ಬೆಂಗಳೂರು,ಆ.2-
ಸ್ಯಾಂಡಲ್ ವುಡ್ ನಟಿ ಮೋಹಕ ತಾರೆ ರಮ್ಯಾ ಅವರಿಗೆ ಅಶ್ಲೀಲ ಮತ್ತು ಆಕ್ಷೇಪಾರ್ಹ ಸಂದೇಶ ಕಳುಹಿಸಿದವರಿಗೆ ಕಾದಿದೆ ಗ್ರಹಚಾರ.
ರಮ್ಯಾ ಅವರು ನೀಡಿದ ದೂರು ಅನ್ವಯ ಸಾಮಾಜಿಕ ಜಾಲತಾಣದಲ್ಲಿ ಬಂದ ಕಾಮೆಂಟ್, ಮೆಸೇಜ್‌ಗಳನ್ನು ಪರಿಶೀಲಿಸಿ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದ 13 ಮಂದಿಯನ್ನು ಗುರುತಿಸಿ ಇಬ್ಬರನ್ನು ಬಂಧಿಸಿ ಉಳಿದವರನ್ನು ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ.
ಪ್ರಕರಣದಲ್ಲಿ ಬಂಧಿತರಾಗಿರುವವರು ಅಕ್ಕಪಕ್ಕದ ಜಿಲ್ಲೆಗಳವರು, ಪ್ರಕರಣ ಸಂಬಂಧ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುವ ಈ ರೀತಿಯ ಕೃತ್ಯಗಳನ್ನು ತಡೆಯಲು ಮಾನಿಟರಿಂಗ್ ಟೀಂಗಳಿಗೆ ಹೆಚ್ಚಿನ ತರಬೇತಿ ಕೊಡಿಸಿ ಚುರುಕುಗೊಳಿಸಲಾಗಿದೆ. ಸಿಸಿಬಿ ಹಾಗೂ ನಗರದ 8 ಸೈಬರ್ ಕ್ರೈಂ ಠಾಣೆಗಳ ಸಿಬ್ಬಂದಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮುಂದೆಯೂ ಸಹ ಯಾರಾದರೂ ಈ ರೀತಿ ಇತರರ ಬಗ್ಗೆ ಅಶ್ಲೀಲ ಸಂದೇಶ, ಕಾಮೆಂಟ್ ರವಾನಿಸಿದರೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಬಳ್ಳಾರಿ, ಚಿತ್ರದುರ್ಗ, ಬೆಂಗಳೂರು, ಕೋಲಾರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿರುವ ಸುಮಾರು 50 ಖಾತೆಗಳ ಬಳಕೆದಾರರನ್ನು ಪತ್ತೆಹಚ್ಚಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ನಗರದ ಹೊರವಲಯದಲ್ಲಿನ ಕೆಲ ವ್ಯಕ್ತಿಗಳ ಖಾತೆಗಳಿಂದಲೂ ಮೆಸೇಜ್ ಹಾಗೂ ಕಾಮೆಂಟ್ ಮಾಡಿರುವುದು ತಿಳಿದು ಬಂದಿದ್ದು, ಅವುಗಳ ಬಳಕೆದಾರರ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಮಾಹಿತಿ ನೀಡಿದ್ದಾರೆ.
ಮೂಲಗಳ ಪ್ರಕಾರ ಬಳ್ಳಾರಿ ಮೂಲದ ಓರ್ವ, ಚಿತ್ರದುರ್ಗದ ಮೂಲದ ಓರ್ವ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
43 ಇನ್ಸಾಗ್ರಾಮ್ ಅಕೌಂಟ್ ಬೆನ್ನತ್ತಿರುವ ಸಿಸಿಬಿ ಪೊಲೀಸರು ನಟಿ ರಮ್ಯಾ ಬಳಿ ಅಶ್ಲೀಲ ಮೆಸೇಜ್ ಅಕೌಂಟ್ ಗಳ ಕುರಿತು ಮಾಹಿತಿ ಪಡೆದಿದ್ದಾರೆ. ಯಾವ ಪೇಜ್‌ಗಳಿಂದ ಅಶ್ಲೀಲ ಮೆಸೇಜ್‌ಗಳು ಬಂದಿದ್ದವು? ಯಾವ ನಂಬರ್‌ಗಳಿಂದ ಬೆದರಿಕೆ ಕರೆ ಬಂದಿತ್ತು? ಯಾವ ಅಕೌಂಟ್‌ಗಳಿಂದ ಅಶ್ಲೀಲ ಮೆಸೇಜುಗಳು ಬಂದಿದ್ದವು ಇತ್ಯಾದಿ ಎಲ್ಲದರ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.
ದೂರು ನೀಡಿದ್ದ ರಮ್ಯಾ:
ನಟ ದರ್ಶನ್ ಅಭಿಮಾನಿಗಳು ಎಂದು ಹೇಳಿಕೊಂಡು ಅಶ್ಲೀಲ ಸಂದೇಶ ರವಾನೆ, ಕಾಮೆಂಟ್ ಮಾಡುತ್ತಿದ್ದವರ ವಿರುದ್ಧ ಜುಲೈ 28ರಂದು ಖುದ್ದು ರಮ್ಯಾ ಅವರೇ ನಗರ ಪೊಲೀಸ್ ಆಯುಕ್ತರು ಹಾಗೂ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.
ಅದರನ್ವಯ ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆ ಕಾಯ್ದೆ 2023ರ 351(2) (ಕ್ರಿಮಿನಲ್ ಬೆದರಿಕೆಯ ಉದ್ದೇಶದ ಅಪರಾಧ), 351(3) (ಸಾವು, ತೀವ್ರ ನೋವುಂಟು ಮಾಡುವ ಉದ್ದೇಶದ ಕ್ರಿಮಿನಲ್ ಬೆದರಿಕೆ), 352 (ಉದ್ದೇಶಪೂರ್ವಕ ಅವಮಾನದ ಮೂಲಕ ಶಾಂತಿಭಂಗದ ಯತ್ನ), 75(1) (ಲೈಂಗಿಕ ಕಿರುಕುಳ) 75(1)(IV) (ಲೈಂಗಿಕ ಟೀಕೆ) ಹಾಗೂ 79 (ಮಹಿಳೆಯ ಗೌರವಕ್ಕೆ ಧಕ್ಕೆ) ಆರೋಪದಡಿಯಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಅಕೌಂಟ್ ಡಿಟೇಲ್ಸ್:
ಸಿಸಿಬಿ ಸೈಬರ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿ ತನಿಖೆ ಕೈಗೊಳ್ಳುವ ವೇಳೆಗೆ ಬಹುತೇತ ಅಕೌಂಟ್‍ಗಳು ಡಿಲಿಟ್ ಆಗಿದ್ದವು. ಅಷ್ಟರಲ್ಲಿ ಪೊಲೀಸರು ಸಂಬಂಧಪಟ್ಟ ಸಂಸ್ಥೆಗಳಿಗೆ ಪತ್ರ ಬರೆದು ಐಪಿ ಅಡ್ರೆಸ್‍ಗಳು ಅಕೌಂಟ್ ಡಿಟೇಲ್ಸ್ ಕೊಡುವಂತೆ ಮನವಿ ಮಾಡಿದ್ದರು.
ಪೊಲೀಸರ ಮನವಿಯಂತೆ ಸಂಬಂಧಪಟ್ಟ ಸಂಸ್ಥೆಗಳು ಡಿಲಿಟ್ ಆಗಿದ್ದ ಅಕೌಂಟ್‍ಗಳ ಎಲ್ಲಾ ಮಾಹಿತಿಯನ್ನು ಸಿಸಿಬಿ ಪೊಲೀಸರಿಗೆ ನೀಡಿವೆ. ಈ ಅಶ್ಲೀಲ ಕಮೆಂಟ್ ಹಾಕಿ, ಅಕೌಂಟ್ ಡಿಲಿಟ್ ಮಾಡಿ ಆರಾಮಾಗಿದ್ದವರಿಗೆ ಪೊಲೀಸರು ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 40 ಮಂದಿಯ ಚಹರೆ ಗುರುತು ಮಾಡಲಾಗಿದ್ದು ಅವರ ಬಂಧನಕ್ಕೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ
Previous ArticleC.M.ಭಯೋತ್ಪಾದಕ ಕೃತ್ಯ ಎಂದ ಘಟನೆ ಯಾವುದು ಗೊತ್ತಾ ?
Next Article ಧರ್ಮಸ್ಥಳ ಪ್ರಕರಣಕ್ಕೆ ಸ್ಪೋಟಕ ತಿರುವು !