ಬೆಂಗಳೂರು, ಜ.22-
ಬುಧವಾರ ಬೆಳ್ಳಂಬೆಳಗ್ಗೆ ರಸ್ತೆಯಲ್ಲಿ ಜವರಾಯ ದಂಡೆತ್ತಿ ಬಂದಿದ್ದಾನೆ. ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ 14 ಜನ ಮೃತಪಟ್ಟಿದ್ದು 25 ಗಾಯಗೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಸಮೀಪದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ತರಕಾರಿ ತುಂಬಿದ ಲಾರಿ ಪಲ್ಟಿಯಾಗಿ ಅದರಲ್ಲಿ ಪ್ರಯಾಣಿಸುತ್ತಿದ್ದ 10 ಮಂದಿ, ಸ್ಥಳದಲ್ಲಿಯೇ 10 ಮಂದಿ ಮೃತಪಟ್ಟಿದ್ದಾರೆ.
ಗಾಯಗೊಂಡಿರುವ 15 ಕ್ಕೂ ಅಧಿಕ ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ.
ಹಾವೇರಿಯ ಸವಣೂರಿನಿಂದ ಕುಮಟಾ ಕಡೆಗೆ ವ್ಯಾಪಾರಕ್ಕೆಂದು ತರಕಾರಿ ಹಾಗೂ ಹಣ್ಣುಗಳನ್ನು ತುಂಬಿಸಿಕೊಂಡು ಬರುತ್ತಿದ್ದ ಲಾರಿ ಇದಾಗಿತ್ತು. ಇದರಲ್ಲಿ ಹಲವರು ಪ್ರಯಾಣ ಮಾಡುತ್ತಿದ್ದರು ಈ ನತದೃಷ್ಟ ಲಾರಿ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಗುಳ್ಳಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಸುಕಿನ ಜಾವ ಪಲ್ಟಿಯಾಗಿದೆ.
ಪಲ್ಟಿ ರಭಸಕ್ಕೆ ಲಾರಿಯಡಿ ಸಿಕ್ಕಿ 10 ಮಂದಿ ಮೃತ ಪಟ್ಟಿದ್ದಾರೆ. ಇನ್ನು 15 ಕ್ಕೂ ಅಧಿಕ ಮಂದಿ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಾವೇರಿ ಜಿಲ್ಲೆಯ ಸವಣೂರಿನ ಫಯಾಜ್ ಜಮಖಂಡಿ (45), ವಾಸೀಂ ಮುಡಗೇರಿ (35 ), ಇಜಾಜ್ ಮುಲ್ಲಾ (20), ಸಾದೀಕ್ ಭಾಷ್ (30), ಗುಲಾಮ್ ಹುಷೇನ್ ಜವಳಿ (40), ಇಮ್ತಿಯಾಜ್ ಮುಳಕೇರಿ (36), ಅಲ್ಪಾಜ್ ಜಾಫರ್ ಮಂಡಕ್ಕಿ (25), ಜೀಲಾನಿ ಅಬ್ದುಲ್ ಜಖಾತಿ (25), ಅಸ್ಲಂ ಬಾಬುಲಿ ಬೆಣ್ಣಿ (24) ಮೃತಪಟ್ಟವರು.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರ ಸ್ಥಿತಿ ಚಿಂತಾಜನಕವಾಗಿದ್ದು, ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ
ಗಾಯಗೊಂಡ 15 ಮಂದಿಯನ್ನು ಯಲ್ಲಾಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನು ಯಲ್ಲಾಪುರ ಆಸ್ಪತ್ರೆಗೆ ಸಾಗಿಸಲಾಗಿದೆ. ಮಾಹಿತಿ ಸಿಕ್ಕ ತಕ್ಷಣ ಘಟನಾ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸಿ ಪರಿಹಾರ ಕೈಗೊಂಡು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ ಪಿ ನಾರಾಯಣ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಸಾವು:
ರಾಯಚೂರಿನ ಸಿಂಧನೂರು ನಗರದ ಹೊರವಲಯದಲ್ಲಿ ಮುಂಜಾನೆ ಮಂತ್ರಾಲಯದ ಸಂಸ್ಕೃತ ವಿದ್ಯಾಪೀಠದ ಕ್ರೂಸರ್ ವಾಹನ ಪಲ್ಟಿಯಾಗಿ ಮೂವರು ವಿದ್ಯಾರ್ಥಿಗಳು ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ.
ವಿದ್ಯಾರ್ಥಿಗಳಾದ ಹಯವದನ (18), ಸುಜಯೇಂದ್ರ(22), ಅಭಿಲಾಷ (20) ಹಾಗೂ ಚಾಲಕ ಜಂಸಾಲಿ ಶಿವ (20) ಮೃತ ದುರ್ದೈವಿಗಳು.
14 ಮಂದಿ ಪ್ರಯಾಣಿಸುತ್ತಿದ್ದ ಕ್ರೂಸರ್ ವಾಹನವು ಮಂತ್ರಾಲಯದಿಂದ ಕೊಪ್ಪಳದ ಆನೆಗುಂದಿಯ ನರಹರಿ ತೀರ್ಥರ ವೃಂದಾವನಕ್ಕೆ ತೆರಳುತ್ತಿತ್ತು. ಈ ವೇಳೆ ಆಕ್ಸಿಲರೇಟರ್ ಕಟ್ ಆಗಿದ್ದರಿಂದ ವಾಹನ ಪಲ್ಟಿ ಹೊಡೆದಿದೆ.
ಘಟನೆಗೆ ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯವೇ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.
ಶ್ರೀಗಳಿಂದ ಮಾಹಿತಿ:
ಗಾಯಗೊಂಡಿರುವ 10 ವಿದ್ಯಾರ್ಥಿಗಳನ್ನ ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಪೈಕಿ ಓರ್ವ ವಿದ್ಯಾರ್ಥಿ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸಿಂಧನೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಮಂತ್ರಾಲಯ ಶ್ರೀಗಳು ಆಗಮಿಸಿ ಮಾಹಿತಿ ಪಡೆದಿದ್ದಾರೆ..
Previous Articleನಾಲ್ಕು ಲಕ್ಷಕ್ಕೆ ಮಗು ಮಾರಾಟ
Next Article ಯತ್ನಾಳ್, ಜಾರಕಿಹೊಳಿ ಗೆ ಗೇಟ್ ಪಾಸ್ ಕೊಡಿ