ಬೆಂಗಳೂರು,ಆ.17-ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತ ನಟ ದರ್ಶನ್ ಮತ್ತು ಸಹ ಆರೋಪಿಗಳನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ರಾಜ್ಯದ ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರಿಸಲು ಜೈಲು ಅಧಿಕಾರಿಗಳು ಮುಂದಾಗಿದ್ದಾರೆ.
ನಟ ದರ್ಶನ್ ಮತ್ತು ಸಹ ಆರೋಪಿಗಳನ್ನು ಭದ್ರತೆ ಮತ್ತು ಆಡಳಿತಾತ್ಮಕ ಕಾರಣಗಳಿಂದ ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರಿಸಲು ನಿರ್ಧಾರ ಕೈಗೊಂಡು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ.
ಜೈಲು ಅಧಿಕಾರಿಗಳು ಆರೋಪಿಗಳನ್ನು ಬೇರೆ ಜೈಲುಗಳಿಗೆ ವರ್ಗಾಯಿಸುವಂತೆ ಕೋರಿ 64ನೇ ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯವು ಜೈಲು ಅಧಿಕಾರಿಗಳಿಂದ ನೇರವಾಗಿ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದೆ. ಬದಲಾಗಿ, ಪ್ರಕರಣದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್ ಪಿಪಿ) ಮೂಲಕವೇ ಅರ್ಜಿಯನ್ನು ಸಲ್ಲಿಸುವಂತೆ ಸೂಚಿಸಿದೆ. ನ್ಯಾಯಾಲಯದ ಈ ಸೂಚನೆಯ ಮೇರೆಗೆ, ಜೈಲು ಸೂಪರಿಂಟೆಂಡೆಂಟ್ ಅವರು ಎಸ್ಪಿಪಿ ಅವರನ್ನು ಭೇಟಿ ಮಾಡಿ, ಇಂದು ಮಧ್ಯಾಹ್ನ ಅಥವಾ ಆ.18ರಂದು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.
ಭದ್ರತೆಗೆ ಕಾರಣಗಳೇನು?
ಆರೋಪಿಗಳ ರಾಜಾತಿಥ್ಯ ಮತ್ತು ಜೈಲು ಅಧಿಕಾರಿಗಳ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಳೆದ ಬಾರಿಯ ರಾಜಾತಿಥ್ಯ ಪ್ರಕರಣವನ್ನು ಉಲ್ಲೇಖಿಸಿ, ಭದ್ರತಾ ಹಿತದೃಷ್ಟಿಯಿಂದ ಆರೋಪಿಗಳ ಸ್ಥಳಾಂತರ ಅತ್ಯಗತ್ಯ ಎಂದು ಮನವಿ ಮಾಡಲಾಗಿದೆ. ದರ್ಶನ್ ಅವರ ಜಾಮೀನು ರದ್ದು ಆದೇಶದ ಸಮಯದಲ್ಲಿ ಸುಪ್ರೀಂ ಕೋರ್ಟ್ ಜೈಲು ಅಧಿಕಾರಿಗಳ ಕಾರ್ಯನಿರ್ವಹಣೆಯನ್ನು ಕಟುವಾಗಿ ಟೀಕಿಸಿತ್ತು. ನ್ಯಾಯಾಲಯದ ಈ ಖಂಡನೆಯಿಂದಾಗಿ, ಜೈಲು ಅಧಿಕಾರಿಗಳು ಯಾವುದೇ ಹೆಚ್ಚಿನ ವಿವಾದಗಳಿಗೆ ಅವಕಾಶ ನೀಡದಂತೆ ಆರೋಪಿಗಳನ್ನು ಬೇರೆಡೆಗೆ ವರ್ಗಾಯಿಸಲು ನಿರ್ಧರಿಸಿದ್ದಾರೆ.
ಸ್ಥಳಾಂತರದ ನಿರ್ಧಾರವು ಪ್ರಭಾವಿ ವ್ಯಕ್ತಿಗಳು ಬಂಧಿತರಾದಾಗ ಜೈಲುಗಳಲ್ಲಿ ಎದುರಾಗುವ ಭದ್ರತಾ ಸವಾಲುಗಳನ್ನು ಎದುರಿಸುವಲ್ಲಿ ಹೊಸ ದಿಕ್ಕನ್ನು ಸೂಚಿಸುತ್ತದೆ. ನ್ಯಾಯಾಲಯದ ಅಂತಿಮ ತೀರ್ಪು ಬಂದ ನಂತರವೇ ಈ ಸ್ಥಳಾಂತರ ಪ್ರಕ್ರಿಯೆ ನಡೆಯಲಿದೆ.
ಯಾರನ್ನು ಎಲ್ಲಿಗೆ ಶಿಫ್ಟ್
ದರ್ಶನ್: ಬಳ್ಳಾರಿ ಜೈಲು
ಜಗದೀಶ್, ಲಕ್ಷ್ಮಣ್: ಶಿವಮೊಗ್ಗ ಜೈಲು
ನಾಗರಾಜ್: ಗುಲ್ಬರ್ಗಾ ಜೈಲು
ಪ್ರದೋಷ್: ಬೆಳಗಾವಿ ಜೈಲು
ಪವಿತ್ರಾ ಗೌಡ, ಅನುಕುಮಾರ್: ಹಿಂದೆಯೂ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇದ್ದರು.
Previous Articleಮಲಗಿದ್ದಲ್ಲೇ ಸುಟ್ಟು ಕರಕಲಾದರು
Next Article ಸ್ಯಾಂಡಲ್ ವುಡ್ ನಟನ ಕುಟುಂಬದಲ್ಲಿ ಬಿರುಗಾಳಿ