ಬೆಂಗಳೂರು,ಜು.22-
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಹಗರಣಕ್ಕೂ ನನಗೂ ಸಂಬಂಧವೇ ಇಲ್ಲ ಎಂದ ಮೇಲೆ ನಾನೇಕೆ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಕ್ಷದವರನ್ನು ಪ್ರಶ್ನಿಸಿದ್ದಾರೆ.
ಅಕ್ರಮ ಕುರಿತಂತೆ ವಿಧಾನ ಪರಿಷತ್ತಿನಲ್ಲಿ ನಿಯಮ 68ರಡಿ ಲೆ ಸುದೀರ್ಘ ಉತ್ತರ ನೀಡಿದ ಅವರು ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ನಡೆದಿರುವ ಪ್ರಕರಣಕ್ಕೂ ನನಗೂ ಸಂಬಂಧವೇ ಇಲ್ಲ. ಆದರೂ ಪ್ರತಿಪಕ್ಷದವರು ನನ್ನ ರಾಜೀನಾಮೆಯನ್ನು ಕೇಳುತ್ತಿರುವುದು ಆಶ್ಚರ್ಯ ಉಂಟು ಮಾಡಿದೆ ಎಂದು ಹೇಳಿದರು.
ಈ ಹೇಳಿಕೆಯಿಂದ ಸಿಡಿಮಿಡಿಗೊಂಡ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಮುಖ್ಯಮಂತ್ರಿಗಳು ನುಣುಚಿಕೊಳ್ಳುವ ಯತ್ನ ಮಾಡುತ್ತಿದ್ದಾರೆ ಎಂದು ಹೇಳಿದ್ದರಿಂದ ಸದನದಲ್ಲಿ ಕೋಲಾಹಲ, ಗದ್ದಲ, ಮಾತಿನ ಚಕಮಕಿ, ಆರೋಪ, ಪ್ರತ್ಯಾರೋಪ ನಡೆಯಿತು.
ಇದರ ನಡುವೆ ಮಾತನಾಡಿದ ಸಿ.ಟಿ.ರವಿ, ಹಗರಣ ನಡೆದಿರುವುದು ಸುಳ್ಳಾ? ಹಾಗಾದರೆ ಮಾಜಿ ಸಚಿವ ಬಿ.ನಾಗೇಂದ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು ಏಕೆ? ಶಾಸಕ ಬಸನಗೌಡ ದದ್ದಲ್ ಇಡಿ ವಿಚಾರಣೆ ಎದುರಿಸಿದ್ದು ಸುಳ್ಳಾ? ಎಂದು ಪ್ರಶ್ನೆ ಮಾಡಿದರು.
ಇದಕ್ಕೆ ದನಿಗೂಡಿಸಿದ ಎನ್.ರವಿಕುಮಾರ್ ಮುಖ್ಯಮಂತ್ರಿಗಳು ಹಗರಣ ನಡೆದಿಲ್ಲ ಎಂದು ಸದನಕ್ಕೆ ಸುಳ್ಳು ಹೇಳುತ್ತಿದ್ದಾರೆ. ಅವರ ಸ್ಥಿತಿ ನೋಡಿದರೆ ಅಸಹಾಯಕರಾಗಿದ್ದಾರೆ. ಹೀಗಾಗಿಯೇ ಸಚಿವರು ಮತ್ತು ಸದಸ್ಯರು ಎದ್ದು ನಿಲ್ಲುತ್ತಾರೆಂದು ವ್ಯಂಗ್ಯವಾಡಿದರು.
ಇದರಿಂದ ಆಕ್ರೋಶಗೊಂಡ ಸಿದ್ದರಾಮಯ್ಯ, ಏಯ್ ಕುಳ್ತೊಕೊಳಯ್ಯ ನನಗೂ ಗೊತ್ತು ಎಂದು ಕಿಡಿಕಾರಿದರು ನನ್ನನ್ನು ದಾರಿ ತಪ್ಪಿಸಲೆಂದೇ ಬಿಜೆಪಿಯವರು ಷಡ್ಯಂತರ ಮಾಡುತ್ತಿದ್ದಾರೆ. .
ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ. ನಾನು ಅಕ್ರಮ ನಡೆದಿಲ್ಲ ಎಂದು ಹೇಳೀಯೇ ಇಲ್ಲ. ಇದರಲ್ಲಿ ಯಾರೇ ತಪ್ಪು ಮಾಡಿದರೂ ಶಿಕ್ಷೆಯಾಗುತ್ತದೆ. ಉಪ್ಪು ತಿಂದವನ್ನು ನೀರು ಕುಡಿಯಲೇಬೇಕು ಎಂದು ಹೇಳಿದರು
ಪ್ರಕರಣದಲ್ಲಿ ಯಾರೇ ಭಾಗಿಯಾದರೂ ನ್ಯಾಯಾಲಯದ ಮೂಲಕವೇ ಶಿಕ್ಷೆ ಕೊಡಿಸುತ್ತೇವೆ. ಯಾರನ್ನು ಕೂಡ ರಕ್ಷಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯವರು ಗೋಬೆಲ್ಸ್ ತಂತ್ರಗಾರಿಕೆ ಮಾಡುತ್ತಿದ್ದಾರೆ. ಸುಳ್ಳನ್ನು ನೂರು ಬಾರಿ ಹೇಳಿ ಸತ್ಯ ಮಾಡಲು ಮುಂದಾಗಿದ್ದಾರೆ ಎಂದಾಗ ಪುನಃ ಅಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಭಾರೀ ಗದ್ದಲ ಉಂಟಾಗಿ ಯಾರು ಏನು ಹೇಳುತ್ತಿದ್ದಾರೆ ಎಂಬುದೇ ತಿಳಿಯದಾಯಿತು.
ಆಗ ಆಡಳಿತ ಪಕ್ಷದ ಸದಸ್ಯರು ಎದ್ದು ನಿಂತು ಪ್ರತಿಪಕ್ಷದ ಸದಸ್ಯರನ್ನು ಸದನದಿಂದ ಹೊರ ಹಾಕಿ. ಮುಖ್ಯಮಂತ್ರಿಗಳು ಮಾತನಾಡುತ್ತಿದ್ದರೂ ಅಡ್ಡಿಪಡಿಸುತ್ತಿದ್ದಾರೆ ಎಂದು ಸಭಾಪತಿಗೆ ಮನವಿ ಮಾಡಿದರು.
ಇದರಿಂದ ಸದನದಲ್ಲಿ ಮತ್ತಷ್ಟು ಗದ್ದಲ ಉಂಟಾಯಿತು. ಕನಿಷ್ಟ ಪಕ್ಷ ನನಗೆ ಗೌರವ ಕೊಟ್ಟಾದರೂ ಕುಳಿತುಕೊಳ್ಳಿ ಎಂದು ಸಭಾಪತಿ ಬಸವರಾಜ ಹೊರಟ್ಟಿ ಎದ್ದು ನಿಂತು ಮನವಿ ಮಾಡಿಕೊಂಡರು.
ಇದಾದ ನಂತರ ಮಾತು ಮುಂದುವರೆಸಿದ ಸಿದ್ದರಾಮಯ್ಯ ನನ್ನ ಮುಖಕ್ಕೆ ಮಸಿ ಬಳಿಯಬೇಕು. ಎಸ್ಸಿ-ಎಸ್ಟಿ ಹಿಂದುಳಿದ ವರ್ಗಗಳಿಗೆ ನಮ್ಮ ಸರ್ಕಾರ ವಿರುದ್ದವಾಗಿದೆ ಎಂದು ಬಿಂಬಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಅವರು ಎಂದು ಕೂಡ ಸಾಮಾಜಿಕ ನ್ಯಾಯದ ಪರವಾಗಿದ್ದವರಲ್ಲ. ಸಂವಿಧಾನವನ್ನೇ ವಿರೋಧ ಮಾಡಿದವರು.
ವಾಲ್ಮೀಕಿ ಹಗರಣ ಮುಂದಿಟ್ಟುಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಪಾದಿಸಿದರು
ಎಸ್‌ಟಿ, ಎಸ್‌ಟಿಪಿ-ಟಿಎಸ್‌ಪಿ ಯೋಜನೆಯನ್ನು ಜಾರಿ ತಂದವರು ನಾವು. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದಲ್ಲಿ ಈ ಕಾಯ್ದೆಯನ್ನು ಏಕೆ ಜಾರಿ ಮಾಡಿಲ್ಲ. ಕೇಂದ್ರದಲ್ಲಿ ನಿಮ್ಮ ಮೋದಿ ಸರ್ಕಾರಕ್ಕೂ ಈ ಕಾಯ್ದೆ ಜಾರಿ ಮಾಡಲು ಒತ್ತಡ ಹಾಕಿ ಎಂದು ಸವಾಲು ಹಾಕಿದರು.
ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ಅನೇಕ ಯೋಜನೆಗಳನ್ನು ಜಾರಿ ಮಾಡಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯದಂತೆ ನಮ್ಮ ಸರ್ಕಾರ ನಡೆದುಕೊಳ್ಳುತ್ತದೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಂತೆ ಬಿಜೆಪಿಯ ಎನ್.ರವಿಕುಮಾರ್, ನಾವು ಪರಿಶಿಷ್ಟ ಜಾತಿಗಳ ವಿರೋಧಿಯಲ್ಲ. ಗ್ಯಾರಂಟಿಗೆ ಆ ಸಮುದಾಯದ ಹಣವನ್ನು ಬಳಸಿಕೊಂಡಿದ್ದೀರಿ ಎಂದು ಆರೋಪಿಸಿದರು.
Previous Articleವಾಲ್ಮೀಕಿ ನಿಗಮದಲ್ಲಿ ಇಲ್ಲದ ವ್ಯಕ್ತಿ ಹೆಸರಲ್ಲಿ ನಡೆದಿದ್ದಾದರೂ ಏನು..?
Next Article ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ.