ಮಂಗಳೂರು,ಜು.31-ಧರ್ಮಸ್ಥಳದ ಅಸಹಜ ಸಾವುಗಳ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳಿಗೆ ದೂರುದಾರ ಗುರುತಿಸಿದ್ದ 6ನೇ ಪಾಯಿಂಟ್‌ನಲ್ಲಿ ಎರಡು ಅಸ್ಥಿಪಂಜರಗಳು ಪತ್ತೆಯಾಗಿದೆ.
ಕಳೆದ ಮೂರು ದಿನಗಳಿಂದ ಶವಗಳ ಪತ್ತೆಗೆ ಅಗೆಯುವ ಕಾರ್ಯ ನಡೆಯುತ್ತಿದ್ದು,ನಿನ್ನೆ ಸಂಜೆಯವರೆಗೆ ಯಾವುದೇ ಮೃತದೇಹದ ಗುರುತು ಪತ್ತೆಯಾಗಿರಲಿಲ್ಲ.
ಆದರೆ ದೂರುದಾರ ಗುರುತಿಸಿದ ಸ್ಥಳಗಳ 6ನೇ ಪಾಯಿಂಟ್‌ನಲ್ಲಿ 15 ಕಾರ್ಮಿಕರಿಂದ ಉತ್ಖನನ ನಡೆಯುತ್ತಿದ್ದು, ಎರಡು ಅಸ್ಥಿಪಂಜರಗಳು ಪತ್ತೆಯಾಗಿದೆ.
ಅಸ್ಥಿಪಂಜರದ ದೇಹದ ಪೂರ್ತಿ ಭಾಗಗಳು ಸಿಕ್ಕಿಲ್ಲ, ಕೆಲವು ಭಾಗಗಳು ಮಾತ್ರ ಸಿಕ್ಕಿದ್ದು, ಇನ್ನೂ ಆಳಕ್ಕೆ ತೆಗೆದು ಹುಡುಕಾಟ ನಡೆಸಲಾಗುತ್ತಿದೆ. ಇನ್ನೂ ಇದರ ಬಳಿಕ 7 ಹಾಗೂ 8ನೇ ಪಾಯಿಂಟ್‌ನಲ್ಲಿ ಉತ್ಖನನ ಕಾರ್ಯ ನಡೆಸುವ ಸಾಧ್ಯತೆಗಳಿವೆ. ದೂರುದಾರ ನಿನ್ನೆ ಗುರುತಿಸಿರುವ ಪಾಯಿಂಟ್ ನಂಬರ್ 2 ರಿಂದ 5ರವರೆಗೆ 4 ರಿಂದ 6 ಅಡಿ ಮಣ್ಣು ಅಗೆಯಲಾಗಿದೆ. ಈ ವೇಳೆ ಶವಗಳನ್ನು ಹೂತಿರುವ ಯಾವುದೇ ಕುರುಹುಗಳು ಪತ್ತೆಯಾಗಿರಲಿಲ್ಲ.
ಇನ್ನು ದೂರುದಾರ ಗುರುತಿಸಿರುವ ಪಾಯಿಂಟ್ ನಂಬರ್ 13ರತ್ತ ಎಲ್ಲರ ಚಿತ್ತ ನೆಟ್ಟಿದೆ. ಅಲ್ಲಿ ಹಲವಾರು ಶವಗಳನ್ನು ಹೂತಿರುವುದಾಗಿ ದೂರುದಾರ ಹೇಳಿದ್ದಾರೆ. ಈ ಪಾಯಿಂಟ್ ನೇತ್ರಾವತಿ ಸ್ನಾನಘಟ್ಟದ ಸಮೀಪದ ಬಯಲಿನಲ್ಲಿದ್ದು, ಇಲ್ಲಿ ಇಂದು ಶೋಧ ನಡೆಸಲಾಗುತ್ತಿದೆ.
ಆರನೇ ಪಾಯಿಂಟ್‌ನಲ್ಲಿ ಶೋಧ ಕಾರ್ಯ ಮುಂದುವರೆದಿದೆ. ಕಾರ್ಮಿಕರು ಮತ್ತಷ್ಟು ಮೂಳೆಗಳನ್ನು ಹುಡುಕಲು ಮಣ್ಣು ಹೊರಗೆ ಹಾಕುತ್ತಿದ್ದಾರೆ. ಕಾರ್ಮಿಕರು ಈಗಾಗಲೇ ನಾಲ್ಕು ಅಡಿ ಅಗೆದಿದ್ದಾರೆ. ಗುಂಡಿಯ ಮಣ್ಣನ್ನು ಫಾರೆನ್ಸಿಕ್ ಪರಿಶೀಲನೆ ಮಾಡಿದ್ದಾರೆ.
ಪತ್ತೆಯಾಗಿರುವ ಅಸ್ಥಿಪಂಜರಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸಿದ ಬಳಿಕ ಅವುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಲು ಎಸ್‌ಐಟಿ ಅಧಿಕಾರಿಗಳು ಸಿದ್ಧತೆ ಕೈಗೊಂಡಿದ್ದಾರೆ. ಅಸ್ಥಿಪಂಜರ ದೊರೆತ ಸ್ಥಳಕ್ಕೆ ಎಸ್ ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಆಗಮಿಸಿ ಮಾಹಿತಿಯನ್ನು ಪಡೆದಿದ್ದಾರೆ.
ಧರ್ಮಸ್ಥಳದ ನೇತ್ರಾವತಿ ಘಾಟ್ ಬಳಿಯ ಕಾಡುಪ್ರದೇಶದಲ್ಲಿ 1998 ರಿಂದ 2014ರವರೆಗೆ ನೂರಾರು ಮಹಿಳೆಯರು ಮತ್ತು ಮಕ್ಕಳ ಶವಗಳನ್ನು ಹೂತಿಟ್ಟಿದ್ದೇನೆ ಎಂದು ಸ್ವಚ್ಛತಾ ಕಾರ್ಮಿಕ ಅನಾಮಿ ವ್ಯಕ್ತಿ ಆರೋಪಿಸಿದ್ದ. ಈ ಶವಗಳು ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದವು ಎಂದು ದೂರುದಾರ ತಿಳಿಸಿದ್ದು, ಈ ಆರೋಪದಿಂದ ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ರಾಜ್ಯ ಸರ್ಕಾರವು ಜುಲೈ 19, 2025 ರಂದು ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಡಾ. ಪ್ರಣವ್ ಮೊಹಂತಿ ನೇತೃತ್ವದಲ್ಲಿ ಎಸ್‌ಐಟಿಯನ್ನು ರಚಿಸಿತ್ತು
Previous Articleಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಡೌಟು ?
Next Article ಆಲ್ ಖೈದಾ ಲೇಡಿಯ ಭಯಾನಕ ನಂಟು.