ಬೆಂಗಳೂರು,ಜು.15-
ವಿವಿಧ ಅಪರಾಧ ಪ್ರಕರಣಗಳಲ್ಲಿ ಸಿಲುಕಿ ಕೋರ್ಟ್ ನಲ್ಲಿ ಜಾಮೀನು ಪಡೆಯಲು ಪರದಾಡುವರನ್ನು ಸಂಪರ್ಕಿಸಿ ದುಬಾರಿ ಮೊತ್ತ ಪಡೆದು ನಕಲಿ ಆಧಾರ್ ಕಾರ್ಡ್ ಗಳು, ಆರ್ ಟಿಸಿ, ಎಂ.ಆರ್.ದಾಖಲೆಗಳ ಮೂಲಕ ಜಾಮೀನು ನೀಡಿ ಪರಾರಿಯಾಗುತ್ತಿದ ಐನಾತಿ ವಂಚಕರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ
ವಿಜಯನಗರದ ಹೂವಿನಡಗಲಿಯ ರಫೀ(35)ಯಲಹಂಕದ ಸಿಂಗನಹಳ್ಳಿಯ ಪ್ರವೀಣ್ ಕುಮಾರ್(32)ತಿಪಟೂರು ತಾಲೂಕಿನ ತಿಬ್ಬನಹಳ್ಳಿಯ ಅಭಿಷೇಕ್(33)ಆನೇಕಲ್ ನ ಮೈಸೂರಮ್ಮನ ದೊಡ್ಡಿಯ ಗೋವಿಂದ ನಾಯಕ್(37) ಮಾಗಡಿ ತಾಲೂಕಿನ ಚೌಡನ ಪಾಳ್ಯದ ದೊರೆರಾಜ್ (32) ಬಿಟಿಎಂ ಲೇಔಟ್ ನ ಅಬೀದ್ ವಾಸೀಂ(48) ಯಶವಂತಪುರದ ಅಹಮ್ಮದ್ ಜುಬೇರ್(23)ಹಾಗೂ ತುಮಕೂರು ಜಿಲ್ಲೆಯ ತಾವರೆಕೆರೆಯ ಗೋವಿಂದರಾಜು(32) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ 47 ನಕಲಿ ಆಧಾರ್ ಕಾರ್ಡ್‍ಗಳು, 122 ವಿವಿದ ರೀತಿಯ ನಕಲಿ ದಾಖಲಾತಿಗಳು, ನಕಲಿ ಸ್ಟ್ಯಾಂಫ್ ಪೇಪರ್ 1 ಪೆನ್‍ಡ್ರೈವ್ ಹಾಗೂ 7 ಮೊಬೈಲ್‍ಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ,ಹಲಸೂರುಗೇಟ್ ನ 4ನೇ ಎಸಿಜೆಎಂ ನ್ಯಾಯಾಲಯದ ಶಿರಸ್ತೇದಾರ್ ಸೆಲ್ವರಾಜ್ ನೀಡಿದ ಮಾಹಿತಿ ಆಧರಿಸಿ ಈ ಕಾರ್ಯಾಚರಣೆ ನಡೆಸಲಾಯಿತು ಎಂದು ಹೇಳಿದರು
ಸೆಲ್ವರಾಜ್ ಅವರು ನಕಲಿ ಜಮೀನಿನ ದಾಖಲಾತಿಗಳನ್ನು ಸಲ್ಲಿಸಿ ನ್ಯಾಯಾಲಯದಲ್ಲಿ ಆರೋಪಿಗಳ ಪರವಾಗಿ ಜಾಮೀನು ನೀಡಲು ಬಂದಿದ್ದ ಓರ್ವ ವ್ಯಕ್ತಿಯ ವಿರುದ್ಧ, ಕಾನೂನು ಕ್ರಮ ಕೈಗೊಳ್ಳುವಂತೆ ಸಲ್ಲಿಸಿದ ದೂರಿನ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ ಹಲಸೂರುಗೇಟ್ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಪ್ರಕರಣದ ತನಿಖೆಯನ್ನು ಕೈಗೊಂಡು ಓರ್ವನನ್ನು 4ನೇ ಎಸಿಜೆಎಂ ನ್ಯಾಯಾಲಯದ ಬಳಿ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಹಣಗಳಿಸುವ ಉದ್ದೇಶದಿಂದ ನಕಲಿ ಜಮೀನಿನ ದಾಖಲಾತಿಗಳು, ನಕಲಿ ಗುರುತಿನ ಚೀಟಿಗಳನ್ನು ಸೃಷ್ಠಿಸಿ ಮಾನ್ಯ ನ್ಯಾಯಾಲಯದಲ್ಲಿ ಆರೋಪಿಗಳ ಪರವಾಗಿ ಜಾಮೀನು ನೀಡುತ್ತಿದ್ದುದಾಗಿ ತಪ್ಪೊಪ್ಪಿಕೊಂಡು ಈ ರೀತಿಯ ಕೃತ್ಯಗಳಲ್ಲಿ ಸಹಕರಿಸಿದ ಇತರೆ ಏಳು ಸಹಚರರ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡಿದ್ದು,ಅದನ್ನು ಆಧರಿಸಿ ಉಳಿದವರನ್ನು ಬಂಧಿಸಲಾಗಿದೆ.
ಬಂಧಿತರಲ್ಲಿ ರಫೀ ಹೊರತುಪಡಿಸಿ ಉಳಿದೆಲ್ಲರೂ ಪದವೀಧರರಾಗಿದ್ದು, ಹೆಚ್ಚಿನ ಹಣದಾಸೆಗೆ ಇಂತಹ ಕೃತ್ಯದಲ್ಲಿ ತೊಡಗಿದ್ದರು,
ಇವರ ಜಾಲದ ಜೊತೆ ಇನ್ನೂ ಹಲವರು ಭಾಗಿಯಾಗಿ, ನಕಲಿ ದಾಖಲಾತಿಗಳನ್ನು ಸೃಷ್ಠಿಸಿ ಹಾಗೂ ಶೂರಿಟಿ ನೀಡುತ್ತಿದ್ದು ಅವರುಗಳ ಪತ್ತೆ ಕಾರ್ಯ ಮುಂದುವರೆದಿದ್ದು ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದರು.