ಬೆಂಗಳೂರು:ಸಾಧು ವೇಷ ಧರಿಸಿ ಆಶೀರ್ವಾದದ ನೆಪದಲ್ಲಿ ವೃದ್ಧರೊಬ್ಬರಿಗೆ ವಿಭೂತಿ ನೀಡಿದ ನಕಲಿ ಸಾಧುಗಳು, ಚಿನ್ನದ ಉಂಗುರ ದೋಚಿ ಪರಾರಿಯಾಗಿರುವ ಘಟನೆ ಸದಾಶಿವನಗರದಲ್ಲಿ ನಡೆದಿದೆ.
ಈ ಸಂಬಂಧ ದಾಸರಹಳ್ಳಿ ಮಂಜುನಾಥ್ (64) ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿರುವ ಸದಾಶಿವನಗರ ಪೊಲೀಸರು ನಕಲಿ ಸಾಧುಗಳ ಬಂಧನಕ್ಕೆ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಕೆಲ ದಿನಗಳ ಹಿಂದೆ ಕೆಲಸದ ನಿಮಿತ್ತ ಶಿವಾಜಿನಗರಕ್ಕೆ ತೆರಳಿದ್ದ ಮಂಜುನಾಥ್ ಅವರು ರಾತ್ರಿ 7.15ರ ಸುಮಾರಿಗೆ ಬಿಎಂಟಿಸಿ ಬಸ್‌ನಲ್ಲಿ ವಾಪಸ್ ಬಂದು ಮೇಖ್ರಿ ವೃತ್ತ ಬಸ್ ನಿಲ್ದಾಣದಲ್ಲಿ ಇಳಿದಿದ್ದರು. ಅದೇ ಬಸ್‌ನಲ್ಲಿದ್ದ ನಾಲ್ವರು ನಾಗಾ ಸಾಧುಗಳ ವೇಷದಲ್ಲಿದ್ದವರು ಇಳಿದುಕೊಂಡಿದ್ದರು. ದುರಾದೃಷ್ಟಕ್ಕೆ ಬಸ್ ನಿಲ್ದಾಣದಲ್ಲಿ ಬೇರೆ ಯಾರೂ ಪ್ರಯಾಣಿಕರು ಇರಲಿಲ್ಲ.ಈ ಸಂದರ್ಭವನ್ನು ದುರುಪಯೋಗ ಮಾಡಿಕೊಂಡ ಸಾಧುಗಳು ‘ಚಿಕ್ಕಬಳ್ಳಾಪುರಕ್ಕೆ ತೆರಳಲು ಯಾವ ಬಸ್‌ನಲ್ಲಿ ಪ್ರಯಾಣಿಸಬೇಕು’ ಎಂದು ಮಾತುಕತೆ ಆರಂಭಿಸಿದ್ದರು. ಬಳಿಕ ಊಟ ಮಾಡಲು ಏನಾದರೂ ಸಹಾಯ ಮಾಡಿ ಎಂದಿದ್ದರು. ಇದನ್ನು ಕೇಳಿದ ಬಳಿಕ ಮಂಜುನಾಥ್, ಉದಾರತೆಯಿಂದ ತಮ್ಮ ಪರ್ಸ್‌ನಲ್ಲಿದ್ದ 50 ರೂ.ನೀಡಿದ್ದರು.ಹಣ ಪಡೆದ ಬಳಿಕ ಆಶೀರ್ವಾದ ತೆಗೆದುಕೊಳ್ಳಿ ಎಂದ ನಾಗಾ ಸಾಧುಗಳು, 50 ರೂ.ನೋಟಿಗೆ ವಿಭೂತಿ ಹಾಕಿ ವಾಪಸ್ ನೀಡಿದ್ದರು. ಬಳಿಕ ಹಣೆಗೆ ವಿಭೂತಿ ಹಚ್ಚಿ ಪರ್ಸ್ ತೆಗೆಯುವಂತೆ ಸೂಚಿಸಿದ್ದರು. ಪರ್ಸ್‌ನಲ್ಲಿದ್ದ ಹಣಕ್ಕೂ ವಿಭೂತಿ ಹಾಕಿ ವಾಪಸ್ ನೀಡಿದ್ದರು. ಕಡೆಯದಾಗಿ ಕೈ ಬೆರಳಲ್ಲಿದ್ದ ಉಂಗುರ ತೆಗೆಯುವಂತೆ ಹೇಳಿದ್ದರು. ವಾಪಸ್ ಕೊಡಲಿದ್ದಾರೆ ಎಂದುಕೊಂಡಿದ್ದ ಮಂಜುನಾಥ್, ಉಂಗುರ ತೆಗೆದುಕೊಟ್ಟಿದ್ದರು. ಆದರೆ, ಉಂಗುರಕ್ಕೆ ವಿಭೂತಿ ಹಾಕಿ ಮಂತ್ರಿಸುವ ನೆಪದಲ್ಲಿ ಬಾಯೊಳಗೆ ಹಾಕಿಕೊಂಡು ಅಲ್ಲಿಂದ ಹೊರಟುಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಂಜುನಾಥ್‌ಗೆ ಪ್ರಜ್ಞೆತಪ್ಪಿದಂತಾಗಿ ಏನು ನಡೆಯುತ್ತಿದೆ ಎಂಬುದರ ಅರಿವಾಗುವಷ್ಟರಲ್ಲಿ ನಕಲಿ ಸಾಧುಗಳು ಉಂಗುರವನ್ನು ಬಾಯಿಗೆ ಹಾಕಿಕೊಂಡು ಹೊರಟು ಹೋಗಿದ್ದರು. ಸಾಧುಗಳು ಅಲ್ಲಿಂದ ತೆರಳಿದ ಕೆಲ ನಿಮಿಷಗಳ ಬಳಿಕ ಮಂಜುನಾಥ್ ಎಚ್ಚರಗೊಂಡು, ಠಾಣೆಗೆ ಬಂದು ದೂರು ನೀಡಿದ್ದರು.
Previous Articleಮದರಸಾದ ಮೌಲ್ವಿಗಳಿಗೆ ಕನ್ನಡ ಕಲಿಕೆ
Next Article ಡೆತ್ ನೋಟ್ ನಲ್ಲಿ ಸಂಸದ ಡಾ.ಸುಧಾಕರ್ ಹೆಸರು !