ಬೆಂಗಳೂರು,ಸೆ.09:
ರಾಜ್ಯ ರಾಜಕಾರಣದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿಯ ಮೇಲೆ ತೂಗು ಕತ್ತಿ ತೂಗುತ್ತಿದ್ದು ದೀಪಾವಳಿ ವೇಳೆಗೆ ಈ ಸರ್ಕಾರ ಧಮಾರ್ ಎನ್ನಲಿದೆ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಭವಿಷ್ಯ ನುಡಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚಟುವಟಿಕೆಗಳು ಬಿರಿಸುಗೊಂಡಿವೆ. ಮುಖ್ಯಮಂತ್ರಿ ರಕ್ಷಣೆಗೆ ಬಂಡೆಯಂತೆ ನಿಲ್ಲುತ್ತೇನೆ ಎಂದು ಹೇಳಿದವರೇ ಬಾಂಬ್ ಇಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಪ್ರಕರಣದಲ್ಲಿ ಅಕ್ರಮ ನಡೆದಿರುವುದು ನಿಜ ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕಾಗಿ ಶಿಕ್ಷೆ ಅನುಭವಿಸಲಿದ್ದಾರೆ ಇದು ಅರಿತ ಹಲವು ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಹುದ್ದೆಗೆ ಟವಲ್ ಹಾಕಿಕೊಂಡು ಕಾಯುತ್ತಿದ್ದಾರೆ ಆದರೆ ಇದಕ್ಕೆ ಅವಕಾಶ ಸಿಗುವುದಿಲ್ಲ ಸರ್ಕಾರ ಪತನ ಹೊಂದುವುದು ನಿಶ್ಚಿತ ಎಂದು ತಿಳಿಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಸುಳ್ಳು ಲೆಕ್ಕ ಕಳ್ಳ ಬಿಲ್ಲು 100 ಪರ್ಸೆಂಟ್ ಲೂಟಿ ನಡೆಯುತ್ತಿದೆ. ಅವರ ಹಗರಣ ಮರೆಮಾಚೋಕೆ ಇನ್ನೊಬ್ಬರ ಕಡೆ ಬೊಟ್ಟು ಮಾಡುವುದು ಸಂಪ್ರದಾಯವಾಗಿದೆ. ತಪ್ಪು ಯಾರು ಮಾಡಿದರೂ ತಪ್ಪೇ. ಅವರ ತರಹ ಜಾತಿ ಗುರಾಣಿ ಬಳಸಲ್ಲ. ಭ್ರಷ್ಟಾಚಾರ ಮುಚ್ಚಿ ಹಾಕೋಕೆ ಸಾಧ್ಯ ಇಲ್ಲ. ಸತ್ಯ ಯಾವತ್ತಾದರೂ ಹೊರಬರಲೇಬೇಕು. ಭ್ರಷ್ಟರು ಬಹಳ ದಿನ ಅಧಿಕಾರದಲ್ಲಿ ಇರಬಾರದು ಎಂದು ಹೇಳಿದರು.