ಹಾವೇರಿ,ನ.8-
ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ಹಾಗೂ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ವಿರುದ್ಧ ಹಾವೇರಿಯಲ್ಲಿ ಎಫ್ ಐಆರ್ ದಾಖಲಾಗಿದೆ.
ರೈತರೊಬ್ಬರ ಆತ್ಮಹತ್ಯೆ ವಿಚಾರವಾಗಿ ಸುಳ್ಳು ಮಾಹಿತಿ ಹರಡಿದ ಆರೋಪದಲ್ಲಿ ಇವರ ವಿರುದ್ಧ ಸಿಇಎನ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂಬುದು ನಮೂದಾಗಿದ್ದರಿಂದ ರೈತ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಕೆಲವು ಮಾಧ್ಯಮಗಳ ಇ-ಪೇಪರ್‌ನಲ್ಲಿ ಸುಳ್ಳು ಸುದ್ದಿ ಪ್ರಕಟಿಸಲಾಗಿತ್ತು.
ಇದನ್ನು ತಮ್ಮ ಎಕ್ಸ್ ಖಾತೆಗೆ ಟ್ಯಾಗ್ ಮಾಡಿದ ತೇಜಸ್ವಿ ಸೂರ್ಯ ಕರ್ನಾಟಕದಲ್ಲಿ ವಕ್ಫ್ ವಿವಾದ ತೀವ್ರಗೊಳ್ಳುತ್ತಿದೆ. ಹಾವೇರಿಯಲ್ಲಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ .ಅವರಿಗೆ ವಕ್ಫ್ ನೋಟಿಸ್ ಬಂದಿದ್ದೇ ಆತ್ಮಹತ್ಯೆಗೆ ಕಾರಣ ಎಂದು ಟ್ವೀಟ್ ಮಾಡಿದ್ದರು.
ಸಿಎಂ ಸಿದ್ದರಾಮಯ್ಯ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಅವರ ಅಲ್ಪಸಂಖ್ಯಾತರ ತುಷ್ಟೀಕರಣದಿಂದ ಕರ್ನಾಟಕದಲ್ಲಿ ದುರಂತಗಳು ಸಂಭವಿಸುತ್ತಿವೆ. ಪ್ರತಿ ದಿನ ಇಂಥ ಘಟನೆಗಳು ಸಂಭವಿಸುತ್ತಿವೆ’ ಎಂದು ಉಲ್ಲೇಖಿಸಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ಜಿಲ್ಲಾಡಳಿತ ಸ್ಪಷ್ಟನೆ ನೀಡಿ,ಈ ಸಾವು ಕಳೆದ ವರ್ಷ ಸಂಭವಿಸಿದೆ ಇದಕ್ಕೆ ಆಸ್ತಿ ದಾಖಲೆಯಲ್ಲಿ ವಕ್ಫ್ ಹೆಸರು ನಮೂದಾಗಿರುವುದು ಕಾರಣವಲ್ಲ. ಅವರು ಸಾಲಬಾಧೆಯಿಂದ ನೊಂದಿದ್ದರು ಎಂದು ಹೇಳಿತ್ತು.
ಇದಾದ ನಂತರ ತೇಜಸ್ವಿ ಸೂರ್ಯ ತಮ್ಮ ಟ್ವೀಟ್ ಅನ್ನು ಅಳಿಸಿಹಾಕಿದ್ದಾರೆ.
ಆದರೆ ಈ ವೇಳೆಗಾಗಲೇ ಟ್ವೀಟ್ ಸಾಕಷ್ಟು ಜನರಿಗೆ ತಲುಪಿದೆ ಎಂಬ ಅಂಶವನ್ನು ಪರಿಶೀಲಿಸಿ, ಎಫ್ ಐಆರ್ ದಾಖಲಿಸಲಾಗಿದೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರನ್ನು ಮೊದಲ ಆರೋಪಿಯಾಗಿ ಮಾಡಲಾಗಿದೆ. ಕನ್ನಡ ದುನಿಯಾ ಮಾಧ್ಯಮ ಹಾಗೂ ಕನ್ನಡ ನ್ಯೂಸ್ ಸಂಪಾದಕರನ್ನು ಕ್ರಮವಾಗಿ ಎರಡು-ಮೂರನೇ ಆರೋಪಿಯನ್ನಾಗಿ ಮಾಡಲಾಗಿದೆ. ಮೂವರಿಗೂ ಸದ್ಯದಲ್ಲೇ ನೋಟಿಸ್ ನೀಡಿ ವಿಚಾರಣೆ ನಡೆಸಿ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಹಾವೇರಿ ಜಿಲ್ಲಾ ಎಸ್ಪಿ ಅಂಶುಕುಮಾರ ತಿಳಿಸಿದರು.
ವಿವಿಧ ಗುಂಪುಗಳ ನಡುವೆ ದ್ವೇಷ ಬಿತ್ತುವ ಹಾಗೂ ದ್ವೇಷ ಉಂಟು ಮಾಡಲು ಪ್ರಚೋದಿಸುವ ಸುಳ್ಳು ಸುದ್ದಿ ಹರಿಬಿಟ್ಟ ಆರೋಪದಡಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ’ ಎಂದು ಹೇಳಿದರು.
Previous Articleಪಾಕಿಸ್ತಾನದಿಂದ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ.
Next Article ಹೆದರಿದ ತೇಜಸ್ವಿ ಸೂರ್ಯ..?