸಾಗಣೆ ಮಾಡುತ್ತಿದ್ದಾನೆ ಎಂಬ ನಿರ್ದಿಷ್ಟ ಸುಳಿವು ಸಿಕ್ಕಿತು. ಗುಪ್ತಚರ ತಂಡದ ಸದಸ್ಯರು ಆಗಸ್ಟ್ 19 ರ ರಾತ್ರಿ KIA ನಲ್ಲಿ ನೆಲೆಸಿದರು ಮತ್ತು ಇಥಿಯೋಪಿಯನ್ ಏರ್ಲೈನ್ಸ್ ವಿಮಾನ ಇಳಿಯಲು ಕಾಯುತ್ತಿದ್ದರು. ಅದು ಭೂಸ್ಪರ್ಶ ಮಾಡಿದ ನಂತರ ಪ್ರಯಾಣಿಕರು ಇಳಿದ ಕೂಡಲೇ, DRI ತಂಡವು ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ತೆಲಂಗಾಣದ 52 ವರ್ಷದ ವ್ಯಕ್ತಿ ಎಂದು ಗುರುತಿಸಿತು. KIA ನಲ್ಲಿ ಕಂಪ್ಯೂಟರ್ ಸ್ಕ್ಯಾನರ್‌ಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಆತ ಸಾಗಿಸುತ್ತಿದ್ದ ಎರಡು ಟ್ರಾಲಿ ಬ್ಯಾಗ್‌ಗಳನ್ನು ಪರಿಶೀಲಿಸಿದಾಗ ಕಪ್ಪು ಟೇಪ್‌ನಿಂದ ಮರೆಮಾಚಲಾದ ಕಂದು ಬಣ್ಣದ ಪ್ಯಾಕೆಟ್‌ಗಳನ್ನು ಒಳಗೊಂಡಿರುವ ಪ್ರತಿ ಬ್ಯಾಗ್ನಲ್ಲೂ ಕೃತಕ ತಳಭಾಗಗಳು ಕಂಡುಬಂದವು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 14 ಕೆಜಿ ಹೆರಾಯಿನ್ ಗೆ 99 ಕೋಟಿ ರೂ. ಮೌಲ್ಯ. ಈ ವ್ಯಸನಕಾರಿ ವಸ್ತುವಿನ ಪ್ರತಿ ಕೆಜಿ ಮೌಲ್ಯವು 7 ಕೋಟಿ ರೂ. ಎಂದು ಮೂಲಗಳು ತಿಳಿಸಿವೆ.