ಸಾರ್ವಜನಿಕರು ನಿತ್ಯ ಸಂಚಾರಕ್ಕೆ ಬಳಸುವ ರಸ್ತೆಯನ್ನು ಬಂದ್ ಮಾಡಿದ್ದನ್ನು ಪ್ರಶ್ನಿಸಿ ನ್ಯಾಯ ಕೇಳಿದ್ದೇ ತಪ್ಪಾಗಿದೆ. ಸಾರ್ವಜನಿಕರ ಪರವಾಗಿ ಹೋರಾಟ ನಡೆಸಿದ್ದಕ್ಕಾಗಿ ಕ್ರಿಮಿನಲ್ ಪ್ರಕರಣ ಎದುರಿಸುವಂತಾಗಿದ್ದು, ನಿರೀಕ್ಷಣಾ ಜಾಮೀನು ಪಡೆಯುವಂತಾಗಿದೆ. ಈ ಘಟನೆ ನಡೆದಿರುವುದು ಮರಿಯಮ್ಮನಹಳ್ಳಿ ಸಮೀಪದ ಪೋತಲಕಟ್ಟೆಯಲ್ಲಿ ನಡೆದಿದೆ.
ಈ ಗ್ರಾಮದ ವ್ಯಕ್ತಿ ದೇವರಾಜ್ ಸಮೂಹ ಶಕ್ತಿ ಸಂಘಟನೆಯ ಕಾರ್ಯಕರ್ತ. ನ್ಯಾಯಕ್ಕಾಗಿ ಹೋರಾಟ ನಡೆಸಿದ ತಪ್ಪಿಗಾಗಿ ಪೊಲೀಸ್ ಠಾಣೆಗೆ ಅಲೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಪೋತಲಕಟ್ಟೆ ಗ್ರಾಮದ ಪ್ರಮುಖ ರಸ್ತೆಗೆ ಹೊಂದಿಕೊಂಡಂತೆ ಬಾವಿಯೊಂದು ಇತ್ತು. ಬಹು ಕಾಲದವರೆಗೆ ಗ್ರಾಮಸ್ಥರು ಇದನ್ನು ಕುಡಿಯುವ ನೀರಿಗಾಗಿ ಬಳಸುತ್ತಿದ್ದರು. ಇತ್ತೀಚೆಗೆ ಈ ಬಾವಿಯ ಮೇಲಿನ ಅವಲಂಬನೆ ಕಡಿಮೆಯಾಗಿತ್ತು. ಹೀಗಾಗಿ ಈ ಬಾವಿ ಮುಂದಿನ ಮನೆಯ ವ್ಯಕ್ತಿ ತಾಯಪ್ಪ ಎಂಬಾತ ತಮಗೆ ಸೊಳ್ಳೆಯ ಕಾಟವಿದೆ ಎಂದು ಹೇಳಿ ಏಕಾಏಕಿ ಬಾವಿ ಮುಚ್ಚಿದರು. ಸಾರ್ವಜನಿಕರು ಇದಕ್ಕೆ ಆಕ್ಷೇಪಿಸಿದರೂ ಕೇಳಲೇ ಇಲ್ಲ. ಇಷ್ಟಕ್ಕೆ ಸುಮ್ಮನಾಗದ ಈ ವ್ಯಕ್ತಿ ಬಾವಿ ಹಾಗು ಅದರ ಸುತ್ತಮುತ್ತಲಿನ ಜಾಗವನ್ನು ಕಬಳಿಸಲು ಸಂಚು ರೂಪಿಸಿದರು. ಬಾವಿಗೆ ಹಾಕಲಾಗಿದ್ದ ಕಲ್ಲುಗಳನ್ನು ಹೊರತೆಗೆದು ರಸ್ತೆಗೆ ಅಡ್ಡಲಾಗಿ ಹಾಕಿದರು. ಇದರಿಂದ ಆ ಪ್ರದೇಶದ ರಸ್ತೆ ಸಂಪರ್ಕ ಕಡಿತಗೊಂಡಿತು.
ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯೆ ನೀಲಮ್ಮ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ರಸ್ತೆಗೆ ಹಾಕಲಾಗಿರುವ ಕಲ್ಲುಗಳನ್ನು ತೆಗೆಯುವಂತೆ ಸೂಚಿಸಿದರೂ ತಾಯಪ್ಪ ಸೊಪ್ಪು ಹಾಕಲಿಲ್ಲ. ಪರಿಣಾಮ ನೀಲಮ್ಮ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳು ಪಂಚಾಯತಿಗೆ ದೂರು ಸಲ್ಲಿಸಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಸಮೂಹ ಶಕ್ತಿ ಕಾರ್ಯಕರ್ತ ದೇವರಾಜ್ ಗ್ರಾಮಸ್ಥರ ಪರ ನಿಂತರು. ಪರಿಣಾಮ ಪಂಚಾಯತಿಯ ಅಧಿಕಾರಿಗಳು ತಾಯಪ್ಪನಿಗೆ ನೋಟಿಸ್ ನೀಡಿ ಕಲ್ಲು ತೆಗೆಯಲು ಸೂಚಿಸಿದರು. ಆದರೂ, ತಾಯಪ್ಪ ಇದಕ್ಕೆ ಕ್ಯಾರೆ ಅನ್ನಲಿಲ್ಲ. ಪರಿಣಾಮ ದೇವರಾಜ್ ಗ್ರಾಮಸ್ಥರ ಸಹಿಯೊಂದಿಗೆ ಮರಿಯಮ್ಮನ ಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದರು. ಆದರೆ ಪೊಲೀಸರು ಈ ದೂರಿನ ಬಗ್ಗೆ ಯಾವುದೇ ಗಮನ ಹರಿಸಲಿಲ್ಲ. ಒಂದೆರಡು ದಿನಗಳ ನಂತರ ದೇವರಾಜ್ ತನ್ನ ಕಾರಿನಲ್ಲಿ ತಾಯಪ್ಪ ಅವರ ಮನೆಯ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ತೆರಳುತ್ತಿದ್ದಾಗ ಕಾರನ್ನು ಅಡ್ಡಗಟ್ಟಿದ ತಾಯಪ್ಪ ಮತ್ತು ಅವರ ಕುಟುಂಬ ಸದಸ್ಯರು ದೇವರಾಜ್ ಮೇಲೆ ಹಲ್ಲೆ ನಡೆಸಿ ಕಾರನ್ನು ಜಖಂಗೊಳಿಸಿದರು. ಇದನ್ನು ಕಂಡ ಗ್ರಾಮಸ್ಥರು ಹಲ್ಲೆ ಕೋರರಿಂದ ದೇವರಾಜ್ ಅವರನ್ನು ರಕ್ಷಿಸಿ ಪೊಲೀಸ್ ಕಂಟ್ರೋಲ್ ರೂಮಿಗೆ ಮಾಹಿತಿ ನೀಡಿದರು. ನಂತರ ಸ್ಥಳಕ್ಕೆ ಬಂದ ಪೊಲೀಸರು ದಾರಿಗೆ ಅಡ್ಡವಾಗಿ ಹಾಕಿರುವ ಕಲ್ಲು ತೆಗೆಯುವಂತೆ ಸೂಚಿಸಿ ಹೋದರೆ, ಠಾಣೆಗೆ ತೆರಳಿದ ದೇವರಾಜ್ ತಮ್ಮ ಮೇಲಾದ ಹಲ್ಲೆಯ ಘಟನೆ ವಿವರಿಸಿ ದೂರು ಸಲ್ಲಿಸಿದರು. ದೂರು ಸ್ವೀಕರಿಸಿದ ಪೊಲೀಸರು ಎರಡು ದಿನಗಳಾದರೂ FIR ದಾಖಲಿಸಲಿಲ್ಲ. ಇದರಿಂದ ಬೇಸರಗೊಂಡ ದೇವರಾಜ್ ತಮ್ಮ ಕುಟುಂಬ ಸದಸ್ಯರೊಂದಿಗೆ ಠಾಣೆಯ ಮುಂದೆ ಧರಣಿ ಕೂರುತ್ತೇನೆ, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡುತ್ತೇನೆ ಎಂದು ಬೆದರಿಕೆ ಹಾಕಿದರು. ಆಗ ಮೆತ್ತಗಾದ ಪೊಲೀಸರು ಹಿಂದಿನ ದಿನಾಂಕ ಹಾಗು ಸಮಯ ನಮೂದಿಸಿ Fir ದಾಖಲಿಸಿದರು. ನಂತರ ದೇವರಾಜ್ ಮನೆಗೆ ಮರುಳಿದರು. ಮರುದಿನ ದೇವರಾಜ್ ಮನೆಗೆ ಬಂದ ಪೊಲೀಸರು ನಿಮ್ಮ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಬಂದು ವಿವರಣೆ ನೀಡಿ ಎಂದು ಹೇಳಿದ್ದಾರೆ. ರಸ್ತೆಗಾಗಿ ಹೋರಾಟ ನಡೆಸಿದ ದೇವರಾಜ್ ವಿರುದ್ದ ತಾಯಪ್ಪ. ಪ್ರತಿ ದೂರು ದಾಖಲಿಸಿದ್ದು, ಅದನ್ನು ಆಧರಿಸಿ FIR ಹಾಕಿರುವ ಮರಿಯಮ್ಮನಹಳ್ಳಿ ಠಾಣೆ ಪೊಲೀಸರು ಗ್ರಾಮದಲ್ಲಿಯೇ ಇಲ್ಲದ ವಿದ್ಯಾರ್ಥಿಗಳನ್ನು ಕೂಡ FIRನಲ್ಲಿ ಹೆಸರಿಸಿದ್ದಾರೆ. ನ್ಯಾಯಕ್ಕಾಗಿ ಹೋರಾಟ ನಡೆಸಿದವರ ಪರ ನಿಲ್ಲಬೇಕಾದ ಪೊಲೀಸರು ಆರೋಪಿಗಳ ಪರವೇ ನಿಂತಿರುವುದು ಪರಿಸ್ಥಿತಿಯ ವ್ಯಂಗ್ಯವಾಗಿದೆ.