ಕರ್ನಾಟಕ : ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆ ಮೀಸಲಿಟ್ಟ ಹಣವನ್ನು ಕಾನೂನಿಗೆ ವಿರುದ್ದವಾಗಿ ಮೂಲಸೌಕರ್ಯ ಯೋಜನೆಗಳಿಗೆ ಬಳಕೆ ಮಾಡುವ ಮೂಲಕ ರಾಜ್ಯದ ಬಿಜೆಪಿ ಸರ್ಕಾರ ದಲಿತ ಸಮುದಾಯಕ್ಕೆ ದ್ರೋಹ ಬಗೆದಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
2021-22ರ ರಾಜ್ಯ ಬಜೆಟ್ ನಲ್ಲಿ ಎಸ್ ಸಿಪಿ/ಟಿಎಸ್ ಪಿ ಕಾಯ್ದೆಯನ್ವಯ ಯೋಜನಾ ವೆಚ್ಚದ ಶೇಕಡಾ 24.1ರಷ್ಟು ಅಂದರೆ 26,695.64 ಕೋಟಿ ರೂಪಾಯಿಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ಕಲ್ಯಾಣಕ್ಕೆ ಮೀಸಲಿಡಲಾಗಿತ್ತು. ಆದರೆ ರಾಜ್ಯ ಸರ್ಕಾರ ಕಾಯ್ದೆಯನ್ನು ಉಲ್ಲಂಘಿಸಿ ಒಟ್ಟು ಹಣದಲ್ಲಿ ರೂ.7885.32 ಕೋಟಿಗಳನ್ನು ಮೂಲಸೌಕರ್ಯದ ಯೋಜನೆಗಳಿಗೆ ವೆಚ್ಚ ಮಾಡಲಾಗಿದೆ. ಈ ಮೂಲಕ ಈ ಸಮುದಾಯದ ಹಣ ದುರ್ಬಳಕೆ ಮಾಡಲಾಗಿದೆ ಎಂದು ಆಪಾದಿಸಿದ್ದಾರೆ.
ಎಸ್ ಸಿಪಿ/ಟಿಎಸ್ ಪಿ ಕಾಯ್ದೆಯ ಪ್ರಕಾರ ಒಟ್ಟು ಬಜೆಟ್ ನ ಶೇಕಡಾ 24.1ರಷ್ಟು ಭಾಗವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣ ಕಾರ್ಯಕ್ರಮಗಳಿಗಷ್ಟೇ ಬಳಸಬೇಕಿದೆ. ಆ ವರ್ಷ ಉಳಿಕೆಯಾದರೆ ಅದನ್ನು ನಂತರದ ವರ್ಷ ಖರ್ಚು ಮಾಡಬೇಕು. ನಿಗದಿತ ಪ್ರಮಾಣದಲ್ಲಿ ನಿಗದಿತ ಉದ್ದೇಶಕ್ಕೆ ಖರ್ಚು ಮಾಡದೆ ಇದ್ದರೆ ಸಂಬಂಧಿತ ಅಧಿಕಾರಿಗಳ ವಿರುದ್ದ ಕಾನೂನುಕ್ರಮ ಕೈಗೊಳ್ಳಲು ಕೂಡಾ ಕಾಯ್ದೆಯಲ್ಲಿ ಅವಕಾಶ ನೀಡಲಾಗಿದೆ.ಇದನ್ನು ಬಳಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.