ಬೆಂಗಳೂರು,ಫೆ.5-
ನಕಲಿ ಚಿನ್ನಾಭರಣಗಳನ್ನು ನೀಡಿ ಅಸಲಿ ಆಭರಣಗಳನ್ನು ದೋಚಿ ಪರಾರಿ ಆಗಿರುವ ಅಜ್ಜಿ ಗ್ಯಾಂಗ್ ಅನ್ನು ಬಂಧಿಸಲು ತಂಡಗಳನ್ನು ರಚಿಸಿರುವ ಅಮೃತಹಳ್ಳಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಅಮೃತಹಳ್ಳಿಯ ಧನಲಕ್ಷ್ಮಿ ಜ್ಯುವೆಲರ್ಸ್ನಲ್ಲಿ 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಖರೀದಿ ಮಾಡಿರುವ ಅಜ್ಜಿ ಗ್ಯಾಂಗ್ ತಲೆಮರೆಸಿಕೊಂಡಿದೆ.
ಮಗಳ ಮದುವೆಗೆ ಆಭರಣ ಖರೀದಿಸಲು ಬಂದಿದ್ದೇವೆ ಎಂದು ಹೇಳಿ ಅಂಗಡಿಯಲ್ಲಿದ್ದ ಚಿನ್ನ ದೋಚಿದ್ದಾರೆ. ಅಜ್ಜಿಯ ಜತೆಗೆ ರಾಹುಲ್ ಎಂಬಾತ ಬಂದಿದ್ದ. ಅಂಗಡಿ ಸಿಬ್ಬಂದಿಯಲ್ಲಿ ನಾವು ನಾಗವಾರದ ನಿವಾಸಿ ಎಂದು ಹೇಳಿಕೊಂಡಿದ್ದು, ಮದುವೆ ಇದೆ, ನನ್ನ ತಾಯಿಯ ಹಳೆ ಆಭರಣ ಕೊಟ್ಟು ಹೊಸ ಒಡವೆ ಖರೀದಿ ಮಾಡಬೇಕು ಎಂದಿದ್ದಾರೆ. ಬಳಿಕ ಅಜ್ಜಿ ಬ್ಯಾಗಿಂದ 240 ಗ್ರಾಂ ತೂಕದ ಗುಂಡಿನ ಸರ ಹೊರ ತೆಗೆದಿದ್ದಾರೆ.
ಅಜ್ಜಿ ನೀಡಿದ ಗುಂಡಿನ ಸರವನ್ನು ಪರೀಕ್ಷಿಸಿದಾಗ ಅಸಲಿ ಚಿನ್ನ ಎನ್ನುವುದು ತಿಳಿದು ಬಂದಿದೆ. ಬಳಿಕ ಅಜ್ಜಿ ಗ್ಯಾಂಗ್ ನಾಳೆ ಬಂದು ಚಿನ್ನ ಖರೀದಿ ಮಾಡುತ್ತೇವೆ ಎಂದು ಅಲ್ಲಿಂದ ಹೊರಟು ಹೋಗಿದ್ದಾರೆ. ಮರುದಿನ ನಕಲಿ ಗುಂಡಿನ ಸರ ತೆಗೆದುಕೊಂಡು ಬಂದು ಚಿನ್ನದಂಗಡಿ ಮಾಲೀಕನಿಗೆ ನೀಡಿದ್ದಾರೆ. ಮಾಲೀಕ ಮೋಸ ಹೋಗಿರುವುದು ಗೊತ್ತಾಗಿದೆ.
ಏಕೆಂದರೆ ನಿನ್ನೆ ಪರೀಕ್ಷಿಸಿದ ಚಿನ್ನದ ಸರವೆಂದು ಮತ್ತೆ ಪರಿಶೀಲಿಸದೆ ತೆಗೆದುಕೊಂಡಿದ್ದಾನೆ. ಗುಂಡಿನ ಸರವನ್ನೇ ಬಂಡವಾಳ ಮಾಡಿಕೊಂಡು ಅಜ್ಜಿ ಗ್ಯಾಂಗ್ ಧನಲಕ್ಷಿ ಜ್ಯುವೆಲರ್ಸ್ನಲ್ಲಿ 10 ಲಕ್ಷ ರೂ ಶಾಪಿಂಗ್ ಮಾಡಿದ್ದಾರೆ. ಉಂಗುರ, ಓಲೆ, ಸರ ಸೇರಿದಂತೆ 168 ಗ್ರಾಂ ತೂಕದ ಅಸಲಿ ಆಭರಣ ಖರೀದಿ ಮಾಡಿದ್ದಾರೆ.
ಮಗಳು ಗಂಡನ ಮನೆಗೆ ಹೋಗುತ್ತಾಳೆ ಎಂದು ಬೆಳ್ಳಿ ದೀಪ, ಕುಂಕುಮ ಬಟ್ಟಲು, ಕಾಲಿನ ಗೆಜ್ಜೆ ಖರೀದಿಸಿ ತೆರಳಿದ್ದಾರೆ. ಇದಾದ ಬಳಿಕ ಅಂಗಡಿ ಮಾಲೀಕ ಅಜ್ಜಿ ನೀಡಿದ್ದ ಸರ ಮಾರಾಟಕ್ಕೆಂದು ಚಿಕ್ಕಪೇಟೆಗೆ ಬಂದಾಗ ನಕಲಿ ಸರ ಎನ್ನುವುದು ಗೊತ್ತಾಗಿದ್ದು, ತಾನು ಮೋಸ ಹೋಗಿರುವುದು ಅರಿವಾಗಿದೆ. ಕೂಡಲೇ ಚಿನ್ನದಂಗಡಿ ಮಾಲೀಕ ಓಂ ಪ್ರಕಾಶ್ ಅಮೃತಹಳ್ಳಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೀಗ ಅಂಗಡಿಯ ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

