ಬೆಂಗಳೂರು,ಸೆ.
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವು ಹಾಗೂ ಹೆಣಗಳ ಹೂತ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್ ಐಟಿ) ಧರ್ಮಸ್ಥಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮೃತದೇಹಗಳ ಅಂತ್ಯಕ್ರಿಯೆ ನಡೆಸಿರುವ ದಾಖಲೆಗಳತ್ತ ಗಮನ ಕೇಂದ್ರೀಕರಿಸಿ ತನಿಖೆ ತೀವ್ರಗೊಳಿಸಿದೆ.
ಧರ್ಮಸ್ಥಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶವಗಳ ಅಂತ್ಯಕ್ರಿಯೆಯಲ್ಲಿ ಅಕ್ರಮ ಎಸಗಲಾಗಿದೆ. ಹೆಣಗಳನ್ನು ಹೂತು ಹಾಕಲು ಫೋರ್ಜರಿ ದಾಖಲೆ ಸೃಷ್ಟಿಸಲಾಗಿದೆ ಎಂದು ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ಆರೋಪಿಸಿ,ಎಸ್ಐಟಿ ಕಚೇರಿಗೆ ದಾಖಲೆಗಳನ್ನೂ ಸಲ್ಲಿಸಿದ್ದರು.
ಹೀಗಾಗಿ ಪಂಚಾಯತಿಯಲ್ಲಿರುವ ದಫನ್ ದಾಖಲೆಗಳ ಆಳವಾದ ಪರಿಶೀಲನೆಗೆ ಎಸ್ಐಟಿ ಮುಂದಾಗಿದೆ. ಪ್ರತಿನಿತ್ಯ ಧರ್ಮಸ್ಥಳ ಪಂಚಾಯತಿಯಿಂದ ದಾಖಲೆಗಳನ್ನು ತರಿಸಿಕೊಳ್ಳುತ್ತಿರುವ ಎಸ್ಐಟಿ, ಶವ ಹೂತು ಹಾಕಿದ ವಿವರ, ಯುಡಿಆರ್, ರಶೀದಿಗಳ ಮಾಹಿತಿ ಸಂಗ್ರಹ ಮಾಡುತ್ತಿದೆ.
1987 ರಿಂದ 2025 ರವರೆಗಿನ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿರುವ ಎಸ್ಐಟಿ, ಮಟ್ಟಣ್ಣನವರ್ ಕೊಟ್ಟ ದಾಖಲೆ ಹಾಗೂ ಪಂಚಾಯತ್ ಮೂಲ ದಾಖಲೆಗಳ ಪರಿಶೀಲನೆ ಮಾಡುತ್ತಿದೆ. ಶವ ದಫನ್ ದಾಖಲೆಗಳಲ್ಲಿ ಸಹಿ ಹಾಕಿರುವ ವ್ಯಕ್ತಿಗಳಿಗೂ ವಿಚಾರಣೆ ಬಿಸಿ ತಟ್ಟಲು ಶುರುವಾಗಿದೆ. ಮಾಜಿ ಅಧ್ಯಕ್ಷರು, ಪಿಡಿಓ, ಸಿಬ್ಬಂದಿಗಳನ್ನು ಪ್ರತಿ ನಿತ್ಯ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಈ ಮೂಲಕ ಧರ್ಮಸ್ಥಳ ಬುರುಡೆ ಕೇಸ್ನ ಎಲ್ಲಾ ಆರೋಪಗಳಿಗೆ ಸ್ಪಷ್ಟತೆ ಕೊಡಲು ಎಸ್ಐಟಿ ಮುಂದಾಗಿದೆ.
ಎಸ್ಐಟಿ ಶೋಧ:
ಬುರುಡೆ ಪ್ರಕರಣ ಸಂಬಂಧ ಬಂಗ್ಲೆಗುಡ್ಡ ರಹಸ್ಯ ಬಯಲು ಮಾಡಲು ಎಸ್ಐಟಿ ಅಧಿಕಾರಿಗಳು ಪಣತೊಟ್ಟಿದ್ದು, ಗೋಪ್ಯವಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ನಿನ್ನೆ ಸಂಜೆ ವೇಳೆ ಮತ್ತೆ ಬಂಗ್ಲೆಗುಡ್ಡದಲ್ಲಿ ಎಸ್ಐಟಿ ಅಧಿಕಾರಿಗಳು ಹಿರಿಯ ಅಧಿಕಾರಿ ಸೈಮನ್ ನೇತೃತ್ವದಲ್ಲಿ ಶೋಧ ಕಾರ್ಯ ನಡೆಯುತ್ತಿದ್ದು, ಸೌಜನ್ಯ ಮಾವ ವಿಠಲ ಗೌಡ ಹೇಳಿಕೆಯ ಸತ್ಯಾಸತ್ಯತೆ ತಿಳಿಯಲು ಈ ಕ್ರಮ ಕೈಗೊಳ್ಳಲಾಗಿದೆ.
ವಿಠಲ ಗೌಡ ಹೇಳಿದ್ದೇನು:
ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದ ವಿಠಲ ಗೌಡ, ಬಂಗ್ಲಗುಡ್ಡೆಗೆ ಎರಡು ಸಲ ಸ್ಥಳ ಮಹಜರಿಗೆ ನನ್ನನ್ನು ಕರೆದುಕೊಂಡು ಹೋಗಿದ್ದು, ಅಲ್ಲಿ ಮೂರು ಮನುಷ್ಯರ ಅಸ್ಥಿಪಂಜರಗಳು ಸಿಕ್ಕಿವೆ. ಹತ್ತಿರ ಹತ್ತಿರ ಹತ್ತು ಅಡಿಗಳ ಜಾಗದಲ್ಲಿ ಅವುಗಳು ಸಿಕ್ಕಿವೆ. ಎರಡನೇ ಬಾರಿಗೆ ಸ್ಥಳ ಮಹಜರಿಗೆ ಹೋದಾಗ ಹೆಣಗಳ ರಾಶಿ ಸಿಕ್ಕಿದೆ. ಕಣ್ಣಿಗೆ ಕಂಡದ್ದು 5 ಹೆಣಗಳು. ಸಣ್ಣ ಮಗುವಿನ ಎಲುಬು ಇರುವುದು ಗೋಚರ ಆಗತ್ತು ಎಂದು ಹೇಳಿಕೊಂಡಿದ್ದರು.
ತಿಮರೋಡಿ ಮತ್ತೆ ದೂರು:
ಈ ನಡುವೆ ಇವುಗಳೆಲ್ಲ ಅಸಹಜ ಸಾವುಗಳಾಗಿವೆ. ಹೀಗಾಗಿ ಇವುಗಳನ್ನುಕೊಲೆ ಪ್ರಕರಣಗಳಾಗಿ ಪರಿಗಣಿಸಿ ಎಫ್ಐಆರ್ ದಾಖಲಿಸುವಂತೆ ಮಹೇಶ್ ಶೆಟ್ಟಿ ತಿಮರೋಡಿ ಎಸ್ಐಟಿಗೆ ಮನವಿ ಮಾಡಿದ್ದಾರೆ. 2006ರಿಂದ 2010 ರವರೆಗೆ ಧರ್ಮಸ್ಥಳದ ವಸತಿ ಗೃಹಗಳಲ್ಲಿ ಅನೇಕ ಸಂಶಯಾಸ್ಪದ ಸಾವುಗಳು ಸಂಭವಿಸಿವೆ. ಧರ್ಮಸ್ಥಳದ ಗಾಯತ್ರಿ, ಶರಾವತಿ, ವೈಶಾಲಿ ವಸತಿಗೃಹದಲ್ಲಿ ಈ ಸಾವುಗಳು ಸಂಭವಿಸಿವೆ. ಆದರೆ, ಅಪರಿಚಿತ ಶವಗಳನ್ನು ಬೇಕೆಂದೇ ಅನಾಥ ಶವಗಳೆಂದು ಘೋಷಿಸಲಾಗಿದೆ. ತಕ್ಷಣವೇ ಗ್ರಾಮ ಪಂಚಾಯತ್ ಮುಖಾಂತರ ಸಮಾಧಿ ಮಾಡಲಾಗಿದೆ. ಇವುಗಳು ಎಲ್ಲಾ ದೃಷ್ಟಿಯಿಂದ ಸಂಭಾವ್ಯ ಕೊಲೆ ಪ್ರಕರಣಗಳೆಂದು ಶಂಕೆ ಮೂಡುತ್ತದೆ ಎಂದು ತಿಮರೋಡಿ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅತಿಥಿ ಗೃಹದಲ್ಲಿ ವ್ಯಕ್ತಿಯ ಮಾಹಿತಿ, ದಾಖಲೆಗಳನ್ನು ಪಡೆದಿರುತ್ತಾರೆ. ಆದರೆ, ಅಥಿತಿಗಳ ವಿವರಗಳನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡಲಾಗಿದೆ. ಅಥವಾ ದಾಖಲೆಗಳನ್ನು ನಾಶಪಡಿಸಿರುವ ಗಂಭೀರ ಅನುಮಾನವಿದೆ. ಹೀಗಾಗಿ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತನಿಖೆ ಮಾಡಬೇಕೆಂದು ತಿಮರೋಡಿ ಮನವಿ ಮಾಡಿದ್ದಾರೆ. ದೂರು ಅರ್ಜಿಯಲ್ಲಿ ನಾಲ್ಕು ಪ್ರತ್ಯೇಕ ಯುಡಿಆರ್ ಪ್ರಕರಣಗಳ ಬಗ್ಗೆ ಉಲ್ಲೇಖಿಸಲಾಗಿದ್ದು, ಈ ಬಗ್ಗೆ ಆರ್ಟಿಐನಿಂದ ಪಡೆದ ದಾಖಲೆಗಳನ್ನು ಸಹ ಸಲ್ಲಿಕೆ ಮಾಡಲಾಗಿದೆ